ಬೆಂಗಳೂರು: ಕಿಚ್ಚ ಸುದೀಪ್ (Kiccha Sudeep) ಅವರ ʼಮ್ಯಾಕ್ಸ್ʼ ಬಾಕ್ಸಾಫೀಸ್‌ನಲ್ಲಿ ಧೂಳು ಎಬ್ಬಿಸಿದೆ. ಸುದೀಪ್ ಪೊಲೀಸ್ ಆಫೀಸರ್ ಆಗಿ ಮತ್ತೊಮ್ಮೆ ಮೋಡಿ ಮಾಡಿದ್ದಾರೆ. ಅಭಿಮಾನಿಗಳ ಪಾಲಿಗೆ ʼಮ್ಯಾಕ್ಸ್ʼ ಮಾಸ್ ಮನರಂಜನೆ ನೀಡಿದೆ.
ಸುದೀಪ್ ಕಳೆದ 28 ವರ್ಷಗಳಿಂದ ಚಿತ್ರರಂಗದಲ್ಲಿ ನೆಲೆ ನಿಂತಿದ್ದಾರೆ. ಸ್ಯಾಂಡಲ್‌ವುಡ್ ಮಾತ್ರವಲ್ಲದೆ ಬೇರೆ ಭಾಷೆಯಲ್ಲೂ ಸುದೀಪ್ ತನ್ನ ನಟನಾ ಪ್ರತಿಭೆಯನ್ನು ತೋರಿಸಿ ʼಬಾದ್ ಷಾʼ ಆಗಿ ಮೆರೆದಿದ್ದಾರೆ. 46 ಸಿನಿಮಾಗಳಲ್ಲಿ ಸುದೀಪ್ ಇದುವರೆಗೆ ಕಾಣಿಸಿಕೊಂಡಿದ್ದಾರೆ. 51ರ ಹರೆಯದಲ್ಲೂ ಕಿಚ್ಚ ನಾಯಕ ನಟನಾಗಿ ಇಂದಿಗೂ ಬಹುಬೇಡಿಕೆಯ ನಟನಾಗಿ ಚಿತ್ರರಂಗದಲ್ಲಿ ನೆಲೆ ನಿಂತಿದ್ದಾರೆ.
ʼಮ್ಯಾಕ್ಸ್ʼ ಸಿನಿಮಾದ ಮೊದಲು ಹಾಗೂ ನಂತರ ಸುದೀಪ್ ಹಲವು ಸಂದರ್ಶನವನ್ನು ನೀಡಿದ್ದಾರೆ. ಇತ್ತೀಚೆಗೆ ನೀಡಿರುವ ಸಂದರ್ಶನವೊಂದರಲ್ಲಿ ಸುದೀಪ್ ಚಿತ್ರರಂಗದ ಬಗ್ಗೆ ಮಾತನಾಡುತ್ತಾ ನಿವೃತ್ತಿಯ ಬಗ್ಗೆಯೂ ಮಾತನಾಡಿರುವುದು ಚಂದನವನದಲ್ಲಿ ಸದ್ದು ಮಾಡುತ್ತಿದೆ.
ʼರಾಘವೇಂದ್ರ ಚಿತ್ರವಾಣಿʼ ಜತೆಗಿನ ಸಂದರ್ಶನದಲ್ಲಿ ಕಿಚ್ಚ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ʼಮ್ಯಾಕ್ಸ್ʼ ಸಿನಿಮಾ ನೋಡಿದಾಗ ಇಡೀ ಚಿತ್ರ ನಿಮ್ಮ ಹೆಗಲ ಮೇಲೆ ಇರುವಂತೆ ಭಾಸವಾಗುತ್ತಿತ್ತು. ನೀವೇ ಎಲ್ಲ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೀರಿ ಅಂಥ ಅನ್ನಿಸುತ್ತಿತ್ತು ಈ ಬಗ್ಗೆ ನೀವೇನು ಹೇಳ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಕಿಚ್ಚ, “ನಾನು ನನ್ನ ಲೈಫ್, ನನ್ನ ಕೆರಿಯರ್‌ನ ಭುಜದ ಮೇಲೆ ಎತ್ತಿಕೊಂಡು ಬಂದಿದ್ದೇನೆ. ಅದರ ಮುಂದೆ ಒಂದು ಸಿನಿಮಾ ಚಿಕ್ಕದು. ನನಗೆ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದು ಎಂದರೆ ಇಷ್ಟ. ನಾವು ಬೆಳದು ಬಂದಾಗ ಗಾಡ್ ಫಾದರ್ ಗಳನ್ನು ಇಟ್ಟುಕೊಂಡು ಬಂದಿಲ್ಲ. ಕರೆಕ್ಟ್ ನನ್ನ ಜವಾಬ್ದಾರಿ ನಾನೇ ತೆಗೆದುಕೊಂಡಿದ್ದೇನೆ. ನನ್ನ ಸಿನಿಮಾ ಜವಾಬ್ದಾರಿಯನ್ನು ನಾನೇ ತೆಗೆದುಕೊಳ್ಳುತ್ತೇನೆ. ಇನ್ನೊಬ್ಬರು ಸರ್ಪೊರ್ಟ್ ಇದ್ರೆ ಒಳ್ಳೆಯದು. ಯಾರು ಇಲ್ಲದಿದ್ದಾಗ ನಮ್ಮ ಗಾಡಿ ಓಡಲೇಬೇಕು. ನಾನು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ” ಎಂದು ಸುದೀಪ್ ಹೇಳಿದ್ದಾರೆ.
ʼಮ್ಯಾಕ್ಸ್ʼ ನಲ್ಲಿ ಸುದೀಪ್ ಒನ್ ಮ್ಯಾನ್ ಆರ್ಮಿಯಾಗಿ ಇದ್ದರು ಅಂಥ ಎಲ್ಲರೂ ಹೇಳಿದ್ದಾರೆ ಇದಕ್ಕೆ ಏನು ಹೇಳ್ತೀರಿ ಎಂದು ಕೇಳಿದಾಗ, “ಎಲ್ಲ ಆರ್ಮಿಯೂ ಒಬ್ಬರಿಂದಲೇ ಶುರುವಾಗುತ್ತದೆ. ನಾನಿದ್ದೆ, ನನ್ನ ಹಿಂದೆ ಸೈನ್ಯ ಇತ್ತು. ನಾನು ಕಾಣಿಸ್ತಾ ಇದ್ದೆ, ನನ್ನ ಹಿಂದೆ ಸೈನ್ಯ ಇತ್ತು. ಎಲ್ಲರೂ ಹೊಸಮುಖ ಆಗಿದ್ದರಿಂದ ಸೈನ್ಯ ಯಾರಿಗೂ ಕಾಣಿಸಿಲ್ಲ. ಎಲ್ಲರೂ ಅವರವರ ಕೆಲಸವನ್ನು ಚೆನ್ನಾಗಿ ಮಾಡಿದ್ದಾರೆ. ಅದಕ್ಕೆ ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಪ್ರತಿಯೊಬ್ಬರು ಅವರವರ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ ಎಂದು ಸುದೀಪ್ ಹೇಳಿದ್ದಾರೆ.
ಬಿಗ್ ಬಾಸ್ , ಸಿನಿಮಾ ಹಾಗೂ ಕ್ರಿಕೆಟ್ ಈ ಮೂವರನ್ನು ಹೇಗೆ ನಿಭಾಯಿಸುತ್ತಿದ್ದೀರಿ ಎಂದು ಕಿಚ್ಚನ ಬಳಿ ಕೇಳಲಾಗಿದೆ. “ಮ್ಯಾಕ್ಸ್ ಕೂಡ ನನ್ನ ಆಯ್ಕೆ ಆಗಿತ್ತು. ಸಿಸಿಎಲ್, ಕೆಸಿಸಿ ಹಾಗೂ ಬಿಗ್ ಬಾಸ್ ಕೂಡ ನನ್ನದೇ ಆಯ್ಕೆ ಆಗಿತ್ತು ಎಲ್ಲವೂ ನನ್ನದೇ ಆಯ್ಕೆ ಆಗಿದ್ದರಿಂದ ಅದರಲ್ಲಿ ಯಾವ ವಿಷಾದವೂ ಇರಲಿಲ್ಲ. ದೈಹಿಕವಾಗಿ ಸುಸ್ತು ಆಗುತ್ತಾ ಇದ್ದೆ. ಮಾನಸಿಕವಾಗಿ ಅಲ್ಲ. ದೈಹಿಕವಾಗಿ ಸುಸ್ತು ಆದಾಗ ಒಂದು ಸ್ವಲ್ಪ ಹೊತ್ತು ಮಲಗಿದ್ರೆ ಸರಿ ಆಗ್ತಾ ಇತ್ತು. ನಾನು ಎಲ್ಲ ಕೆಲಸವನ್ನು ತುಂಬಾ ಖುಷಿಯಿಂದಲೇ ಮಾಡುತ್ತೇನೆ. ನನಗೆ ಖಾಲಿ ಕೂರುವುದು ಅಂದ್ರೆ ಆಗಲ್ಲ. ಸದಾ ಏನಾದ್ರು ಮಾಡ್ತಾ ಇರಬೇಕು” ಎಂದು ಹೇಳಿದ್ದಾರೆ.
ನನಗೆ ಈ ಎಲ್ಲ ಕೆಲಸಗಳನ್ನು ಮಾಡುವಾಗ ಟೆನ್ಷನ್ ಆಗಲ್ಲ. ಸುಸ್ತು ಆಗಬಹುದ್ದಷ್ಟೇ. ಮಾಡುವ ಕೆಲಸವನ್ನು ಸರಿ ಆಗಿ ಮಾಡಿದ್ರೆ ಸುಸ್ತು ಆಗಲ್ಲ. ನಾನು ಆ ರೀತಿ ರೆಸ್ಟ್ ಮಾಡುವ ವ್ಯಕ್ತಿಯಲ್ಲ. ನಿವೃತ್ತಿ ಆದ್ಮೇಲೆ ರೆಸ್ಟ್ ಅನ್ನೋದು ಇದ್ದೆ ಇರುತ್ತದೆ. ಅಲ್ಲಿಯವರೆಗೆ ಯಾಕೆ ನಿವೃತ್ತಿ ಆಗಬೇಕು. ಕೆಲಸ ಮಾಡೋಣ ಎಂದಿದ್ದಾರೆ.
ನೀವು ಯಾವತ್ತೂ ನಿವೃತ್ತಿ ಆಗಲ್ಲ. ಸುಸ್ತು ಆಗಬಹುದೆಂದು ಹೇಳಿದಾಗ, “ಇಲ್ಲ ಸರ್ ನಾನು ಸುಸ್ತು ಆಗಲ್ಲ. ನಿವೃತ್ತಿ ಆಗಬಹುದು. ಪ್ರತಿ ನಾಯಕನೂ ಕೊನೆಯಲ್ಲಿ ಬೋರ್ ಆಗಲು ಶುರುವಾಗುತ್ತಾನೆ. ಹೀರೋ ಆಗಿ ಪ್ರತಿಯೊಬ್ಬರಿಗೂ ಟೈಮ್ ಲೈನ್ ಇರುತ್ತದೆ. ನಮ್ಮಂಥವರಿಗೆ ಅಣ್ಣ, ತಮ್ಮ, ಚಿಕ್ಕಪ್ಪನ ರೋಲ್ ಎಲ್ಲ ಸೂಟ್ ಆಗಲ್ಲ ಅದನ್ನು ನಾವು ಮಾಡೋದು ಇಲ್ಲ. ನಾವು ಜೀವನದಲ್ಲಿ ಏನಾದರೂ ಹೊಸತನ್ನು ಮಾಡುವುದನ್ನು ಹುಡುಕಬೇಕು. ನಾನು ಹೀರೋ ಆಗಿ ಸೆಟ್‌ಗೆ ಹೋಗಬೇಕಾದಾಗ ನಾನು ಯಾರನ್ನು ಕಾಯಿಸುವುದಿಲ್ಲ. ಹೀರೋಯಿಂದ ಕೆಳಗೆ ಇಳಿದ ಮೇಲೆ ಬೇರೆ ಪಾತ್ರಗಳನ್ನು ಮಾಡಿದ್ರೆ ಕಾಯೋಕೆ ಕೂರುವ ಕ್ಯಾರೆಕ್ಟರ್ ಎಲ್ಲ ನಮಗೆ ಆಗುತ್ತಾ? ಇದೆಲ್ಲ ನಮಗೆ ಸೂಟ್ ಆಗಲ್ಲ. ಸಿನಿಮಾ ನಿರ್ದೇಶನ, ನಿರ್ಮಾಣ ಮಾಡಬಹುದು. ಸಿನಿಮಾದಿಂದ ನಾನು ದೂರ ಆಗುತ್ತೇನೆ ಅಂಥ ಹೇಳಲ್ಲ. ಒಬ್ಬ ನಾಯಕ ನಟನ ಪಾತ್ರದಿಂದ ದೂರ ಆಗಬಲ್ಲೆ. ನಾನು ಹೀರೋ ಇಮೇಜ್ ಅಲ್ಲೇ ಸ್ಟಕ್ ಆಗಿ ನಿಲ್ಲಿಲ್ಲ. ಪಾತ್ರಗಳನ್ನು ಮಾಡೋಕೆ ಖುಷಿಯಿದೆ ಆದ್ರೆ ಅದಕ್ಕಾಗಿಯೇ ಸ್ಟಕ್ ಖಂಡಿತ ನಿಲ್ಲಲ್ಲ” ಎಂದು ಸುದೀಪ್ ಹೇಳಿದ್ದಾರೆ.