Advertisement
ಜಸ್ಟ್ 1.27 ನಿಮಿಷ! ಈ ಕಿರು ಅವಧಿಯಲ್ಲಿ ಏನೇನೆಲ್ಲ ಆಗಬಹುದು? ಒಂದು ತುತ್ತು ಹೊಟ್ಟೆ ಸೇರಲು; ಸಿಕ್ಸರ್‌ಗೆ ಅಟ್ಟಿದ ಚೆಂಡನ್ನು ಬಾಲ್‌ಬಾಯ್ ಹೆಕ್ಕಿ, ಬೌಲರ್‌ನತ್ತ ಪಾಸ್ ಮಾಡಲು; ಟ್ರಾಫಿಕ್ ಸಿಗ್ನಲ್‌ನ ಕೆಂಪು ಲೈಟು, ಹಸಿರಾಗಲು; “ಜನ ಗಣ ಮನ…’ ಹಾಡಿ, ಸೆಲ್ಯೂಟ್ ಹೊಡೆದು, ಮರಳಿ ಅಟೆನ್ಷನ್ ಆಗಲು… ಇಂಥವೇ ಸಣ್ಣ ಕೆಲಸಗಳಷ್ಟೇ ಈ ಪುಟ್ಟ ಅವಧಿಯಲ್ಲಿ ಆಗಿಬಿಡಬಹುದು. ಆದರೆ, ಅದೇ ಕಾರು ಘಟಕದಲ್ಲಿ, ಒಂದು ಕಾರು 1.27 ನಿಮಿಷದಲ್ಲಿ ಅಂಗಾಂಗ ತುಂಬಿಕೊಂಡು, ಜನ್ಮ ತಾಳುತ್ತದೆ. ಎಲ್ಲ ಬಿಡಿಭಾಗಗಳೂ ರೆಡಿ ಇದ್ದುಬಿಟ್ಟರೆ, ರೋಬೊಟಿಕ್ ಯಂತ್ರಗಳು ಒಂದೂವರೆ ನಿಮಿಷದೊಳಗೆ, ಕಾರನ್ನು ನಿರ್ಮಿಸಿ, “ಓಕೆ ಲೈನ್’ಗೆ ತಂದು ನಿಲ್ಲಿಸುತ್ತವೆ.
Related Articles
Advertisement
ಅಸೆಂಬಲ್ ಎಂಬ ಜಾದೂ: ಕಾರ್ ತಯಾರಿಗೆ ವೇಗ ಸಿಗುವ ವಿಭಾಗ, ಅಸೆಂಬ್ಲಿ ಶಾಪ್. ಮನುಷ್ಯನ ಮುಂದೆ ರೋಬೊಟಿಕ್ ಯಂತ್ರಗಳು ಎಷ್ಟು ದೈತ್ಯ ಎಂಬ ಸತ್ಯದ ದಿಗªರ್ಶನ ಇಲ್ಲಾಗುತ್ತದೆ. ರೂಫ್ ರೇಲ್, ಹುಡ್, ಡೋರ್, ಟೈಲ್‌ಗೇಟ್‌ಗಳ ಫಿಟಿಂಗ್, ಫ್ರಂಟ್- ಸೆಂಟರ್ ಪಾರ್ಟ್ಸ್, ರೇರ್ ಫ್ಲೋರ್‌ಗಳ ಜೋಡಣೆ ಸರಾಗ. ಸ್ಟೀರಿಂಗ್, ಕಾಕ್‌ಪಿಟ್‌ನ ಫಿಟಿಂಗ್ ಕೂಡ ಚಕಚಕನೆ ಮುಗಿಯುವಂಥ ಕೆಲಸಗಳು. ಇಲ್ಲಿ ಕಾರಿನ ಸ್ಕೆಲಿಟನ್ ಸಿದ್ಧಗೊಳ್ಳಲು ಅರ್ಧ ನಿಮಿಷವೂ ಬೇಕಿಲ್ಲ; ಕಣ್ಮುಂದೆ ಜಾದೂ ನಡೆದಂತೆ ಎಲ್ಲವೂ…
ರೋಬೊಟ್ ಕಲಾಕಾರರು…: ನೀವು ರೋಲ್ಸ್ ರಾಯ್ಸ ಲಕ್ಷುರಿ ಕಾರ್‌ನ ಪೇಂಟರ್‌ನ ಕತೆ ಕೇಳಿರಬಹುದು. ಮಾರ್ಕ್ ಕೋರ್ಟ್ ಎಂಬ ಖ್ಯಾತ ಪೇಂಟರ್‌ನನ್ನು ಆ ಕಂಪನಿ ಇಂದಿಗೂ ಸಾಕಿಕೊಂಡಿದೆ. ಫ್ಯಾಕ್ಟರಿಯಿಂದ ಹೊರಬರುವ ಪ್ರತಿ ಕಾರಿನ ಹೆಡ್‌ಲೈಟ್‌ನ ಹಿಂಭಾಗದಲ್ಲಿ ಆತ ಉದ್ದನೆಯ ಸ್ಟ್ರಿಪ್‌ಲೈನ್ ಎಳೆಯುತ್ತಾನೆ. ಆದರೆ, ಕಿಯಾ ಫ್ಯಾಕ್ಟರಿಯಲ್ಲಿ ಪೇಂಟಿಂಗ್ ವಿಭಾಗದಲ್ಲಿ, ಒಂದು ಬಿಂದುವಿಗೂ ಮನುಷ್ಯ ಬಣ್ಣ ಹಚ್ಚುವುದಿಲ್ಲ. ಇಲ್ಲಿ ರೋಬೊಟಿಕ್ ಯಂತ್ರಗಳೇ ಕಲಾಕಾರರು. ಕೃತಕ ಬುದ್ಧಿವಂತ ಸಾಹಸಿಗಳು. ಗ್ರಾಹಕ ಇಷ್ಟಪಟ್ಟ ಬಣ್ಣದ ಮಾಹಿತಿಯನ್ನು ಫೀಡ್ ಮಾಡಿಬಿಟ್ಟರೆ, ಸಣ್ಣಬಿಂದುವಿನಲ್ಲೂ ಲೋಪ ಕಾಣಿಸದಂತೆ, ಹತ್ತಾರು ಸೆಕೆಂಡುಗಳಲ್ಲಿ ಪೇಂಟಿಂಗ್ ಮುಗಿಸುತ್ತವೆ.
ಚಾಸಿಸ್ ಲೈನ್‌ಗೆ ಬಂದಾಯ್ತು…: ಬಣ್ಣ ಬಳಿದುಕೊಂಡ ಕಾರ್‌ನ ಒಳಭಾಗ, ಮುಂಭಾಗ, ಅಡಿಭಾಗದ ಕೆಲಸಗಳು ನಡೆಯುವುದು ಚಾಸಿಸ್ ಲೈನ್ ಸೆಕ್ಷನ್‌ನಲ್ಲಿ. ಬ್ರೇಕ್, ಟ್ಯೂಬ್, ವೈರಿಂಗ್ ಟೆಸ್ಟ್, ಫ್ಯೂಯಲ್ ಟ್ಯಾಂಕ್, ಮಫ್ಲರ್‌ಗಳ ಫಿಟ್ಟಿಂಗ್ ಇಲ್ಲಾಗುತ್ತದೆ. ಎಂಜಿನ್‌ಗಳನ್ನು ಎತ್ತಿ, ಕಾರಿನೊಳಕ್ಕೆ ಇಟ್ಟು, ಜೋಡಿಸುವುದಕ್ಕೂ ಜಾಸ್ತಿ ಸೆಕೆಂಡುಗಳು ಬೇಕಿಲ್ಲ. ಹೀಗೆ ಎಲ್ಲ ಭಾಗಗಳ ಜೋಡಣೆ ಮುಗಿಸಿ, ಪೈನಲ್ ಲೈನ್‌ಗೆ ಬಂದಾಗ, ಎಲೆಕ್ಟ್ರಿಕ್ ವೈರ್‌ಗಳ ಸಂಪರ್ಕ, ಅದರ ಟೆಸ್ಟಿಂಗ್ ನಡೆಯುತ್ತದೆ. ಕಿಟಕಿ ಗಾಜು, ಆಸನಗಳು ಅಲಂಕೃತಗೊಳ್ಳುತ್ತವೆ. ಆಯಿಲ್ ಫಿಲ್ಟರ್, ಕಾರ್ ಕೀ ಕೋಡಿಂಗ್‌ನ ಅಳವಡಿಕೆ ಜತೆಗೆ ಸಣ್ಣಪುಟ್ಟ ರಿಪೇರಿಗಳಿದ್ದರೆ, ಅವೂ ರೋಬೊಟಿಕ್ ಯಂತ್ರಗಳ ಗಮನಕ್ಕೆ ಬಂದು, ಪರಿಪೂರ್ಣಗೊಳ್ಳುತ್ತವೆ.
ಬಂಪರ್, ಟೈರ್‌ಗಳನ್ನು ಜೋಡಿಸಿಕೊಂಡ ಕಾರು, ಓಕೆ ಲೈನ್‌ನಲ್ಲಿ ಬಂದು ನಿಲ್ಲುತ್ತದೆ. ಅಲ್ಲಿಗೆ ಒಂದು ಕಾರಿನ ಪ್ರಸವದ ಕತೆ ಮುಗಿದಂತೆ. ಹಾಗೆ ಹುಟ್ಟಿದ ಕಾರು, ಕಿಯಾ ಘಟಕದೊಳಗೆ ಇರುವ 4 ಕಿ.ಮೀ. ಚೆಂದದ ಟ್ರ್ಯಾಕ್‌ನಲ್ಲಿ, ಟೆಸ್ಟಿಂಗ್ ರೈಡ್ ಮುಗಿಸುತ್ತದೆ. ಅಂದರೆ, ಕಾರಿನ ಪಾರ್ಟ್ಸ್ಗಳೆಲ್ಲವೂ ಸಿದ್ಧವಿದ್ದರೆ, ಅವುಗಳನ್ನು ಜೋಡಿಸಿ, ಕಾರನ್ನು ಸಂಪೂರ್ಣವಾಗಿ ಸಿದ್ಧಗೊಳಿಸಲು, ರೋಬೊಟಿಕ್ ಯಂತ್ರಗಳಿಗೆ, 1.27 ನಿಮಿಷಗಳಷ್ಟೇ ಸಾಕು. ಅದರ ಪಕ್ಕದಲ್ಲಿ ರೋಬೊಟಿಕ್ ಯಂತ್ರಗಳನ್ನು ಅರಿತ, ಮಾನವ ಅದನ್ನು ಆಪರೇಟ್ ಮಾಡುತ್ತಿದ್ದರೆ, ಆ ದೈತ್ಯ ಮಶೀನುಗಳಿಗೆ ಈ ಕೆಲಸಗಳು ನೀರು ಕುಡಿದಷ್ಟೇ ಸಲೀಸು. ಇಂಥದ್ದೊಂದು ಯಾಂತ್ರಿಕ ಶಕ್ತಿ ತುಂಬಿಕೊಂಡೇ, ಕಿಯಾ ಭಾರತಕ್ಕೆ ಭರ್ಜರಿಯಾಗಿ ಕಾಲಿಟ್ಟಿದೆ.
ಧೂಳೆಬ್ಬಿಸಿದ ಸೆಲ್ಟೋಸ್…: ಮೇಕ್ ಇನ್ ಇಂಡಿಯಾ ಕನಸಿಗೆ ಪೂರಕವಾಗಿಯೇ, ಕಿಯಾ ಸಂಸ್ಥೆ ಈ ಘಟಕದಲ್ಲಿ ತಯಾರಿಸಿದ ಮೊದಲ ಕಾರು, ಸೆಲ್ಟೋಸ್ ಎಸ್‌ಯುವಿ. ಇದನ್ನು ಘೋಷಿಸಿದ ಒಂದೇ ದಿನದಲ್ಲಿ 6046 ಕಾರುಗಳ ದಾಖಲೆ ಮಾರಾಟ ಕಂಡಿತ್ತು. ಕಳೆದ ತಿಂಗಳು 40,649 ಕಾರುಗಳು ಬಿಕರಿಯಾಗಿ, ದೇಶದಲ್ಲಿ ವೇಗದ ಮಾರಾಟ ಕಂಡ ಕಾರು ಸಂಸ್ಥೆಗಳ ಪೈಕಿ ಕಿಯಾಗೆ 4ನೇ ಸ್ಥಾನ ಲಭಿಸಿದೆ.
ಎಲೆಕ್ಟ್ರಿಕ್ ಕಾರುಗಳ ಕನಸು: ಭಾರತದ ರಸ್ತೆಗೆ ಹೊಂದಿಕೊಳ್ಳುವಂಥ, ಮಧ್ಯಮವರ್ಗ ಸ್ನೇಹಿ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸುವುದು ಕಿಯಾ ಇಂಡಿಯಾ ಘಟಕದ ಕನಸು. ಅದಕ್ಕೆ ಪೂರಕಾಗಿ ಅನಂತಪುರದ ಘಟಕವನ್ನು ವಿಶ್ವದರ್ಜೆಯಲ್ಲಿ ನಿರ್ಮಿಸಲಾಗಿದೆ. ಕಾರುಗಳು ಇಲ್ಲಿಂದಲೇ, ಏಷ್ಯಾ, ಯುರೋಪ್‌ನ ರಾಷ್ಟ್ರಗಳಿಗೆ ರಫ್ತಾಗಲಿವೆ. ವಾರ್ಷಿಕವಾಗಿ 3 ಲಕ್ಷ ಕಾರುಗಳ ಉತ್ಪಾದನೆ ಈ ಘಟಕದ ಅಗ್ಗಳಿಕೆ. ಇದೇ ಫ್ಯಾಕ್ಟರಿಯಲ್ಲಿ 2ನೇ ಉತ್ಪಾದನೆಯಾಗಿ “ಕಾರ್ನಿವಲ್’ ಕಾರುಗಳು 2020ರ ಜನವರಿಯಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಲಿವೆ. ಅಲ್ಲದೆ, ಸಬ್- 4ಎಂ ಎಸ್‌ಯುವಿ (ವೆನ್ಯು ರೈವಲ್) ಕೂಡ ಮುಂದಿನ ವರ್ಷದ ಆಟೋ ಎಕ್ಸ್‌ಪೋ ವೇಳೆಗೆ ಸಿದ್ಧಗೊಳ್ಳಲಿದೆ.
* ಕೀರ್ತಿ ಕೋಲ್ಗಾರ್