Advertisement

ತಿಂಗಳಿಡೀ ಪೈಲ್ವಾನ್ ಹಬ್ಬ! ಸೆ.12ಕ್ಕೆ ಸುದೀಪ್ ನಟನೆಯ ಪೈಲ್ವಾನ್ ರಿಲೀಸ್

09:51 AM Sep 04, 2019 | Nagendra Trasi |

ಬೆಂಗಳೂರು: ಕಿಚ್ಚ ಸುದೀಪ್ ನಟನೆಯ ಈ ವರ್ಷದ ಬಹು ನಿರೀಕ್ಷಿತ ಚಿತ್ರ ‘ಪೈಲ್ವಾನ್’ ಸೆ. 12ಕ್ಕೆ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಚಿತ್ರತಂಡ ಟ್ರೇಲರ್ ಮೂಲಕ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.

Advertisement

ಪಂಚಭಾಷೆಯಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾ ಇದಾಗಿರುವುದರಿಂದ ಐದೂ ಭಾಷೆಯಲ್ಲಿ ಟ್ರೇಲರ್ ರಿಲೀಸ್ ಮಾಡಲಾಗಿದೆ. ಟ್ರೇಲರ್ನಲ್ಲಿರುವ ಶಾಟ್ಸ್, ಡೈಲಾಗ್ಸ್, ರಿರೆಕಾರ್ಡಿಂಗ್ ಎಲ್ಲವೂ ಅಭಿಮಾನಿಗಳಲ್ಲಿ ಮತ್ತಷ್ಟು ಕ್ರೇಜ್ ಹೆಚ್ಚಿಸಿದೆ. ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ ಕೂಡಾ ಸೆಪ್ಟೆಂಬರ್ ೨ ಆಗಿರುವುದರಿಂದ, ಈ ತಿಂಗಳಿಡೀ ಅವರ ಅಭಿಮಾನಿಗಳ ಪಾಲಿಗೆ ಹಬ್ಬವಾಗಿದೆ.

ಬಲ ಇದೆ ಅಂತ ಹೊಡೆದಾಡೋನು ರೌಡಿ, ಬಲವಾದ ಕಾರಣಕ್ಕೆ ಹೊಡೆದಾಡೋನು ಯೋಧ’ ಎಂಬ ಸಾಲಿನೊಂದಿಗೆ ಪ್ರಾರಂಭವಾಗುವ ‘ಪೈಲ್ವಾನ್’ ಚಿತ್ರದ ಟ್ರೇಲರ್ ಸದ್ಯ ಟ್ರೆಂಡಿಂಗ್ನಲ್ಲಿದ್ದು, ಹತ್ತು ಲಕ್ಷಕ್ಕೂ ಅಧಿಕ ಹಿಟ್ಸ್ ದಾಖಲಾಗಿದೆ. ಇದೇ ಮೊದಲ ಬಾರಿಗೆ ಸುದೀಪ್ ಪೈಲ್ವಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರದ ಪಾತ್ರಕ್ಕಾಗಿ ಕಿಚ್ಚ ತನ್ನ ದೇಹವನ್ನು ಹುರಿಗೊಳಿಸಿಕೊಂಡಿದ್ದಾರೆ. ಪಕ್ಕಾ ಗ್ರಾಮೀಣ ಸೊಗಡು ಮತ್ತು ವೃತ್ತಿಪರ ಬಾಕ್ಸಿಂಗ್ ಕಾದಾಟವಿದೆ ಎಂಬ ಝಲಕ್ ಟ್ರೇಲರ್ ಮೂಲಕ ಸಿಕ್ಕಿದೆ. ಉಳಿದದ್ದು ಸಿನಿಮಾ ನೋಡಿಯೇ ಕಣ್ತುಂಬಿಕೊಳ್ಳಬೇಕು.

ಅರ್ಜುನ್ ಜನ್ಯಾ ಹಾಡುಗಳಿಗೆ ರಾಗ ಸಂಯೋಜನೆಯಲ್ಲಿ, ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು  ಸುದೀಪ್ ಅಭಿಮಾನಿಗಳಲ್ಲಿ ಕಿಚ್ಚೆಬ್ಬಿಸಿರುವುದರಿಂದ ಚಿತ್ರತಂಡವೂ ಖುಷಿ ಮೂಡ್ನಲ್ಲಿದೆ.

ಬಾಲಿವುಡ್ ನ ಹೆಸರಾಂತ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ಈ ಸಿನಿಮಾಗೆ ಕೊರಿಯೋಗ್ರಫಿ ಮಾಡಿರುವುದು ವಿಶೇಷ. ಸುನಿಲ್ ಶೆಟ್ಟಿ ದೇಸಿ ಗೆಟಪ್, ಆಕಾಂಕ್ಷಾ ಸಿಂಗ್ ಗ್ಲಾಮರ್ ಲುಕ್ ಗಮನ ಸೆಳೆಯುತ್ತದೆ. ಸುಶಾಂತ್ ಸಿಂಗ್, ಕಬೀರ್ ದುಹಾನ್ ಸಿಂಗ್, ಶರತ್ ಲೋಹಿತಾಶ್ವ ಸೇರಿದಂತೆ ಸಾಕಷ್ಟು ನಟ ನಟಿಯರು ಈ ಚಿತ್ರದಲ್ಲಿ ನಟಿಸಿದ್ದಾರೆ. ಸೆಪ್ಟೆಂಬರ್ 12ರಂದು ‘ಪೈಲ್ವಾನ್’ ದೇಶದಾದ್ಯಂತ ಅಖಾಡಕ್ಕೆ ಇಳಿಯಲಿದ್ದಾನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next