ವಾಡಿ: ಸಂವಿಧಾನ ಶಿಲ್ಪಿ ಡಾ| ಬಿ.ಆರ್.ಅಂಬೇಡ್ಕರ್ ಭೇಟಿ ನೀಡಿದ ಕರ್ನಾಟಕದ ಏಳು ಸ್ಥಳಗಳ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರ 25 ಕೋಟಿ ರೂ. ಅನುದಾನ ಮೀಸಲಿಟ್ಟಿದೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಶನಿವಾರ ಪಟ್ಟಣಕ್ಕೆ ಭೇಟಿ ನೀಡಿದ ಅವರು ಅಂಬೇಡ್ಕರ್ ಪ್ರತಿಮೆಗೆ ಪುಷ್ಪಮಾಲೆ ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಅಂಬೇಡ್ಕರ್ ವಾಸವಿದ್ದ ಪಂಚಕ್ಷೇತ್ರಗಳ ಅಭಿವೃದ್ಧಿಗೆ ಪ್ರಧಾನಿ ಮೋದಿ ಹೇಗೆ ಶ್ರಮಿಸಿದ್ದಾರೋ ಅದೇ ಮಾದರಿಯಲ್ಲಿ ಬಾಬಾಸಾಹೇಬರು ಭೇಟಿ ನೀಡಿದ ಕರ್ನಾಟಕದ ಕಲಬುರಗಿ ಜಿಲ್ಲೆಯ ವಾಡಿ ನಗರ, ಕೋಲಾರದ ಕೆಜಿಎಫ್, ಬೆಂಗಳೂರು, ಹಾಸನ, ಧಾರವಾಡ, ವಿಜಯಪುರ, ಬೆಳಗಾವಿ ಸ್ಥಳಗಳನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಅಭಿವೃದ್ಧಿಪಡಿಸಲು ಸಿಎಂ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದೆ. ಪರಿಣಾಮ ಮುಖ್ಯಮಂತ್ರಿಗಳು ಏಳು ಕ್ಷೇತ್ರಗಳಿಗೆ ಅನುದಾನ ನೀಡಿದ್ದಾರೆ. ಅಗತ್ಯಬಿದ್ದರೆ 100 ಕೋಟಿ ರೂ.ಗೂ ಹೆಚ್ಚು ಅನುದಾನ ನೀಡುತ್ತಾರೆಂಬ ಭರವಸೆಯಿದೆ. ಆಯಾ ಸ್ಥಳೀಯ ಮುಖಂಡರ ಅಭಿಪ್ರಾಯದಂತೆ ಸರ್ಕಾರವೇ ಈ ಕ್ಷೇತ್ರಗಳನ್ನು ಸೋಷಿಯಲ್ ವೆಲ್ಫೇರ್ ಮೂಲಕ ಅಭಿವೃದ್ಧಿಪಡಿಸಲಿದೆ. ಒಟ್ಟಾರೆ ಅಂಬೇಡ್ಕರ್ ಪಾದ ಸ್ಪರ್ಷಿಸಿದ ರಾಜ್ಯದ ಜಾಗಗಳಲ್ಲಿ ಸ್ಮಾರಕ, ವಿದ್ಯಾಮಂದಿರ, ಧ್ಯಾನಕೇಂದ್ರ, ಗ್ರಂಥಾಲಯ, ಭವನಗಳ ನಿರ್ಮಾಣ ಕಾರ್ಯ ಸ್ಥಳೀಯ ಮುಖಂಡರ ಸಲಹೆಗಳ ಮೆರೆಗೆ ನಡೆಯಲಿದೆ ಎಂದು ವಿವರಿಸಿದರು.
ಕಾಂಗ್ರೆಸ್ನಲ್ಲಿ ಖರ್ಗೆ ಸಿಎಂ ಆಗಲ್ಲ: 60 ವರ್ಷ ಕಾಲ ಕಾಂಗ್ರೆಸ್ ದೇಶವನ್ನು ಆಳಿದೆ. ದಲಿತರ ದೊಡ್ಡ ನಾಯಕರೊಬ್ಬರು ಕಳೆದ ಐವತ್ತು ವರ್ಷಗಳಿಂದ ಕಲಬುರಗಿ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದಾರೆ. ಅಂಬೇಡ್ಕರ್ ಹೆಸರಿನ ಪಂಚ ಕ್ಷೇತ್ರಗಳನ್ನು ಮೋದಿ ಗುರುತಿಸಿದರು. ಈಗ ರಾಜ್ಯದ ಏಳು ಕ್ಷೇತ್ರಗಳನ್ನು ಬಿಜೆಪಿ ಗುರುತಿಸಿದೆ. ಕಾಂಗ್ರೆಸ್ ಏಕೆ ಗುರುತಿಸಲಿಲ್ಲ? ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಯಾರು? ಅಂಬೇಡ್ಕರ್ ವಿರೋ ಧಿಗಳು ಬಿಜೆಪಿನಾ? ಕಾಂಗ್ರೆಸ್ಸಾ? ಎಂಬುದನ್ನು ಜನ ತೀರ್ಮಾನ ಮಾಡಲಿ. ಅಲ್ಲದೆ ಅರವತ್ತು ವರ್ಷಗಳಿಂದ ದಲಿತರು ಮುಖ್ಯಮಂತ್ರಿ ಆಗಬೇಕು ಎಂದು ಹೋರಾಟ ನಡೆಯುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಪ್ರಬಲವಾಗಿ ಕೇಳಿಬಂದಿತ್ತು. ನಂತರ ಜಿ.ಪರಮೇಶ್ವರ, ಕೆ.ಎಚ್. ಮುನಿಯಪ್ಪ, ಟಿ.ಎನ್.ನರಸಿಂಹಮೂರ್ತಿ, ಎನ್.ರಾಚಯ್ಯ ಸೇರಿದಂತೆ ದೊಡ್ಡ ನಾಯಕ ಎನ್ನಿಸಿಕೊಂಡ ಬಸವಲಿಂಗಪ್ಪ ಅವರನ್ನೂ ಮಾಡಲಿಲ್ಲ. ಇಂದು ಹೇಳ ಹೆಸರಿಲ್ಲದಂತೆ ನಾಶವಾಗಿರುವ ಕಾಂಗ್ರೆಸ್ ಪಕ್ಷದಿಂದ ಖರ್ಗೆ ಸಿಎಂ ಆಗ್ತಾರಾ? ಎಂದು ವ್ಯಂಗ್ಯವಾಡಿದ ನಾರಾಯಣಸ್ವಾಮಿ, ಬಿಜೆಪಿಯಲ್ಲಿ ದಲಿತರು ಮುಖ್ಯಮಂತ್ರಿ ಆಗುವ ಅವಕಾಶಗಳಿವೆ. ಆ ದಿನಗಳು ಬರುತ್ತವೆ ಕಾಯ್ದು ನೋಡಿ ಎಂದರು.
ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಟಗಿ, ಭಾಜಪ ನಗರ ಶಕ್ತಿಕೇಂದ್ರ ಅಧ್ಯಕ್ಷ ಶಿವರಾಮ ಪವಾರ, ಪ್ರಧಾನ ಕಾರ್ಯದರ್ಶಿ ರಾಹುಲ ಸಿಂಧಗಿ, ತಾಲೂಕು ಉಪಾಧ್ಯಕ್ಷರಾದ ಗಿರಿಮಲ್ಲಪ್ಪ ಕಟ್ಟಿಮನಿ, ವೀರಣ್ಣ ಯಾರಿ, ಎಸ್‌ಸಿ ಮೋರ್ಚಾ ತಾಲೂಕು ಅಧ್ಯಕ್ಷ ರಾಜು ಮುಕ್ಕಣ್ಣ, ಮುಖಂಡರಾದ ವಿಠ್ಠಲ ವಾಲ್ಮೀಕಿ ನಾಯಕ, ಆನಂದ ಇಂಗಳಗಿ, ವಿಶಾಲ ನಿಂಬರ್ಗಾ, ದೌಲತರಾವ ಚಿತ್ತಾಪುರಕರ, ಭೀಮಶಾ ಜಿರೊಳ್ಳಿ, ಸಿದ್ದಣ್ಣ ಕಲಶೆಟ್ಟಿ, ಕಿಶನ್ ಜಾಧವ, ರವಿ ನಾಯಕ, ಹರಿ ಗಲಾಂಡೆ, ಭಾಗವತ ಸುಳೆ, ಕಿಶೋರ ಮಂಗಳೂರ ಪಾಲ್ಗೊಂಡಿದ್ದರು.