ಕಿಯಾ ಮೋಟಾರ್ಸ್ ಸಂಸ್ಥೆಯ ಕಾರ್ನಿವಾಲ್ ಎಂಪಿವಿ ಮಾದರಿ ಕಾರಿನ ಬಿಡುಗಡೆಗೆ ಸದ್ಯ ತಯಾರಿ ಮಾಡಿಕೊಂಡಿದ್ದು, 2020ರ ಫೆಬ್ರುವರಿ 5ರಿಂದ ಆರಂಭವಾಗಲಿರುವ ದೆಹಲಿ ಆಟೋ ಎಕ್ಸ್‌ಪೋ ದಲ್ಲಿ ಅನಾವರಣಗೊಳಿಸಿ ಮಾರುಕಟ್ಟೆಗೆ ಬಿಡುವ ಪ್ಲಾನ್ ಬಹುತೇಕ ಖಚಿತವಾಗಿದೆ.
ಬಾರಿ ನೀರಿಕ್ಷೆಯೊಂದಿಗೆ ಭಾರತೀಯ ಮಾರುಕಟ್ಟೆಗೆ ಕಿಯಾ ಮೋಟಾರ್ಸ್ ಸಂಸ್ಥೆ ಕಾಲಿಟ್ಟಿದ್ದು, ದೇಶದ ಟಾಪ್ 3 ಕಾರು ಉತ್ಪಾದನಾ ಸಂಸ್ಥೆಗಳಿಗೆ ತೀವ್ರ ಪೈಪೋಟಿ ನೀಡುವ ಯೋಜನೆ ಹಾಕಿಕೊಂಡಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕೈಗೆಟುಕುವ ದರದಲ್ಲಿ ಕಾರುಗಳನ್ನು ಬಿಡುಗಡೆಗೊಳಿಸುವ ಗುರಿ ಕಿಯಾ ಸಂಸ್ಥೆಯದ್ದಾಗಿದೆ.
ಕಿಯಾ ಸಂಸ್ಥೆ ಎರಡನೇ ಆವೃತ್ತಿಯ ಕಾರು ಕಾರ್ನಿವಾಲ್ ಎಂಪಿವಿ(ಮಲ್ಟಿ ಪರ್ಪಸ್ ವೆಹಿಕಲ್) ಕಾರು ಬಿಡುಗಡೆಯಾಗುತ್ತಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇರುವ ಟೊಯೊಟಾ ಇನೋವಾ ಕ್ರಿಸ್ಟಾ ಕಾರಿಗೆ ಕಾರ್ನಿವಾಲ್ ಭರ್ಜರಿ ಪೈಪೋಟಿ ನೀಡಲಿದೆ.
ಕಾರ್ನಿವಾಲ್ ಕಾರು ಹಲವು ಪ್ರೀಮಿಯಂ ತಂತ್ರಜ್ಞಾನಗಳೊಂದಿಗೆ ಇನೋವಾ ಕ್ರಿಸ್ಟಾಗೆ ಪ್ರತಿ ಸ್ಪರ್ಧಿಯಾಗಲಿದ್ದು, ಆನ್‌ರೋಡ್ ಬೆಲೆ ರೂ. 20 ಲಕ್ಷದಿಂದ ಆರಂಭವಾಗಿ ರೂ.30 ಲಕ್ಷ ಟಾಪ್‌ಎಂಡ್ ಬೆಲೆಯನ್ನು ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.
ಕಾರ್ನಿವಾಲ್ ಕಾರು 5,115-ಎಂಎಂ ಉದ್ದ, 1,985-ಎಂಎಂ ಅಗಲ ಮತ್ತು 1,755 ಎತ್ತರವನ್ನು ಹೊಂದಿದ್ದು, ಇನೋವಾ ಕ್ರಿಸ್ಟಾ ಕಾರಿಗಿಂತಲೂ 375-ಎಂಎಂ ಹೆಚ್ಚು ಉದ್ದ,155-ಎಂಎಂ ಹೆಚ್ಚು ಅಗಲ ಮತ್ತು 40-ಎಂಎಂ ನಷ್ಟು ಕಡಿಮೆ ಎತ್ತರವನ್ನು ಪಡೆದುಕೊಂಡಿರಲಿದೆ.
ಎಂಜಿನ್ ಸಾಮಾರ್ಥ್ಯ
ಕಿಯಾ ಕಾರ್ನಿವಾಲ್ ಕಾರು ಇನೋವಾ ಕ್ರಿಸ್ಟಾಗೆ ಪೈಪೋಟಿಯಾಗಿ ನೀಡುತ್ತಿದ್ದು 2.2-ಲೀಟರ್ ಟರ್ಬೊ ಡೀಸೆಲ್ ಜೊತೆ 3.3-ಲೀಟರ್ ವಿ6 ಎಂಪಿಐ ಪೆಟ್ರೋಲ್ ಎಂಜಿನ್ ಮಾದರಿಯೊಂದಿಗೆ ಮಾರಾಟವಾಗುತ್ತಿದ್ದು, ಭಾರತದಲ್ಲಿ ಬಿಡುಗಡೆಯಾಗಲಿರುವ ಮಾದರಿಯ ಬೆಲೆಯಲ್ಲಿ ಕಡಿತಗೊಳಿಸುವ ಉದ್ದೇಶದಿಂದ 2.5-ಲೀಟರ್ ಡೀಸೆಲ್ ಎಂಜಿನ್ ಮತ್ತು 2.6-ಲೀಟರ್ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಗಳಿವೆ.