ಬೆಂಗಳೂರು: ಪೊಲೀಸರ ಸೋಗಿನಲ್ಲಿ ಫಿಜಿಯೋ ಥೆರಪಿ ವಿದ್ಯಾರ್ಥಿಯನ್ನು ಅಪಹರಿಸಿ ಲಕ್ಷಾಂತರ ರೂ. ಸುಲಿಗೆ ಮಾಡಿದ್ದ ಮೂವರು ಆರೋಪಿಗಳನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಯಶವಂತಪುರ ನಿವಾಸಿ ರಾಕೇಶ್ ಸಿ ಸೆಬೆನವರ್ (26), ಮಾಗಡಿ ರಸ್ತೆ ಟೋಲ್ ಗೇಟ್ ಬಳಿಯ ಲೋಕೇಶ್ ಕುಮಾರ್ ಸಾಹು(20) ಮತ್ತು ವಿದ್ಯಾರಣ್ಯಪುರ ನಿವಾಸಿ ಅರುಣ್ ಕುಮಾರ್ (27) ಬಂಧಿತರು. 4 ಮೊಬೈಲ್, 1 ಕಾರು, 1 ಬೈಕ್ ವಶಕ್ಕೆ ಪಡೆಯಲಾಗಿದೆ. ಅಚ್ಚರಿ ಎಂದರೆ ಪೊಲೀಸ್ ಬಾತ್ಮೀದಾರರೇ ಆರೋಪಿಗಳಾಗಿದ್ದಾರೆ.
ಮಿಶಾನ್ ಡಿಮಿಲೋ ಎಂಬ ವಿದ್ಯಾರ್ಥಿಯನ್ನು ಅಪಹರಿಸಲಾಗಿತ್ತು. ಮಿಶಾನ್ ಡಿಮಿಲೋ ತಂದೆ ದುಬೈನಲ್ಲಿದ್ದು, ಸಿರಿವಂತರಾಗಿದ್ದಾರೆ. ಈತ ಸದಾಶಿವನಗರದಲ್ಲಿರುವ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ಫಿಜಿಯೋ ಥೆರಪಿ ಓದುತ್ತಿದ್ದು, ಅದೇ ಕಾಲೇಜಿನ ಹಾಸ್ಟೆಲ್‌ನಲ್ಲಿದ್ದರು. ಜು.16ರಂದು ರಾತ್ರಿ 9 ಗಂಟೆ ಸುಮಾರಿಗೆ ಅದೇ ಕಾಲೇ ಜಿನಲ್ಲಿ ನರ್ಸಿಂಗ್ ವಿದ್ಯಾರ್ಥಿ ಮಣಿತೇಜಾ ಎಂಬಾತ ಕರೆ ಮಾಡಿ, ಕೆಳಗೆ ಬನ್ನಿ ಎಂದು ಕರೆಸಿಕೊಂಡು, ಕಾರಿನಲ್ಲಿ ಕೂರಿಸಿಕೊಂಡಿದ್ದಾನೆ. ಆಗ ಕಾರಿನ ಹಿಂಭಾಗದಲ್ಲಿ ಆರೋಪಿಯೊಬ್ಬ ಎಲ್ಲಿಯೂ ನಿಲ್ಲಿಸದೆ ಕಾರು ಚಲಾಯಿಸುವಂತೆ ಸೂಚಿಸಿ, ನಂತರ ಮಯೂರಿ ಸಿಗ್ನಲ್ ಬಳಿ ಹೋಗುತ್ತಿದ್ದಂತೆ ಮಣಿ ತೇಜಾನನ್ನು ಇಳಿಸಿ, ಇತರೆ ಆರೋಪಿಗಳನ್ನು ಕಾರಿ ನಲ್ಲಿ ಹತ್ತಿಸಿಕೊಂಡು ವಿಶಾನ್‌ನನ್ನು ಕರೆದೊಯ್ದಿದ್ದಾರೆ.
ಕ್ರೈಂ ಪೊಲೀಸರೆಂದು ಸುಲಿಗೆ: ಅದನ್ನು ಪ್ರಶ್ನಿಸಿದ ಮಿಶಾನ್‌ಗೆ, “ತಾವು ಸೈಬರ್ ಕ್ರೈಂ ಪೊಲೀಸರು, ನೀನು ಡ್ರಗ್ಸ್ ಮಾರಾಟ ಮಾಡುತ್ತಿದ್ದಿಯಾ? ನಿನ್ನ ವಿರುದ್ಧ ಸೈಬರ್ ವಂಚನೆ ಪ್ರಕರಣ ದಾಖಲಾಗಿದ್ದು, ಠಾಣೆಗೆ ಕರೆದೊಯ್ಯುತ್ತಿದ್ದೇವೆ’ ಎಂದು ಮೊಬೈಲ್ ಕಸಿದುಕೊಂಡಿದ್ದಾರೆ. ಬಳಿಕ ಆನ್‌ಲೈನ್ ಮೂಲಕ 1.71 ಲಕ್ಷ ರೂ. ಅನ್ನು ಮಿಶಾನ್ ಖಾತೆಯಿಂದ ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡು ಜು.17 ರಂದು ತಡರಾತ್ರಿ 12.30ರ ಸುಮಾರಿಗೆ ನ್ಯೂಬಿ ಇ ಎಲ್ ಬಳಿ ಇಳಿಸಿ, ಈ ವಿಚಾರ ಯಾರಿಗೂ ಹೇಳ ಬೇಡ ಎಂದು ಎಚ್ಚರಿಕೆ ನೀಡಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ? : ಆರೋಪಿಗಳು ಪೊಲೀಸ್ ಬಾತ್ಮೀದಾರರಾಗಿದ್ದು, ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಪರಾಧ ಮತ್ತು ಆರೋಪಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಹೀಗಾಗಿಯೇ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಶ್ರೀಮಂತ ಹಾಗೂ ಹೈಫೈ ಲೈಫ್ ನಡೆಸುವ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದರು ಎಂದು ಹೇಳಲಾಗಿದೆ. ಮೊದಲಿಗೆ ಮಣಿತೇಜಾನನ್ನು ಅಪಹರಿಸಿ, ಆತನಿಂದ ಬೈಕ್ ಮತ್ತು ಒಂದಷ್ಟು ನಗದು ಕಸಿದುಕೊಂಡಿದ್ದರು. ಬಳಿಕ ಆತನ ಮೊಬೈಲ್‌ನಿಂದಲೇ ವಿಶಾನ್ ಡಿಮಿಲೋಗೆ ಕರೆ ಮಾಡಿ ಕರೆಸಿಕೊಂಡು ಕೃತ್ಯ ಎಸಗಿದ್ದಾರೆ. ಆರಂಭದಲ್ಲಿ ಮಣಿತೇಜಾನ ಮೇಲೆಯೇ ಅನುಮಾನ ವ್ಯಕ್ತವಾಗಿತ್ತು. ಆದರೆ, ಆತ ಕೂಡ ಸುಲಿಗೆಗೆ ಒಳಗಾಗಿದ್ದಾನೆ ಎಂಬುದು ಗೊತ್ತಾಗಿದೆ. ಆತನಿಂದಲೂ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.