Advertisement

ಖರ್ಗೆ ಭದ್ರ ಕೋಟೆಯಲ್ಲಿ ಬಿಜೆಪಿ ರಣಕಹಳೆ

09:39 AM Apr 18, 2019 | Lakshmi GovindaRaju |

ಕಲಬುರಗಿ: ರಾಜ್ಯದ ಹೈವೋಲ್ಟೆಜ್‌ ಕ್ಷೇತ್ರಗಳಲ್ಲಿ ಒಂದಾಗಿರುವ ಕಲಬುರಗಿ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಹಿಂದೆಂದೂ ಕಂಡರಿಯದ ಜಿದ್ದಾಜಿದ್ದಿ ಏರ್ಪಟ್ಟಿದೆ. ಮಾಡು ಇಲ್ಲವೇ ಮಡಿ ಎನ್ನುವ ಮಟ್ಟಿಗೆ ಬಿಜೆಪಿ ಹಾಗೂ ಕಾಂಗ್ರೆಸ್‌ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರಿಂದ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

Advertisement

ಕಾಂಗ್ರೆಸ್‌ ಸಂಸದೀಯ ನಾಯಕ ಹಾಗೂ ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆದಿರುವ ಮಲ್ಲಿಕಾರ್ಜುನ ಖರ್ಗೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ರಂಗದಲ್ಲಿ ಸಂಚಲನ ಮೂಡಿಸಿರುವ ಡಾ| ಉಮೇಶ ಜಾಧವ ಬಿಜೆಪಿ ಅಭ್ಯರ್ಥಿ ಆಗಿರುವುದರಿಂದ ಕ್ಷೇತ್ರದ ಚುನಾವಣೆ ಬಿಸಿಲಿನ ಪ್ರಖರದಷ್ಟೇ ಕಾವು ಪಡೆದುಕೊಂಡಿದೆ. ಕಣದಲ್ಲಿ 12 ಅಭ್ಯರ್ಥಿಗಳಿದ್ದರೂ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಹಾಗೂ ಬಿಜೆಪಿಯ ಡಾ| ಉಮೇಶ ಜಾಧವ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸೇರಿ ಇತರ ನಾಯಕರು ಈ ಸಲ ಕಲಬುರಗಿ ಲೋಕಸಭೆ ಕ್ಷೇತ್ರದಲ್ಲಿ ಕಮಲ ಅರಳಿಸಬೇಕೆಂಬ ತಂತ್ರಗಾರಿಕೆ ರೂಪಿಸಿ ಈಗಾಗಲೇ ದೃಢ ಹೆಜ್ಜೆ ಇಟ್ಟಿರುವುದರಿಂದ ಖರ್ಗೆ ಕೋಟೆಯಲ್ಲಿ ನಡುಕ ಶುರುವಾಗಿದೆ. ಈಗಾಗಲೇ ಮೋದಿ ಮಾ.6ರಂದು ಚುನಾವಣೆ ಕಹಳೆ ಮೊಳಗಿಸಿ ಹೋಗಿದ್ದಾರೆ. ಅಲ್ಲದೇ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಕಳೆದ ಒಂದೂವರೆ ತಿಂಗಳಿನಿಂದ ಕ್ಷೇತ್ರದಲ್ಲೇ ಬಿಡಾರ ಹೂಡಿ ಸಂಘಟನೆಯಲ್ಲಿ ತೊಡಗಿರುವುದು ಪರಿಣಾಮ ಬೀರುವ ಲಕ್ಷಣಗಳು ಕಂಡು ಬರುತ್ತಿವೆ.

ಸತತ 9 ಸಲ ವಿಧಾನಸಭೆಗೆ ಹಾಗೂ ಸತತ ಎರಡು ಸಲ ಲೋಕಸಭೆಗೆ ಪ್ರವೇಶಿಸಿ ಈಗ ಲೋಕಸಭೆಗೆ ಹ್ಯಾಟ್ರಿಕ್‌ ಗೆಲುವಿನ ಮೂಲಕ ದಾಖಲೆ ಬರೆಯಲು ಮುಂದಾಗಿರುವ ಖರ್ಗೆ ಅವರಿಗೆ ಈ ಸಲ ಗೆಲುವು ಸುಲಭವಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ನಿರ್ದಿಷ್ಟ ಮತ ಬ್ಯಾಂಕ್‌ ಹಾಗೂ ಅಭಿವೃದ್ಧಿ ಕಾರ್ಯ ಕೈ ಹಿಡಿಯಲಿವೆ ಎಂಬುದು ಕಾಂಗ್ರೆಸ್‌ನ ಲೆಕ್ಕಾಚಾರ. ಆದರೆ ಬಿರುಸಿನ ಸ್ಪರ್ಧೆ ಹಿನ್ನೆಲೆಯಲ್ಲಿಯೇ ಅಭ್ಯರ್ಥಿ ಖರ್ಗೆ ಕ್ಷೇತ್ರದಾದ್ಯಂತ ಸುತ್ತುತ್ತಿದ್ದಾರೆ. ಸ್ಟಾರ್‌ ಪ್ರಚಾರಕರಾಗಿದ್ದರೂ ಬೇರೆ ಕಡೆ ಪ್ರಚಾರಕ್ಕೆ ಹೋಗದಿರುವುದನ್ನು ನೋಡಿದರೆ ಎಷ್ಟರ ಮಟ್ಟಿಗೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ ಎಂಬುದನ್ನು ನಿರೂಪಿಸುತ್ತದೆ.

ಖರ್ಗೆ ಸಂಸದರಾಗಿ 10 ವರ್ಷಗಳ ಅವಧಿಯಲ್ಲಿ ತಾವು ಮಾಡಿರುವ ಅಭಿವೃದ್ಧಿ ಕಾರ್ಯ ಮುಂದಿಟ್ಟುಕೊಂಡು ಹಾಗೂ ಪ್ರಧಾನಿ ಮೋದಿ ಆಡಳಿತ ವೈಖರಿ ಟೀಕಿಸುತ್ತಾ ಮತಯಾಚಿಸುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರೇ ಪಕ್ಷದ ನಾಯಕರಾಗಿರುವುದರಿಂದ ಕಾಂಗ್ರೆಸ್‌ ಪಕ್ಷದಿಂದ ದೊಡ್ಡ ನಾಯಕರೇನೂ ಬರುತ್ತಿಲ್ಲ.

Advertisement

ಬಿಜೆಪಿಯಂತೂ ಪ್ರಧಾನಿ ಮೋದಿ ಹೆಸರಿನ ಮೇಲೆ ಮತಯಾಚಿಸುತ್ತಿದೆ. ಅಲ್ಲದೇ ಖರ್ಗೆ ಅವರು ಅಭಿವೃದ್ಧಿ ಮಾಡಿದ್ದೇಯಾದರೆ ಈ ಭಾಗ ಏಕೆ ಹಿಂದುಳಿಯಿತು ಎಂದು ಪ್ರಶ್ನಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಬದಲಾವಣೆಗಾಗಿ, ಮತ್ತೂಮ್ಮೆ ಮೋದಿ ಪ್ರಧಾನಿಯಾಗಲಿ ಎನ್ನುವ ನಿಟ್ಟಿನಲ್ಲಿ ಹಾಗೂ ಖರ್ಗೆ ತಮ್ಮ ಕುಟುಂಬಕ್ಕಾಗಿ ಪಕ್ಷದ ಹಿರಿಯರೆಲ್ಲರನ್ನೂ ಕಡೆಗಣಿಸಿದ್ದಾರೆ ಎಂಬಿತ್ಯಾದಿ ವಿಷಯಗಳ ಮೂಲಕ ಮತಯಾಚಿಸಲಾಗುತ್ತಿದೆ.

ಕಾಂಗ್ರೆಸ್‌ನ ಭದ್ರಕೋಟೆ: ಪ್ರಾರಂಭದಿಂದ ಹಿಡಿದು 14ನೇ ಸಂಸತ್ತಿನವರೆಗೂ ಸಾಮಾನ್ಯ ಲೋಕಸಭಾ ಕ್ಷೇತ್ರವಾಗಿ, 2009ರಿಂದ ಎಸ್ಸಿ ಮೀಸಲು ಕ್ಷೇತ್ರವಾಗಿರುವ ಕಲಬುರಗಿ ಲೋಕಸಭಾ ಕ್ಷೇತ್ರಕ್ಕೆ ನಡೆದ 16 ಚುನಾವಣೆಯಲ್ಲಿ ಒಂದು ಸಲ ಬಿಜೆಪಿ, ಮತ್ತೂಂದು ಸಲ ಜೆಡಿಎಸ್‌ ಗೆದ್ದಿದ್ದರೆ ಉಳಿದ 14 ಸಲವೂ ಕಾಂಗ್ರೆಸ್‌ ಗೆದ್ದಿದೆ. ಹೀಗಾಗಿ ಕಲಬುರಗಿ ಕಾಂಗ್ರೆಸ್‌ ಭದ್ರಕೋಟೆ. ಈ ಸಲ ಜಿಲ್ಲೆಯಲ್ಲಿ ಬಿಜೆಪಿ ಶಾಸಕರ ಸಂಖ್ಯೆ ಹೆಚ್ಚಳ ಜತೆಗೆ ಮೋದಿ ಹವಾ ನಡುವೆಯೂ ಖರ್ಗೆ ಅವರ ನಾಗಾಲೋಟ ಮುಂದುವರಿಯುವುದೇ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

ನಿರ್ಣಾಯಕ ಅಂಶ: ಸಂಸದ ಖರ್ಗೆ ವಿರುದ್ಧ ಸಿಡಿದೆದ್ದು ಹೊರ ಬಂದಿರುವ ಹಿರಿಯ ನಾಯಕರು ಹಾಗೂ ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ, ಬಾಬುರಾವ್‌ ಚಿಂಚನಸೂರ, ಡಾ| ಎ.ಬಿ. ಮಾಲಕರೆಡ್ಡಿ ಜತೆಗೆ ಇತ್ತೀಚೆಗಷ್ಟೇ ಪಕ್ಷಕ್ಕೆ ಸೇರ್ಪಡೆ ಆಗಿರುವ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಅವರ ಕಾರ್ಯ ಹಾಗೂ ತಮ್ಮ ಕ್ಷೇತ್ರದಲ್ಲಿ ಪಡೆಯುವ ಮತಗಳ ಆಧಾರವೇ ಪ್ರಮುಖವಾಗಿದೆ. ಅಲ್ಲದೇ ಕಾಂಗ್ರೆಸ್‌ ಹಾಗೂ ಬಿಜೆಪಿ ನಿರ್ದಿಷ್ಟ ಮತ ಬ್ಯಾಂಕ್‌ ಹೊಂದಿದೆ. ಪ್ರಬಲ ಲಿಂಗಾಯತ ಹಾಗೂ ಕುರುಬ ಸಮುದಾಯದ ಮತಗಳು ಯಾವ ಕಡೆ ವಾಲುತ್ತವೆಯೋ ಅದರ ಮೇಲೆ ಫಲಿತಾಂಶ ನಿರ್ಧರಿಸಬಹುದಾಗಿದೆ.

ಕ್ಷೇತ್ರ ವ್ಯಾಪ್ತಿ: ಕಲಬುರಗಿ ಜಿಲ್ಲೆಯ ಅಫಜಲಪುರ, ಜೇವರ್ಗಿ, ಕಲಬುರಗಿ ದಕ್ಷಿಣ, ಕಲಬುರಗಿ ಉತ್ತರ, ಕಲಬುರಗಿ ಗ್ರಾಮಾಂತರ, ಚಿತ್ತಾಪುರ, ಸೇಡಂ ಹಾಗೂ ಯಾದಗಿರಿ ಜಿಲ್ಲೆಯ ಗುರುಮಿಠಕಲ್‌ ಸೇರಿ ಎಂಟು ವಿಧಾನಸಭೆಗಳ ವ್ಯಾಪ್ತಿ ಹೊಂದಿದೆ. ನಾಲ್ಕರಲ್ಲಿ ಕಾಂಗ್ರೆಸ್‌ ಶಾಸಕರಿದ್ದರೆ ಉಳಿದ ಮೂವರಲ್ಲಿ ಬಿಜೆಪಿ ಹಾಗೂ ಒಬ್ಬರು ಜೆಡಿಎಸ್‌ ಪಕ್ಷದ ಶಾಸಕರಿದ್ದಾರೆ.

ಒಟ್ಟು ಮತದಾರರು 19,20977
ಪುರುಷರು 967936
ಮಹಿಳೆಯರು 953041

ಜಾತಿ ಲೆಕ್ಕಾಚಾರ
ಲಿಂಗಾಯತರು 5.20 ಲಕ್ಷ
ಕುರುಬರು 2 ಲಕ್ಷ
ಪರಿಶಿಷ್ಟ ಜಾತಿ 4 ಲಕ್ಷ (ಬಂಜಾರಾ ಸಮುದಾಯ 1.65 ಲಕ್ಷ )
ಮುಸ್ಲಿಂ 3 ಲಕ್ಷ
ಕಬ್ಬಲಿಗರು 2.20 ಲಕ್ಷ
ಬ್ರಾಹ್ಮಣರು 90 ಸಾವಿರ

* ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next