Advertisement

Kichcha Sudeep ಬೆಂಬಲ: ತಿರುಗಿಬಿದ್ದ ಕಾಂಗ್ರೆಸ್‌, ಜೆಡಿಎಸ್‌

10:44 PM Apr 05, 2023 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೆಲವು ನಾಯಕರಿಗೆ ಕಿಚ್ಚ ಸುದೀಪ್‌ ಬೆಂಬಲ ಘೋಷಿಸಿದ ಬೆನ್ನಲ್ಲೇ ವಿವಿಧ ರಾಜಕೀಯ ಪಕ್ಷಗಳ ನಡುವೆ ಬಿರುಸಿನ ಚರ್ಚೆ, ಪರಸ್ಪರ ಕೆಸರೆರಚಾಟವೂ ಆರಂಭವಾಗಿದೆ.

Advertisement

ರಾಜ್ಯದ ಜನರಿಗೆ ತಮ್ಮ ನಾಯಕರ ಮೇಲೆ ನಂಬಿಕೆ ಇಲ್ಲ ಎಂಬುದು ಬಿಜೆಪಿಗೆ ಮನದಟ್ಟಾಗಿದೆ. ಹಾಗಾಗಿ ಅನಿವಾರ್ಯವಾಗಿ ಈಗ ಜನ ಸೇರಿಸಲು ನಾಯಕ ನಟರ ಮೊರೆ ಹೋಗಿದೆ ಎಂದು ವಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾಲೆಳೆದಿವೆ. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಪರಿಶಿಷ್ಟ ಪಂಗಡದ ಸಮುದಾಯದ ಒಬ್ಬ ಯಶಸ್ವಿ ನಾಯಕ ನಟ ಸಾಮಾಜಿಕ ನ್ಯಾಯದ ಪರವಾಗಿರುವ ಬಿಜೆಪಿ ಬೆಂಬಲಿಸಿರುವುದನ್ನು ಕಾಂಗ್ರೆಸ್‌ಗೆ ಅರಗಿಸಿಕೊಳ್ಳಲಾಗುತ್ತಿಲ್ಲ ಎಂದು ತೀಕ್ಷ್ಣವಾಗಿ ಹೇಳಿದೆ.

ನಟರ ಮೇಲೆ ಅವಲಂಬನೆ
ಸುದೀಪ್‌ ಬೆಂಬಲ ಘೋಷಣೆಗೆ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುಜೇìವಾಲ, ರಾಜ್ಯದಲ್ಲಿ ಬಿಜೆಪಿ ದಿವಾಳಿಯಾಗಿದೆ. ಸಿಎಂ ಬೊಮ್ಮಾಯಿ ಮತ್ತು ಉಳಿದ ಬಿಜೆಪಿ ನಾಯಕರ ಮಾತುಗಳನ್ನು ಕೇಳಲು ಜನರೇ ಬರುತ್ತಿಲ್ಲ. ಹಾಗಾಗಿ ಜನರನ್ನು ಸೇರಿಸಲು ಅದು ಈಗ ಸಿನೆಮಾ ನಾಯಕ ನಟರ ಮೇಲೆ ಅವಲಂಬನೆಯಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ನಾಯಕ ನಟರು ಯಾರಿಗೆ ಬೆಂಬಲ ನೀಡಬೇಕು ಎನ್ನುವುದು ಅವರಿಗೆ ಬಿಟ್ಟದ್ದು. ಆದರೆ ಕೆಲವು ಸಲ ಈ ಆಯ್ಕೆ ಅಥವಾ ಬೆಂಬಲದ ಹಿಂದೆ ಐಟಿ-ಇಡಿ ಮತ್ತಿತರ ಒತ್ತಡಗಳೂ ಇರುತ್ತವೆ. ಅದೇನೇ ಇರಲಿ, ರಾಜ್ಯದ ಹಣೆಬರಹ ನಿರ್ಧರಿಸುವವರು ರಾಜ್ಯದ ಜನರೇ ವಿನಾ ಸಿನೆಮಾ ಸ್ಟಾರ್‌ಗಳಲ್ಲ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ಬಿಜೆಪಿಯವರು ತಮ್ಮ ಅಭಿವೃದ್ಧಿ ವೈಫ‌ಲ್ಯಗಳನ್ನು ಮರೆಮಾಚಲು ನಾಯಕ ನಟರನ್ನು ಪ್ರಚಾರಕ್ಕೆ ಕರೆತರುತ್ತಿದ್ದಾರೆ ಅಥವಾ ಬೆಂಬಲ ಪಡೆದುಕೊಳ್ಳುತ್ತಿದ್ದಾರೆ. ಸ್ಟಾರ್‌ಗಳು ಬಂದಾಗ ಅವರ ಅಭಿಮಾನಿಗಳು ಸೇರುತ್ತಾರೆ. ಜೈಕಾರ-ಶಿಳ್ಳೆ ಹಾಕುತ್ತಾರೆ. ಹಲವಾರು ನಟರು ಬೇರೆ ಬೇರೆ ಪಕ್ಷಗಳಿಗೆ ವೈಯಕ್ತಿಕ ಬಾಂಧವ್ಯದ ಹಿನ್ನೆಲೆಯಲ್ಲಿ ಬೆಂಬಲಿಸಲು ನಿರ್ಧರಿಸುತ್ತಾರೆ. ಇದು ಆಯಾ ನಾಯಕ ನಟರ ನಿರ್ಧಾರ. ಆದರೆ ನಟರ ವೈಯಕ್ತಿಕ ದುರ್ಬಳಕೆ ಆಗಬಾರದಷ್ಟೇ ಎಂದು ಸೂಚ್ಯವಾಗಿ ಹೇಳಿದರು.

Advertisement

ಇದಕ್ಕೆ ಅಷ್ಟೇ ತೀಕ್ಷ್ಣವಾಗಿ ತಿರುಗೇಟು ನೀಡಿರುವ ಬಿಜೆಪಿ, ಪರಿಶಿಷ್ಟ ಪಂಗಡದ ಒಬ್ಬ ಯಶಸ್ವಿ ನಾಯಕ ನಟ ಸಾಮಾಜಿಕ ನ್ಯಾಯದ ಪರವಾಗಿರುವ ಬಿಜೆಪಿಯನ್ನು ಬೆಂಬಲಿಸಿರುವುದನ್ನು ಕಾಂಗ್ರೆಸಿಗರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಕಾಂಗ್ರೆಸ್‌ ವರ್ತನೆ ನೋಡಿದರೆ ಬುಧವಾರ ಬೆಳಿಗ್ಗೆ ಅವರಿಗೆ (ಸುದೀಪ್‌ಗೆ) ಬಂದ ಬೆದರಿಕೆ ಪತ್ರಕ್ಕೂ ನಿಮಗೂ (ಕಾಂಗ್ರೆಸ್‌ಗೆ) ಸಂಬಂಧ ಇದೆಯೇ? ಎಂದು ಕೇಳಿದೆ.

ಆಟ ಈಗ ಆರಂಭ: ಶ್ರೀರಾಮುಲು
ಸುದೀಪ್‌ ಬೆಂಬಲದ ಬೆನ್ನಲ್ಲೇ ಟ್ವೀಟ್‌ ಮಾಡಿರುವ ಸಚಿವ ಬಿ. ಶ್ರೀರಾಮುಲು, ಕರ್ನಾಟಕ ಕುರುಕ್ಷೇತ್ರದಲ್ಲಿ ಕಿಚ್ಚನ ಪ್ರವೇಶದಿಂದ ಕಾಂಗ್ರೆಸಿಗರು ಬಾಯಿಸುಟ್ಟ ಬೆಕ್ಕುಗಳಾಗಿದ್ದಾರೆ. ತ್ರಿಬಲ್‌-ಎಸ್‌ (ಸುಜೇìವಾಲ, ಸಿದ್ದರಾಮಯ್ಯ, ಶಿವಕುಮಾರ್‌) ನಾಟಕಕಾರರಿಗೆ ಕೊನೆಯದಾಗಿ ಹೇಳುವುದೇನೆಂದರೆ, ಈಗ ಆಟ ಪ್ರಾರಂಭವಾಗಿದ್ದು, ಚಿತ್ರ ಇನ್ನೂ ಬಾಕಿ ಇದೆ (ಪಿಕ್ಚರ್‌ ಅಭಿ ಬಾಕಿ ಹೈ)’ ಎಂದು ಸಿನೆಮಾ ಡೈಲಾಗ್‌ ರೀತಿಯಲ್ಲೇ ಹೇಳಿದ್ದಾರೆ.

ನಾಡಿಗೆ ಆಘಾತ- ಪ್ರಕಾಶ್‌ರಾಜ್‌
ಈ ಮಧ್ಯೆ ನಟ ಪ್ರಕಾಶರಾಜ್‌ ಮಾತನಾಡಿ, ಸುದೀಪ್‌ ಅವರ ನಡೆ ನಾಡಿಗೆ ಆಘಾತ ತಂದಿದೆ. ನಾನು ಅಮೆರಿಕ ಪ್ರಯಾಣದಲ್ಲಿದ್ದು, ಸದ್ಯ ವಿಮಾನದಲ್ಲಿದ್ದೇನೆ. ಬೆಳಗ್ಗೆ ಅಲ್ಲಿಂದಲೇ ಈ ಬಗ್ಗೆ ವಿವರವಾಗಿ ಪ್ರತ್ರಿಕ್ರಿಯಿಸುತ್ತೇನೆ ಎಂದು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next