ಬೆಂಗಳೂರು : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಬಾಲಿವುಡ್ ಹೊಸದಲ್ಲ. ಈಗಾಗಲೇ ಅವರು ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಮತ್ತೊಮ್ಮೆ ಹಿಂದಿ ಚಿತ್ರರಂಗದ ಅಂಗಳಕ್ಕೆ ಕಾಲಿಡಲಿದ್ದಾರೆ. ಹಾಗಂತಾ ಹೀರೋ ಅಥವಾ ವಿಲನ್ ಆಗಿ ಅಲ್ಲ…
ಹೌದು, ಆಡು ಮುಟ್ಟದ ಸೊಪ್ಪಿಲ್ಲ..ಕಿಚ್ಚ ಕಾಲಿಡದ ಚಿತ್ರರಂಗವಿಲ್ಲ ಎನ್ನುವುದು ಸುದೀಪ್ ಅಭಿಮಾನಿಗಳ ಮಾತು. ತಮ್ಮ ಅಭಿನಯದ ಮೂಲಕ ಸ್ಯಾಂಡಲ್ವುಡ್ ನಿಂದ ಹಾಲಿವುಡ್ ವರೆಗೂ ಹೆಸರು ಮಾಡಿರುವ ಸುದೀಪ ಇದೀಗ ಮತ್ತೊಂದು ಬಾರಿ ಬಾಲಿವುಡ್‍ಗೆ ಹಾರಲು ಸಜ್ಜಾಗಿದ್ದಾರೆ. ಹಾಗಂತಾ ಈ ಬಾರಿ ಅಭಿನಯಕ್ಕಾಗಿ ಹಿಂದಿ ಚಿತ್ರರಂಗದತ್ತ ಮುಖ ಮಾಡುತ್ತಿಲ್ಲ. ಬದಲಾಗಿ ನಿರ್ದೇಶಕರ ಕ್ಯಾಪ್ ತೊಟ್ಟು ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಮೈ ಆಟೋಗ್ರಾಫ್’ ಚಿತ್ರದ ಮುಖಾಂತರ ಚಂದನವನದಲ್ಲಿ ನಟನೆಯ ಜೊತೆ ನಿರ್ದೇಶನಕ್ಕೂ ಸೈ ಎಂದು ಗುರುತಿಸಿಕೊಂಡವರು ನಟ ಕಿಚ್ಚ ಸುದೀಪ್. ಇದಾದ ಬಳಿಕ ಅವರು ಆ್ಯಕ್ಷನ್ ಕಟ್ ಹೇಳಿದ್ದ ‘ಜಸ್ಟ್ ಮಾತ್ ಮಾತಲ್ಲಿ’, ‘ನಂ.73 ಶಾಂತಿನಿವಾಸ’ ಹೀಗೆ ಹಲವು ಚಿತ್ರಗಳೂ ಹಿಟ್ ಆಗಿದ್ದವು. ಇದೀಗ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ನಿರ್ದೇಶನ ಮಾಡಲು ಸುದೀಪ್ ಸಜ್ಜಾಗಿದ್ದಾರೆ. ಶೀಘ್ರದಲ್ಲೇ ಅವರನ್ನು ಭೇಟಿಯಾಗಿ ಕಥೆ ಹೇಳಲೂ ತಯಾರಿ ನಡೆಸಿದ್ದಾರೆ.
ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಸುದೀಪ್, ‘ಈಗಾಗಲೇ ಒಂದು ಸ್ಕ್ರಿಪ್ಟ್ ಸಿದ್ಧಪಡಿಸಿದ್ದೇನೆ. ಅದು ಬಹಳ ಸೂಕ್ಷ್ಮವಾಗಿದೆ. ಇಡೀ ದಕ್ಷಿಣ ಭಾರತಕ್ಕೆ ಈ ಸಿನಿಮಾ ಮಾಡಬೇಕು ಎನ್ನುವ ಆಸೆ ನನ್ನದು. ಈ ಕುರಿತು ಸಲ್ಮಾನ್ ಖಾನ್ ಅವರ ಜೊತೆ ಮಾತನಾಡಿ, ‘ನಿಮಗೊಂದು ಕಥೆ ಬರೆದಿದ್ದೇನೆ ಅದನ್ನು ಹೇಳಬೇಕು’ ಎಂದು ಕೇಳಿಕೊಂಡಿದ್ದೆ. ಸೆಪ್ಟೆಂಬರ್ ಕೊನೆಯ ವಾರದಲ್ಲಿ ಅವರನ್ನು ಭೇಟಿಯಾಗಬೇಕಿತ್ತು, ಆದರೆ ಅದು ಸಾಧ್ಯವಾಗಲಿಲ್ಲ. ಆ ಪಾತ್ರ ಅಲ್ಲಿ ಅವರು ಮಾಡಿದರೇ ಚೆಂದ, ಇಲ್ಲಿ ನಾನು ಮಾಡಿದರೇ ಚಂದ. ಆಸೆ ಇಟ್ಟುಕೊಂಡು ನಾನೇ ಅಲ್ಲಿ ಮಾಡಬೇಕು ಎಂದರೆ ತಪ್ಪಾಗುತ್ತದೆ. ಇದು ಸಿನಿಮಾದ ಅಗತ್ಯತೆ.
ಸಿನಿಮಾನೇ ಬೇರೆ ಗೆಳೆತನವೇ ಬೇರೆ. ಅವರು ಒಪ್ಪಿಕೊಳ್ಳಬೇಕು. ಅವರ ಬಳಿಗೆ ಹೋಗಿ ಚರ್ಚಿಸಿದ ಬಳಿಕವಷ್ಟೇ ಮುಂದಿನದ್ದನ್ನು ಹೇಳಲು ಸಾಧ್ಯ. ಕಥೆಯನ್ನು ಅವರಿಗೆ ಹೇಳುವುದಕ್ಕೆ ನಾನು ಕಾತುರದಿಂದಿದ್ದೇನೆ. ಒಪ್ಪುವುದು ಬಿಡುವುದು ಅವರಿಗೆ ಬಿಟ್ಟಿದ್ದು, ನಾನು ಈ ಕಥೆ ಬರೆದಿದ್ದು ನನಗಾಗಿ. ಆದರೆ ಈ ಕುರಿತು ಜ್ಯಾಕ್ ಮಂಜು ಅವರ ಜೊತೆ ಚರ್ಚಿಸಿದಾಗ ಅವರೂ ಸಲ್ಮಾನ್ ಖಾನ್ ಅವರು ಈ ಪಾತ್ರಕ್ಕೆ ಸೂಕ್ತ ಎಂದರು. ನಿರ್ದೇಶಕನಾಗಿ ನಾನು ನನ್ನ ಕಥೆಗೆ ನ್ಯಾಯ ಒದಗಿಸಬೇಕು, ಅಲ್ಲವೇ’ ಎಂದಿದ್ದಾರೆ.