ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿ, ಆ ಮೂಲಕ ಸುದ್ದಿಯಾಗುವವರ ಸಂಖ್ಯೆಯೇನೂ ಕಮ್ಮಿಯಿಲ್ಲ. ಸದ್ಯ ಅದಕ್ಕೆ ದೊಡ್ಡ ವೀಕ್ಷಕ ವರ್ಗ ಕೂಡಾ ಇದೆ. ಈಗ ರೀಲ್ಸ್ ವಿಚಾರ ಯಾಕೆ ಎಂದು ನೀವು ಕೇಳಬಹುದು.
ಅದಕ್ಕೆ ಕಾರಣ ಸುದೀಪ್. ದೊಡ್ಡ ಅಭಿಮಾನಿ ವರ್ಗವನ್ನು ಹೊಂದಿರುವ ಸುದೀಪ್ ಮೊದಲ ಬಾರಿಗೆ ರೀಲ್ಸ್ ಮಾಡಿದ್ದಾರೆ. ಸದ್ಯ ಆ ರೀಲ್ಸ್ ಮಿಲಿಯನ್‌ಗಟ್ಟಲೇ ವೀಕ್ಷಣೆ ಪಡೆದು ಮುಂದೆ ಸಾಗುತ್ತಿದೆ. ಕಿಚ್ಚ ಸುದೀಪ್ ನಟನೆಯ “ವಿಕ್ರಾಂತ್ ರೋಣ’ ಚಿತ್ರದ “ರ..ರ.. ರಕ್ಕಮ್ಮ’ ಹಾಡು ಬಿಡುಗಡೆಯಾಗಿ ಹಿಟ್‌ಲಿಸ್ಟ್ ಸೇರಿದೆ.
ಈಗ ಸುದೀಪ್ ಅವರು ತಮ್ಮದೇ ಹಾಡಿಗೆ ರೀಲ್ಸ್ ಮಾಡಿದ್ದಾರೆ. ರಕ್ಕಮ್ಮ ಹಾಡಿನಲ್ಲಿ ಸಖತ್ ಸ್ಟೆಪ್ ಹಾಕಿರುವ ನಟಿ ಜಾಕ್ವೆಲಿನ್ ಸುದೀಪ್ ಅವರಲ್ಲಿ ರೀಲ್ಸ್ ಮಾಡುವಂತೆ ಕೇಳಿಕೊಂಡಿದ್ದಾರೆ. ಅದಕ್ಕೆ ಸುದೀಪ್, “ನೀವು ಕನ್ನಡದ ಸಾಲನ್ನು ಹೇಳಬೇಕು’ ಎಂಬ ಷರತ್ತಿನೊಂದಿಗೆ “ರಕ್ಕಮ್ಮ’ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಸದ್ಯ ಈ ರೀಲ್ಸ್ ವೈರಲ್ ಆಗುತ್ತಿದೆ.
ಇನ್ನು, “ವಿಕ್ರಾಂತ್ ರೋಣ’ ಚಿತ್ರ ಜುಲೈ 28ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಈಗಾಗಲೇ ಪ್ಯಾನ್ ಇಂಡಿಯಾ ಸಿನಿಮಾವಾಗಿ ಈ ಚಿತ್ರ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದ್ದು, ಕಿಚ್ಚನ ಅಭಿಮಾನಿಗಳು ಈ ಸಿನಿಮಾವನ್ನು ಹಬ್ಬದಂತೆ ಸಂಭ್ರಮಿಸಲು ಸಿದ್ಧತೆ ನಡೆಸಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರವನ್ನು ಜಾಕ್ ಮಂಜು ನಿರ್ಮಿಸಿದ್ದಾರೆ.