ಬೆಂಗಳೂರು: ಸಿಸಿಬಿ ಪೊಲೀಸರ ಸೋಗಿನಲ್ಲಿ ಮೊಬೈಲ್ ರಿಪೇರಿ ಅಂಗಡಿ ಮಾಲೀಕನ ಅಪಹರಿಸಿ 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಪೊಲೀಸ್ ಬಾತ್ಮೀದಾರ ಸೇರಿ ಐವರು ಅಪಹರಣಕಾರರನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ದ ಪೊಲೀಸರು ಬಂಧಿಸಿದ್ದಾರೆ.
ಶಿವಾಜಿನಗರದ ಮೊಹಮ್ಮದ್ ಖಾಸಿಂ ಅಲಿಯಾಸ್ ಮುಜಾಹಿದ್, ಮುಕ್ತಿಯಾರ್, ವಸೀಂ, ಶಬ್ಬೀರ್ ಮತ್ತು ಶೋಯೆಬ್ ಬಂಧಿತರು. ಆರೋಪಿಗಳು ಸೆ. 27ರಂದು ಜೆ.ಸಿ.ರಸ್ತೆಯ ಮೊಬೈಲ್ ರಿಪೇರಿ ಅಂಗಡಿ ಮಾಲೀಕ ಖಾಲು ಸಿಂಗ್ ಎಂಬಾತನನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.
ಏನಿದು ಪ್ರಕರಣ?: ದೂರುದಾರ ಖಾಲು ಸಿಂಗ್ ನಗರದ ಮಿನರ್ವ ವೃತ್ತದ ಬಳಿ ಮೊಬೈಲ್ ರಿಪೇರಿ ಅಂಗಡಿ ನಡೆಸುತ್ತಿದ್ದು, ತಮ್ಮ ಕಾರನ್ನು ಜೆ.ಸಿ.ರಸ್ತೆಯಲ್ಲಿ ರಿಪೇರಿಗೆ ಬಿಟ್ಟಿದ್ದರು. ಸೆ.27ರಂದು ರಾತ್ರಿ 8 ಗಂಟೆ ಸುಮಾರಿಗೆ ಕಾರನ್ನು ತರಲು ಗ್ಯಾರೇಜ್‌ಗೆ ಹೋಗುತ್ತಿದ್ದರು. ಈ ವೇಳೆ ವಿ.ವಿ.ಪುರಂ ಬಳಿ ಆರೋಪಿ ಖಾಸಿಂ ಹಾಗೂ ಆತನ ಏಳು ಮಂದಿ ಸಹಚರರು ಖಾಲು ಸಿಂಗ್‌ನನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ನಾವು ಸಿಸಿಬಿ ಪೊಲೀಸರು ಎಂದು ಹೇಳಿ, ಖಾಲು ಸಿಂಗ್‌ನನ್ನು ಏಕಾಏಕಿ ಆತನ ಕಾರಿನಲ್ಲೇ ಅಪಹರಿಸಿದ್ದರು.
ಕಾರಿನಲ್ಲಿ ಕರೆದೊಯ್ಯುವಾಗ ‘ನೀನು ಗಾಂಜಾ ಪೂರೈಕೆ ಮಾಡುತ್ತಿರುವ ಬಗ್ಗೆ ನಮಗೆ ಮಾಹಿತಿ ಇದೆ. ಹೀಗಾಗಿ ನಿನ್ನನ್ನು ವಶಕ್ಕೆ ಪಡೆದಿದ್ದೇವೆ’ ಎನ್ನುತ್ತಾ ಖಾಲು ಸಿಂಗ್ ಕಣ್ಣಿಗೆ ಬಟ್ಟೆಕಟ್ಟಿಕೊಂಡು ವಿಲ್ಸನ್ ಗಾರ್ಡನ್‌ನ ಪಾಳು ಮನೆಯೊಂದಕ್ಕೆ ಕರೆದೊಯ್ದರು. ಬಳಿಕ ಆತನ ಮೇಲೆ ಹÇÉೆ ನಡೆಸಿದ್ದಾರೆ. ಬಳಿಕ ಖಾಲು ಸಿಂಗ್‌ನ ಸ್ನೇಹಿತರಿಗೆ ಕರೆ ಮಾಡಿ “ನಾವು ಸಿಸಿಬಿ ಪೊಲೀಸರು. ಮಾದಕವಸ್ತು ಪೂರೈಕೆ ಪ್ರಕರಣದಲ್ಲಿ ಖಾಲು ಸಿಂಗ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದೇವೆ. 5 ಲಕ್ಷ ರೂ. ಕೊಟ್ಟರೆ ಯಾವುದೇ ಕೇಸ್ ಹಾಕದೆ ಆತನನ್ನು ಬಿಟ್ಟು ಕಳುಹಿಸುತ್ತೇವೆ. ಇಲ್ಲವಾದರೆ, ಎನ್‌ಡಿಪಿಎಸ್ ಕೇಸ್ ಅಡಿಯಲ್ಲಿ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸುತ್ತೇವೆ’ ಎಂದು ಬೆದರಿಕೆ ಹಾಕಿದ್ದರು.
ಅದರಿಂದ ಆತಂಕಗೊಂಡ ಖಾಲು ಸಿಂಗ್‌ನ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಸಿಸಿಬಿಗೂ ವಿಚಾರ ಗೊತ್ತಾಗಿದೆ. ಮತ್ತೂಂದೆಡೆ ಸಿಸಿಬಿ ಪೊಲೀಸರಿಗೆ ಅಪಹರಣದ ವಿಚಾರ ತಿಳಿದಿದೆ ಎಂದು ಆರೋಪಿಗಳಿಗೆ ಗೊತ್ತಾಗಿ ಖಾಲು ಸಿಂಗ್‌ನನ್ನು ಬಿಟ್ಟು ಕಳುಹಿಸಿದ್ದರು. ಈ ಸಂಬಂಧ ಖಾಲು ಸಿಂಗ್ ವಿ.ವಿ.ಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಪ್ರಕರಣದ ತನಿಖೆ ಆರಂಭಿಸಿದ ಸಿಸಿಬಿ ಅಧಿಕಾರಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸ್ ಬಾತ್ಮೀದಾರನೇ ಪ್ರಮುಖ ರೂವಾರಿ!:
ಆರೋಪಿಗಳ ಪೈಕಿ ಮೊಹಮ್ಮದ್ ಖಾಸಿಂ ಪೊಲೀಸ್ ಬಾತ್ಮೀದಾರ. ಜೆ.ಸಿ.ರಸ್ತೆ, ಎಸ್.ಪಿ.ರಸ್ತೆ, ಕೆ.ಆರ್.ಮಾರುಕಟ್ಟೆ, ಚಿಕ್ಕಪೇಟೆ ಸೇರಿ ಪ್ರಮುಖ ವ್ಯಾಪಾರ ಸ್ಥಳಗಳಲ್ಲಿ ನಕಲಿ ವಸ್ತುಗಳ ಮಾರಾಟ ಮಾಡುವವರ ಬಳಿ ಸುಲಿಗೆ ಮಾಡುತ್ತಿದ್ದ. ಹಣ ನೀಡಲು ನಿರಾಕರಿಸಿದರೆ ನಕಲಿ ಮಾಲುಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ದಾಳಿ ಮಾಡಿಸಿ ಕೇಸ್ ಹಾಕಿಸುತ್ತಿದ್ದ ಎಂದು ಹೇಳಲಾಗಿದೆ. ಮತ್ತೂಂದೆಡೆ ಈತ ವೃತ್ತಿಪರ ಕಳ್ಳನಾಗಿದ್ದು, ಈ ಹಿಂದೆ ಈತನ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ.