ಕಾಲೇಜ್ ಕ್ಯಾಂಪಸ್, ಅಲ್ಲೊಂದು ತರ್ಲೆ ಗ್ಯಾಂಗ್, ಅದರಲ್ಲೊಬ್ಬ ಹೀರೋ, ಯಾವ ಹುಡುಗಿಯರಿಗೂ ಮನ ಸೋಲದ ಆತ ಒಬ್ಟಾಕೆಯ ಹಿಂದೆ ಸುತ್ತುವುದು, ನೋಡ ನೋಡುತ್ತಲೇ ಅವರಿಬ್ಬರ ಲವ್‌ಸ್ಟೋರಿ “ಉತ್ತುಂಗ’ಕ್ಕೆ ಹೋಗುವುದು… ಈ ತರಹದ ಲವ್‌ಸ್ಟೋರಿಗಳನ್ನಿಟ್ಟುಕೊಂಡು ಹಲವು ಸಿನಿಮಾಗಳು ಬಂದಿವೆ. ಈ ವಾರ ತೆರೆಕಂಡಿರುವ “ಖಾಸಗಿ ಪುಟಗಳು’ ಕೂಡಾ ಇದೇ ಹಾದಿಯಲ್ಲಿ ಆರಂಭವಾಗಿ ನೋಡ ನೋಡುತ್ತಲೇ ಹೊಸ ಹಾದಿ ಹಿಡಿಯುವ ಸಿನಿಮಾ. ಸದ್ಯ ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ಹೊಸ ಪ್ರಯೋಗದ, ನೈಜತೆಗೆ ಹೆಚ್ಚು ಒತ್ತು ನೀಡುವ ಸಿನಿಮಾಗಳು ಬರುತ್ತಿವೆ. ಆ ಸಾಲಿಗೆ ಹೊಸ ಸೇರ್ಪಡೆ “ಖಾಸಗಿ ಪುಟಗಳು’.
ಒಂದು ಲವ್‌ಸ್ಟೋರಿಯನ್ನು ಎಷ್ಟು ನೈಜವಾಗಿ ಹಾಗೂ ಮನಸ್ಸಿಗೆ ಹತ್ತಿರವಾಗುವಂತೆ ಕಟ್ಟಿಕೊಡಲು ಸಾಧ್ಯವೋ, ಆ ತರಹದ ಒಂದು ಪ್ರಯತ್ನವನ್ನು ಚಿತ್ರತಂಡ ಇಲ್ಲಿ ಮಾಡಿದೆ. ಹಾಗಂತ ಚಿತ್ರದ ಕಥೆ ಈ ಹಿಂದೆ ಯಾರೂ ನೋಡಿರದ, ಕೇಳಿರದ ಕಥೆಯಲ್ಲ. ಆದರೆ, ಹೊಸಬರ ತಂಡ ನಿರೂಪಣೆಯಲ್ಲಿ ಹಾಗೂ ಅಲ್ಲಲ್ಲಿ ನೀಡುವ ಟ್ವಿಸ್ಟ್‌ಗಳ ಮೂಲಕ ಸಿನಿಮಾವನ್ನು ಹೆಚ್ಚು ಆಪ್ತವಾಗುವಂತೆ ಹಾಗೂ ಕೊಂಚ ಕಾಡುವಂತೆ ಮಾಡಿದೆ. ಆ ಮಟ್ಟಿಗೆ ಹೊಸಬರ ಪ್ರಯತ್ನವನ್ನು ಮೆಚ್ಚಬಹುದು.
ಕರಾವಳಿ ಪರಿಸರದಲ್ಲೇ ನಡೆಯುವ “ಖಾಸಗಿ ಪುಟಗಳು’ ಕೆಲವೇ ಕೆಲವು ಪಾತ್ರಗಳ ಸುತ್ತ ಸುತ್ತುವ ಸಿನಿಮಾ. ಈ ಸಿನಿಮಾದ ಪರಮ ಉದ್ದೇಶ ಲವ್‌ಸ್ಟೋರಿಯನ್ನು ಹೆಚ್ಚು ಆಪ್ತವಾಗುವಂತೆ ಕಟ್ಟಿಕೊಡುವುದು. ಅದೇ ಕಾರಣದಿಂದ ಚಿತ್ರದಲ್ಲಿ ಬರುವ ಇತರ ದೃಶ್ಯಗಳನ್ನು ಹೆಚ್ಚು ಎಳೆದಾಡದೇ, ಅಲ್ಲಲ್ಲೇ ಮುಗಿಸಿ, ಪ್ರೇಮಕಥೆಯನ್ನೇ ಮುಂದೆ ತಂದಿದೆ.
ಚಿತ್ರದ ಮೊದಲರ್ಧ ಕಾಲೇಜು, ಹುಡುಗಿ ಹಿಂದೆ ಬೀಳುವ ನಾಯಕ, ಕಣ್ಣಲ್ಲೇ ಕೊಲ್ಲೋ ನಾಯಕಿ, ತರ್ಲೆ ಫ್ರೆಂಡ್ಸ್ ಸುತ್ತ ಸಾಗಿದರೆ, ಸಿನಿಮಾದ ಜೀವಾಳ ದ್ವಿತೀಯಾರ್ಧ. ಇಡೀ ಸಿನಿಮಾದ ಕಥೆ ನಿಂತಿರೋದು ಇಲ್ಲೇ… ಇಲ್ಲಿ ಹಲವು ಟ್ವಿಸ್ಟ್ ಗಳು ಎದುರಾಗುವ ಜೊತೆಗೆ ಒಂದಷ್ಟು ಕುತೂಹಲವನ್ನು ಹುಟ್ಟಿಸುತ್ತಾ ಚಿತ್ರ ಸಾಗುತ್ತದೆ. ಪ್ರೇಕ್ಷಕನ ಊಹೆಗೆ ನಿಲುಕದೇ ಕಥೆ ಸಾಗುವುದು ಕೂಡಾ ಇಲ್ಲಿನ ಪ್ಲಸ್ ಎಂದೇ ಹೇಳಬಹುದು.
ಚಿತ್ರದಲ್ಲಿ ನಾಯಕ ವಿಶ್ವ ಪ್ರೇಮಿಯಾಗಿ ಇಷ್ಟವಾಗುತ್ತಾರೆ. ನಾಯಕಿ ಲಿಯೋನಿಲ್ಲ ಶ್ವೇತಾ ಡಿಸೋಜಾ ಮುಖಭಾವದಲ್ಲೇ ನಟಿಸಿ, ಭರವಸೆ ಮೂಡಿಸಿದ್ದಾರೆ. ಉಳಿದಂತೆ ಮೋಹನ್ ಜುನೇಜ, ಪ್ರಶಾಂತ್ ನಟನಾ, ಶ್ರೀಧರ್, ಚೇತನ್ ದುರ್ಗಾ, ನಂದಗೋಪಾಲ್, ನಿರೀಕ್ಷಾ ಶೆಟ್ಟಿ, ಮಂಗಳೂರು ದಿನೇಶ್ ಮುಂತಾದವರು “ಖಾಸಗಿ ಪುಟಗಳು’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಖಾಸಗಿ’ ಲವ್‌ಸ್ಟೋರಿಯನ್ನು ಒಮ್ಮೆ “ಬಹಿರಂಗ’ವಾಗಿ ನೋಡಲಡ್ಡಿಯಿಲ್ಲ.
ರವಿಪ್ರಕಾಶ್ ರೈ