Advertisement

“ಲಕ್ಷ ಮತಗಳ ಅಂತರದಲ್ಲಿ ಖರ್ಗೆ ಸೋಲಲಿದ್ದಾರೆ’

09:23 AM Apr 23, 2019 | Lakshmi GovindaRaju |

ಬೆಂಗಳೂರು: “ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಈವರೆಗೆ ಹೊಂದಾಣಿಕೆ ರಾಜಕೀಯವನ್ನೇ ಮಾಡಿಕೊಂಡು ಬರುತ್ತಿದ್ದು, ಇದೇ ಮೊದಲ ಬಾರಿಗೆ ಅವರು ನಿಜವಾದ ಚುನಾವಣೆ ಎದುರಿಸುತ್ತಿದ್ದು, ಲಕ್ಷ ಮತಗಳ ಅಂತರದಿಂದ ಸೋಲಲಿದ್ದಾರೆ. ಸೋಲಿನ ಭೀತಿಯಿಂದ ಕ್ಷೇತ್ರದಲ್ಲಿ 100 ಕೋಟಿ ರೂ. ಖರ್ಚು ಮಾಡುತ್ತಿದ್ದು, ಭಾರೀ ಚುನಾವಣಾ ಅಕ್ರಮಗಳು ನಡೆಯುತ್ತಿವೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಆರೋಪಿಸಿದರು.

Advertisement

ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಲಬುರಗಿ ಕ್ಷೇತ್ರವು ಹೈವೋಲ್ಟೆàಜ್‌ ಕ್ಷೇತ್ರವಾಗಿದೆ. ಸೋಲಿನ ಭೀತಿಯಿಂದಾಗಿ ನಾಲ್ಕೈದು ದಿನದಿಂದ ಹೆಂಡ- ಹಣ ಹಂಚಲಾಗುತ್ತಿದೆ. ಪ್ರತಿ ಮತಗಟ್ಟೆಗೆ 1ರಿಂದ 5 ಲಕ್ಷ ರೂ. ಹಂಚುತ್ತಿದ್ದಾರೆ.

ಸಚಿವ ಪ್ರಿಯಾಂಕ್‌ ಖರ್ಗೆ ಸೇರಿ ಕಾಂಗ್ರೆಸ್‌ ಕಾರ್ಯಕರ್ತರ ಪಡೆ ಮತದಾರರ ಖರೀದಿ ದಂಧೆಯಲ್ಲಿ ತೊಡಗಿದೆ. ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್‌ ಎರಡು ದಿನ ಕಲಬುರಗಿಯಲ್ಲೇ ಇದ್ದು, ತೆರೆಮರೆಯಲ್ಲೇ ಖರ್ಗೆಯವರ ಗೆಲುವಿಗೆ ಕಸರತ್ತು ನಡೆಸಿದ್ದಾರೆ. ಈ ಸಂಬಂಧ ಆಯೋಗಕ್ಕೂ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಿಡಿ ಕಾರಿದರು.

ಪತ್ರಿಕಾಗೋಷ್ಠಿಯಲ್ಲಿ ರವಿಕುಮಾರ್‌ ಹೇಳಿದ್ದಿಷ್ಟು
* ಕಲಬುರಗಿ, ಬೀದರ್‌ನಲ್ಲಿ ಅತಿ ಹಿಂದುಳಿದ ಕೋಲಿ ಸಮುದಾಯವನ್ನು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಾದ 2 ತಿಂಗಳಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಭರವಸೆ ನೀಡಲಾಗಿದೆ. ಜತೆಗೆ ಬೀದರ್‌ನಲ್ಲಿನ ಕುರುಬ ಸಮುದಾಯ ಗೊಂಡ ಉಪಪಂಗಡ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಯಾಗಿದ್ದು, ಕಲಬುರಗಿಯಲ್ಲಿರುವ ಗೊಂಡ ಉಪಪಂಗಡವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಭರವಸೆ ನೀಡಲಾಗಿದೆ. ಹಾಗಾಗಿ ಎಲ್ಲ ಸಮುದಾಯಗಳು ಬಿಜೆಪಿ ಬೆಂಬಲಿಸುವ ವಿಶ್ವಾಸವಿದೆ.

* ತಮ್ಮ ಕೊಡುಗೆ ಏನು ಎಂದು ಖರ್ಗೆಯವರನ್ನು ಕೇಳಿದರೆ ಬುದ್ದ ವಿಹಾರ, ಕೇಂದ್ರ ವಿವಿ ಹಾಗೂ ಇಎಸ್‌ಐ ಆಸ್ಪತ್ರೆ ತೋರಿಸುತ್ತಾರೆ. ಈ ಕಟ್ಟಡಗಳನ್ನು ಕಮಿಷನ್‌ಗಾಗಿ ಕಟ್ಟಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಭಾರೀ ಭ್ರಷ್ಟ ರಾಜಕಾರಣಿ. ಎಲ್ಲ ಕಾಮಗಾರಿಯಲ್ಲೂ ಕಮೀಷನ್‌ ಪಡೆದಿದ್ದಾರೆ. ದೇಶ- ವಿದೇಶಗಳಲ್ಲಿ ಆಸ್ತಿ ಮಾಡಿದ್ದಾರೆ. ಅವರ ಆಸ್ತಿ ಬಗ್ಗೆ ತನಿಖೆಯಾಗಬೇಕು.

Advertisement

* ಬಿಜೆಪಿ ಅಭ್ಯರ್ಥಿ ಡಾ.ಉಮೇಶ್‌ ಜಾಧವ್‌ ಅವರು ಬಿಜೆಪಿಗೆ ಇನ್ನೂ ಹೊಂದಾಣಿಕೆಯಾಗಿಲ್ಲ ಎಂದು ಹೇಳಿಕೆ ನೀಡಿಲ್ಲ. ಪಕ್ಷಕ್ಕೆ ಹೊಸಬನಾಗಿದ್ದು, ಹಿರಿಯರು ಮಾರ್ಗದರ್ಶನ ಮಾಡಬೇಕೆಂದು ಕೋರಿದ್ದಾರೆಯೇ ಹೊರತು ಅಡ್ಜಸ್ಟ್‌ ಆಗಿಲ್ಲ ಎಂದು ಹೇಳಿಲ್ಲ.

ಲಿಂಗಾಯತ- ವೀರಶೈವ ಸಮುದಾಯ ವಿರೋಧಿಯಾದ ಖರ್ಗೆಯವರು, ಧರ್ಮ ವಿಭಜಿಸಲು ಸಿದ್ದರಾಮಯ್ಯ ಅವರಿಗೆ ಕುಮ್ಮಕ್ಕು ನೀಡಿದ್ದಾರೆ. ಲಿಂಗಾಯತ, ಕೋಲಿ ಸಮುದಾಯದಲ್ಲಿ ಯಾರನ್ನೂ ಬೆಳೆಸದೆ ತಾವೇ ಆಲದ ಮರದಂತೆ ಬೆಳೆದಿದ್ದಾರೆ. ಇದಕ್ಕೆಲ್ಲಾ ಜನ ಪಾಠ ಕಲಿಸಲಿದ್ದಾರೆ.
-ಎನ್‌.ರವಿಕುಮಾರ್‌, ವಿಧಾನ ಪರಿಷತ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next