Advertisement

ಸಾಹಿತ್ಯದಲ್ಲಿ ಕಿ.ರಂ ನೆನಪು ಶಾಶ್ವತ

12:21 PM Aug 08, 2018 | |

ಬೆಂಗಳೂರು: ಕನ್ನಡದಲ್ಲಿ ಕಾವ್ಯಗಳು ಇರುವ ತನಕ ಕಿ.ರಂ. ನೆನಪು ಶಾಶ್ವತ ಎಂದು ಕವಿ ಸಿದ್ದಲಿಂಗಯ್ಯ ತಿಳಿಸಿದ್ದಾರೆ. ಜನಸಂಸ್ಕೃತಿ, ಅವಿರತ ಪುಸ್ತಕ ಹಾಗೂ ಬೆಂಗಳೂರು ಆರ್ಟ್‌ ಫೌಂಡೇಷನ್‌ ಸಂಯುಕ್ತಾಶ್ರಯದಲ್ಲಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ ನಡೆದ “ಕಾಡುವ ಕಿರಂ’ ಅಹೋರಾತ್ರಿ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ಕನ್ನಡ ಸಾಹಿತ್ಯ ಲೋಕವನ್ನು ಕಿರಂ ನಾಗರಾಜ್‌ರಷ್ಟು ಓದಿಕೊಂಡವರು ಮತ್ತೂಬ್ಬರಿಲ್ಲ. ಹಗಲು ರಾತ್ರಿಗಳೆನ್ನೆದೇ ಕಾವ್ಯಗಳ ಕುರಿತು ಚರ್ಚೆ ನಡೆಸುತ್ತಿದ್ದರು. ಸಾಹಿತ್ಯ ಕುರಿತು ಕೇವಲ ಬೋಧನೆ ಹಾಗೂ ಚರ್ಚೆಗೆ ಸೀಮಿತರಾಗದ ಅವರು ಪ್ರಾಣದ ಅಂಗು ತೊರೆದು ಕನ್ನಡ ಪರ ಹೋರಾಟಗಳಲ್ಲೂ ಭಾಗವಹಿಸುತ್ತಿದ್ದರು. ಹಾಗಾಗಿಯೇ ಅವರನ್ನು ಕನ್ನಡ ಸಾಹಿತ್ಯ ಲೋಕದ ಅರಿಸ್ಟಾಟಲ್‌ ಎಂದು ಕರೆಯುತ್ತಿದ್ದೆವು ಎಂದು ತಿಳಿಸಿದರು.

ಕಿರಂ ಮಾತು ಹಾಗೂ ವ್ಯಕ್ತಿತ್ವದಲ್ಲಿ ವ್ಯತ್ಯಾಸವಿರುತ್ತಿರಲಿಲ್ಲ. ಎಂದೂ ತೋರಿಕೆಯ, ಲೌಕಿಕ ಬದುಕನ್ನು ಮಾಡಿದವರಲ್ಲ. ಯಾವಾಗಲೂ ಹೊಸ ಪುಸ್ತಕ ಖರೀದಿಸ ಬೇಕು ಓದಬೇಕು ಎನ್ನುತ್ತಲೇ ಇದ್ದರು. ಸಣ್ಣ ವಿಚಾರಗಳ ಕುರಿತು ಸಾಕಷ್ಟು ಅಧ್ಯಯನ ಮಾಡುತ್ತಿದ್ದ ಅವರು ಚಿಕ್ಕವರು ದೊಡ್ಡವರು, ವಿದ್ಯಾವಂತರು ಅವಿದ್ಯಾವಂತರು ಎನ್ನುವ ಭೇದವಿಲ್ಲದೇ ಸದಾ ಚರ್ಚೆ ನಡೆಸುತ್ತಿದ್ದರು.

ಅವರ ಮುಂದೆ ಯಾರಾದರೂ ಕನ್ನಡ ಸಾಹಿತ್ಯ ಕುರಿತು ಅವಹೇಳನ ಮಾಡಿದರೆ ಅವರು ಜತೆ ನೇರವಾಗಿ ಜಗಳಕ್ಕೆ ಇಳಿಯುತ್ತಿದ್ದರು. ತನ್ನ ವಿದ್ಯಾರ್ಥಿ ಬಳಗವನ್ನು ಸದಾ ಗೆಳೆಯರಂತೆ ಕಂಡು ಅವರ ಏಳಿಗೆಗೆ ಬಯಸುತ್ತಿದ್ದರು. ಇಂತಹ ಮಹಾನ್‌ ವ್ಯಕ್ತಿತ್ವ ಮತ್ತೆ ಕನ್ನಡದಲ್ಲಿ ಹುಟ್ಟಿಬರಲು ಸಾಧ್ಯವಿಲ್ಲ ಎಂದರು. 

ಕವಯಿತ್ರಿ ಹೇಮಾ ಪಟ್ಟಣ ಶೆಟ್ಟಿ, ಕೆ.ಷರೀಪಾ, ಸಾಹಿತಿ ಹಾಡ್ಲಹಳ್ಳಿ ನಾಗರಾಜು, ಜಾನಪದ ಗಾಯಕ ಅಪ್ಪಗೆರೆ ತಿಮ್ಮರಾಜು ಅವರಿಗೆ ಕಿರಂ ಪುರಸ್ಕಾರ ನೀಡಿ ಗೌರವಿಸಲಾಯಿತು. “ಕಿರಂ ಹೊಸಕವಿತೆ’ ಎಂಬ ಪುಸ್ತಕ ಬಿಡುಗಡೆ ಹಾಗೂ ಕಿರಂ ಕುರಿತ ಕಿರುಚಿತ್ರ ಪ್ರದರ್ಶನ ಮಾಡಲಾಯಿತು. 

Advertisement

ಕಾರ್ಯಕ್ರಮದಲ್ಲಿ ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಅಧ್ಯಕ್ಷ ಎಂ.ಎಸ್‌.ಮೂರ್ತಿ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್‌, ಪತ್ರಕರ್ತರಾದ ಪ್ರದೀಪ್‌ ಮಾಲ್ಗುಡಿ, ದಿಲಾವರ್‌ ರಾಮದುರ್ಗ ಉಪಸ್ಥಿತರಿದ್ದರು. 

ಮಾದರಿ ವ್ಯಕ್ತಿತ್ವ: ಅಧಿಕಾರಕ್ಕಿಂತ ವ್ಯಕ್ತಿತ್ವಕ್ಕೆ ಸಮಾಜದಲ್ಲಿ ಬೆಲೆ ಇದೆ. ಹಾಗಾಗಿಯೇ ಇಂದಿಗೂ ಸರಳತೆ ಜೀವನ ನಡೆಸಿದ ಅಂಬೇಡ್ಕರ್‌, ಲೋಹಿಯಾ, ಜಯಪ್ರಕಾಶ್‌ ನಾರಾಯಣ್‌, ಅಬ್ದುಲ್‌ ಕಲಾಂ ಅವರನ್ನು ಜನ ನೆನೆಯುತ್ತಿದ್ದಾರೆ. ಅಂತಹವರ ಸಾಲಿಗೆ ಸೇರುವ ವ್ಯಕ್ತಿತ್ವ ಕಿರಂ ನಾಗರಾಜ ಅವರದ್ದಾಗಿತ್ತು.

ಇನ್ನು ರಾಜ್ಯದ ಎಲ್ಲಾ ಭಾಗಗಳಲ್ಲೂ ಕಿರಂ ನಾಗರಾಜ ಕುರಿತಾದ ಕಾರ್ಯಕ್ರಮಗಳನ್ನು ನಡೆಸುವ ಯೋಜನೆ ಇದೆ. ಅವರು ಜನ್ಮದಿನ ಅಂಗವಾಗಿ ಡಿಸೆಂಬರ್‌ ತಿಂಗಳಲ್ಲಿ ಮೂರು ದಿನಗಳ ಕಾಲ ನಾಟಕೋತ್ಸವ ಹಮ್ಮಿಕೊಳ್ಳುವ ಕುರಿತು ಚರ್ಚೆ ನಡೆಸಲಾಗುತ್ತಿದೆ ಸಂಸ್ಕೃತಿ ಚಿಂತಕ ಕಾಳೇಗೌಡ ನಾಗವಾರ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next