ನವದೆಹಲಿ: ಖೇಲೋ ಇಂಡಿಯಾ ಸ್ಕೂಲ್ ಗೇಮ್ಸ್ ಕೂಟದ ಮೂರನೇ ದಿನ ಕರ್ನಾಟಕ ಸ್ಪರ್ಧಿಗಳು 2 ಚಿನ್ನ ಸೇರಿದಂತೆ 10 ಪದಕ ಬಾಚಿಕೊಂಡಿದ್ದಾರೆ.
ಹೀಗಿದ್ದರೂ ಕರ್ನಾಟಕ ಮೂರನೇ ದಿನ 3ನೇ ಸ್ಥಾನಕ್ಕೆ ಕುಸಿದಿದೆ. ರಾಜ್ಯ ಒಟ್ಟಾರೆ 20 ಪದಕ ಬಾಚಿಕೊಂಡಿದೆ. ಒಟ್ಟು 25 ಪದಕ ಗೆದ್ದಿರುವ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ ಒಟ್ಟು 23 ಪದಕ ಬಾಚಿರುವ ಹರಿಯಾಣ 2ನೇ ಸ್ಥಾನದಲ್ಲಿದೆ.
ಈಜಿನಲ್ಲಿ 2 ಚಿನ್ನ: ಬಾಲಕಿಯರ 100 ಮೀ. ಬ್ರೆಸ್ಟ್ ಸ್ಟ್ರೋಕ್ ಈಜಿನಲ್ಲಿ ಇನ್‌ವೆಂಚರ್ ಅಕಾಡೆಮಿಯ ಸಲೋನಿ ದಲಾಲ್ 1 ನಿಮಿಷ 18 ಸೆಕೆಂಡ್ಸ್‌ನಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರು. 200 ಮೀ. ಫ್ರೀಸ್ಟೈಲ್ ಬಾಲಕಿಯರ ಈಜಿನಲ್ಲಿ ಖುಷಿ ದಿನೇಶ್ 2 ನಿಮಿಷ 12 ಸೆಕೆಂಡ್ಸ್‌ನಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರು. ಅವರು ಸೋಫಿಯಾ ಹೈಸ್ಕೂಲ್‌ನ ವಿದ್ಯಾರ್ಥಿನಿಯಾಗಿದ್ದಾರೆ. ಇನ್ನು ಬಾಲಕರ ವಿಭಾಗದ 50 ಮೀ. ಬಟರ್‌ಫ್ಲೈ ಈಜು ಕೂಟದಲ್ಲಿ ಎಂ. ಅರುಣ್ 24.64 ಸೆಕೆಂಡ್ಸ್‌ನಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಗೆದ್ದರೆ ಬಾಲಕಿಯರ ವಿಭಾಗದ 50 ಮೀ. ಬಟರ್‌ಫ್ಲೈ ವಿಭಾಗದಲ್ಲಿ 30.09 ಸೆಕೆಂಡ್ಸ್‌ನಲ್ಲಿ ಗುರಿ ತಲುಪಿದ ಸುವಾನ ಸಿ ಬಾಸ್ಕರ್ ಬೆಳ್ಳಿ ಪದಕ ಪಡೆದುಕೊಂಡರು.
ಬಾಲಕಿಯರ 400 ಮೀ. ವೈಯಕ್ತಿಕ ಮೆಡ್ಲೆನಲ್ಲಿ 5 ನಿಮಿಷ 36.49 ಸೆಕೆಂಡ್ಸ್‌ನಲ್ಲಿ ಗುರಿ ತಲುಪಿದ ಜಿ.ಸಚ್ಚಿ ಕಂಚಿನ ಪದಕ ಪಡೆದುಕೊಂಡರು. ಒಟ್ಟಾರೆ 5 ಪದಕ ಈಜಿನಲ್ಲಿ ರಾಜ್ಯ ತಂಡ 3ನೇ ದಿನ ಬಾಚಿತು ಎನ್ನುವುದು ವಿಶೇಷ.
ಕುಸ್ತಿಯಲ್ಲಿ ಕಂಚು ಗೆದ್ದ ಸೂರಜ್: ರಾಜ್ಯದ ಸೂರಜ್ ಸಂಜು ಅಣ್ಣಿಕೇರಿ ಗ್ರೀಕೋ ರೋಮನ್ 42 ಕೆ.ಜಿ ಬಾಲಕರ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದರು. ಇವರು ಧಾರವಾಡದ ಮೂಲದವರಾಗಿದ್ದಾರೆ.
ಸುಪ್ರಿಯಾಗೆ ಕಂಚು: ಮಹಿಳಾ ವಿಭಾಗದ ಹೈಜಂಪ್‌ನಲ್ಲಿ ಸುಪ್ರಿಯಾ 1.65 ಮೀ. ಜಿಗಿದು ಕಂಚಿನ ಪದಕ ಪಡೆದರು.
100ಮೀ.ನಲ್ಲಿ ಶಶಿಕಾಂತ್‌ಗೆ ಬೆಳ್ಳಿ: ಬಾಲಕರ ವಿಭಾಗದ 100 ಮೀ. ಓಟದಲ್ಲಿ ವಿ.ಎ.ಶಶಿಕಾಂತ್ 10.90 ಸೆಕೆಂಡ್ಸ್‌ನಲ್ಲಿ ಗುರಿ ಸೇರಿ ಬೆಳ್ಳಿ ಪದಕ ಪಡೆದುಕೊಂಡರು. ಇನ್ನು ಆಳ್ವಾಸ್‌ನ ನಾಗೇಂದ್ರ ಅಣ್ಣಪ್ಪ ನಾಯ್ಕ ಡಿಸ್ಕಸ್‌ನಲ್ಲಿ 50.01 ಮೀ.ದೂರ ಎಸೆದು ಕಂಚಿನ ಪದಕ ಗೆದ್ದರು.
ಪದಕ ಪಟ್ಟಿ
ರಾಜ್ಯ ಚಿನ್ನ ಬೆಳ್ಳಿ ಕಂಚು ಒಟ್ಟು
ಮಹಾರಾಷ್ಟ್ರ 9 7 9 25
ಹರಿಯಾಣ 9 6 8 23
ಕರ್ನಾಟಕ 9 5 6 20
ದಿಲ್ಲಿ 7 8 8 23
ತಮಿಳುನಾಡು 4 9 7 20