Advertisement

ಕುತೂಹಲ ಮೂಡಿಸಿದ ಪರಮೇಶ್ವರ್‌- ಖರ್ಗೆ ಭೇಟಿ

03:50 AM Mar 04, 2017 | |

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಕೂಗು ಕೇಳಿ ಬರುತ್ತಿರುವ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ಅವರು ಲೋಕಸಭೆಯ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಕಾಂಗ್ರೆಸ್‌ ವಲಯದಲ್ಲಿ ಕುತೂಹಲ ಮೂಡಿಸಿದೆ.

Advertisement

ಸದಾಶಿವನಗರದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿದ್ದ ಡಾ.ಜಿ.ಪರಮೇಶ್ವರ್‌, ಒಂದೂವರೆ ಗಂಟೆಗಳ ಕಾಲ ಮಾತುಕತೆ ನಡೆಸಿದರು.

ಮುಂದಿನ ವಿಧಾನಸಭೆ ಚುನಾವಣೆ ಮುಗಿಯುವವರೆಗೂ ತಮ್ಮನ್ನೇ ಕೆಪಿಸಿಸಿ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರೆಸಲು ಹೈ ಕಮಾಂಡ್‌ ಜೊತೆ ಮಾತನಾಡುವಂತೆ ಪರಮೇಶ್ವರ್‌ ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ, ಪರಮೇಶ್ವರ್‌ ಅವರ ಮನವಿ ಬಗ್ಗೆ ಮಲ್ಲಿಕಾರ್ಜುನ ಖರ್ಗೆಯವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.

ಆದರೆ,  ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಜಾತಿ ಗಣತಿಯನ್ನು ಬಿಡುಗಡೆ ಮಾಡದಂತೆ ನೋಡಿಕೊಳ್ಳಿ ಮಲ್ಲಿಕಾರ್ಜು ಖರ್ಗೆಯವರು ಪರಮೇಶ್ವರ್‌ ಅವರಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

Advertisement

ಖರ್ಗೆ ಭೇಟಿ ನಂತರ ಸುದ್ದಿಗಾರರ ಜತೆ ಮಾತನಾಡಿದ ಪರಮೇಶ್ವರ್‌, ನಾನು ಅಧ್ಯಕ್ಷನಾಗಿ ಮುಂದುವರೆಯಬೇಕು ಎಂದು  ಪಕ್ಷದಲ್ಲಿ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಕೆಲವರು ಅಧ್ಯಕ್ಷ ಸ್ಥಾನ ಬದಲಾಯಿಸುವಂತೆ ಹೇಳುತ್ತಿದ್ದಾರೆ. ಎಲ್ಲದಕ್ಕೂ ಹೈ ಕಮಾಂಡ್‌ ತೀರ್ಮಾನ ಮಾಡುತ್ತದೆ. ನಾನು ಹೈದರಾಬಾದ್‌ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತು ಚರ್ಚೆ ಮಾಡಲು ಬಂದಿದ್ದೆ ಎಂದು ಹೇಳಿದರು.

ಪಕ್ಷ ತೊರೆದಿರುವ ಕುಮಾರ ಬಂಗಾರಪ್ಪ ಅವರ ರಾಜೀನಾಮೆ ಪತ್ರ ನನಗೆ ತಲುಪಿಲ್ಲ. ಅವರು ಪಕ್ಷ ತೊರೆದಿರುವುದು ಮಾಧ್ಯಮಗಳಿಂದ ತಿಳಿದಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಪಕ್ಷ ಸೇರುವವರ ಸಂಖ್ಯೆಯೂ ದೊಡ್ಡದಿದೆ ಎಂದು ಪರಮೇಶ್ವರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next