Advertisement

ಖರಾಬು –ಬಿ ಜಮೀನು ಮಾರಟಕ್ಕೆ ಒತ್ತು

11:53 AM Feb 28, 2018 | |

ಬೆಂಗಳೂರು: ಆರ್ಥಿಕ ಸಂಕಷ್ಟದಿಂದ ಹೊರಬರಲು ಬಿಬಿಎಂಪಿ ತನ್ನ ವ್ಯಾಪ್ತಿಯಲ್ಲಿರುವ “ಖರಾಬು-ಬಿ’ ಜಮೀನುಗಳನ್ನು ಮಾರಾಟ ಮಾಡಲು ಮುಂದಾಗಿದೆ. ಈ ಸಂಬಂಧದ ಕಾಯ್ದೆಗೆ ಅಗತ್ಯ ತಿದ್ದುಪಡಿ ತರಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ.

Advertisement

ಮಂಗಳವಾರ ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಖರಾಬು-ಬಿ ಜಮೀನು ವಾಸ್ತವವಾಗಿ ಮಾರಾಟ ಮಾಡಲು ಬರುವುದಿಲ್ಲ. ಆದರೆ, ಈ ಸಂಬಂಧ ಕಾಯ್ದೆಗೆ ತಿದ್ದುಪಡಿ ತಂದು, ಆ ಮೂಲಕ ಮಾರಾಟಕ್ಕೆ ಅವಕಾಶ ಮಾಡಿಕೊಡುವಂತೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಪಾಲಿಕೆ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ತಿಳಿಸಿದರು. 

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಪ್ರದ್ಮನಾಭ ರೆಡ್ಡಿ, “ನಗರದಲ್ಲಿ 1,01,183 ಎಕರೆ ಖರಾಬು-ಬಿ ಭೂಮಿ ಇದೆ. ಇದೆಲ್ಲವೂ ನೂರಾರು ವರ್ಷಗಳ ಹಿಂದೆ ಕಾಲುದಾರಿ, ಬಂಡಿ ದಾರಿಯಾಗಿತ್ತು. ಈಗ ಅಲ್ಲೆಲ್ಲಾ ದೊಡ್ಡ ಕಟ್ಟಡಗಳು ತಲೆಯೆತ್ತಿವೆ. ಇದನ್ನು ಆಯಾ ಜಮೀನಿನಲ್ಲಿ ವಾಸಿಸುವವರಿಗೇ ಮಾರಾಟ ಮಾಡಿದರೆ, ಲಕ್ಷಾಂತರ ಕೋಟಿ ರೂ. ಪಾಲಿಕೆಗೆ ಹರಿದುಬರಲಿದೆ.

ಇದರಿಂದ ಆರ್ಥಿಕ ಸಂಕಷ್ಟದಿಂದ ಹೊರಬರಲಿಕ್ಕೂ ಸಾಧ್ಯವಾಗುತ್ತದೆ’. ಲಕ್ಷ ಎಕರೆ ಜಮೀನಿನಲ್ಲಿ ಬಫ‌ರ್‌ ಝೋನ್‌, ಒತ್ತುವರಿಯನ್ನು ಹೊರತುಪಡಿಸಿ, ಕನಿಷ್ಠ 20 ಸಾವಿರ ಎಕರೆಯಷ್ಟು ಜಮೀನು ಹೀಗೆ ಮಾರಾಟ ಮಾಡಲು ಸಾಧ್ಯವಿದೆ ಎಂದು ಸಭೆ ಗಮನಕ್ಕೆ ತಂದರು. ಇದಕ್ಕೆ ಮೇಯರ್‌ ಸಂಪತ್‌ರಾಜ್‌, ಈ ಸಂಬಂಧದ ಪ್ರಸ್ತಾವನೆ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು’ ಎಂದು ಹೇಳಿದರು. 

ಕೆಸಿಡಿಸಿ ದುರ್ವಾಸನೆ: ಕೆಸಿಡಿಪಿ ವಿಷಯ ಪ್ರಸ್ತಾಪಿಸಿದ ಶಾಸಕ ಸತೀಶ್‌ ರೆಡ್ಡಿ, “ಕೆಸಿಡಿಸಿ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ತ್ಯಾಜ್ಯ ವಿಲೇವಾರಿ ಅಸಮರ್ಪಕ ಮತ್ತು ಅವೈಜ್ಞಾನಿಕವಾಗಿ ಆಗುತ್ತಿದೆ. ಅಲ್ಲದೆ, ಕಸ ಸಾಗಣೆ ವಾಹನಗಳಿಂದ ಎಚ್‌ಎಸ್‌ಆರ್‌ ಲೇಔಟ್‌ ಸೇರಿದಂತೆ ಸುತ್ತಲಿನ ಬಡಾವಣೆಗಳ ನಿವಾಸಿಗಳಿಗೆ ತೀವ್ರ ಕಿರಿಕಿರಿಯಾಗಿದೆ. ತಕ್ಷಣ ಘಟಕ ಮುಚ್ಚಬೇಕು’ ಎಂದು ಆಗ್ರಹಿಸಿದರು. 

Advertisement

ಇದಕ್ಕೆ ಪ್ರತಿಕ್ರಿಯಿಸಿದ ಮಂಜುನಾಥ ಪ್ರಸಾದ್‌, ನಗರದ ಹೃದಯ ಭಾಗದಲ್ಲಿ ಒಟ್ಟಾರೆ ಏಳು ತ್ಯಾಜ್ಯ ಸಂಸ್ಕರಣಾ ಘಟಕಗಳಿದ್ದು, ಸುತ್ತಲಿನ ನಿವಾಸಿಗಳಾರಿಗೂ ಈ ಘಟಕಗಳಿರುವುದು ಇಷ್ಟವಿಲ್ಲ. ಹಾಗೊಂದು ವೇಳೆ ಕೆಸಿಡಿಸಿ ಘಟಕ ಮುಚ್ಚಿದರೆ, ಉಳಿದ ಕಡೆಯಿಂದಲೂ ಒತ್ತಾಯ ಕೇಳಿಬರುತ್ತದೆ ಎಂದರು. “ಘಟಕ ಸ್ಥಗಿತಗೊಳಿಸಿದರೆ, ಮಾಡಿರುವ ಖರ್ಚೆಲ್ಲವೂ ನಿರರ್ಥಕವಾಗುತ್ತದೆ ಎಂದು ಮಂಜುನಾಥ್‌ ರೆಡ್ಡಿ ಉತ್ತರಿಸಿದರು.

ಇದಕ್ಕೆ ಒಪ್ಪದ ಶಾಸಕರು, ಎಚ್‌ಎಸ್‌ಆರ್‌ ಲೇಔಟ್‌ ಸುತ್ತಲಿನ ಕಸವೇ ಅಲ್ಲಿಗೆ ಹೋಗುವುದಿಲ್ಲ. ಹೀಗಿರುವಾಗ, ಇಡೀ ನಗರದ ಕಸ ನಾವು ಹಾಕಿಸಿಕೊಳ್ಳಬೇಕಾ? ಒಂದು ವೇಳೆ ನೀವು ಸ್ಥಗಿತಗೊಳಿಸದಿದ್ದರೆ, ಸ್ಥಳೀಯರ ಜೊತೆ ಪ್ರತಿಭಟಿಸಬೇಕಾದೀತು ಎಂದು ಎಚ್ಚರಿಸಿದರು. ಆಯುಕ್ತ ಮಂಜುನಾಥ ಪ್ರಸಾದ್‌, “ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದಷ್ಟೇ ಹೇಳಿ ತೆರೆ ಎಳೆದರು. 

ಅನುದಾನ ಬಳಕೆ ಲೋಪ: ಸ್ವತ್ಛ ಭಾರತ ಯೋಜನೆ ಅಡಿ ಕೇಂದ್ರ ಸರ್ಕಾರ ನೀಡಿದ 154.98 ಕೋಟಿ ರೂ.ಗಳನ್ನು ಶೌಚಾಲಯಗಳ ನಿರ್ಮಾಣ ಮತ್ತು ಅವುಗಳ ಮೂಲಸೌಕರ್ಯ ಕಲ್ಪಿಸಲು ಮಾತ್ರ ಬಳಕೆ ಮಾಡಬೇಕು ಎಂಬ ಸ್ಪಷ್ಟ ನಿಯಮ ಇದೆ. ಆದರೆ, ರಸ್ತೆ, ಕಾಂಪೌಂಡ್‌ ಸೇರಿದಂತೆ ಅನ್ಯ ಉದ್ದೇಶಕ್ಕೆ ಬಳಕೆ ಮಾಡುವ ಮೂಲಕ ನಿಯಮ ಉಲ್ಲಂ ಸಲಾಗಿದೆ ಎಂದು ಜೆಡಿಎಸ್‌ ಸದಸ್ಯೆ ನೇತ್ರಾ ನಾರಾಯಣ್‌ ಆರೋಪಿಸಿದರು.

ಇದಕ್ಕೆ ಸ್ಪಷ್ಟನೆ ನೀಡಿದ ಆಯುಕ್ತರು, ರಾಜ್ಯ ಸರ್ಕಾರದ ಅನುದಾನದಿಂದ 440 ಕೋಟಿ ವೆಚ್ಚದಲ್ಲಿ ನಗರದಲ್ಲಿ ಏಳು ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಕೇಂದ್ರದ ಪಾಲು ಶೇ. 20ರಷ್ಟು ಅಂದರೆ 88 ಕೋಟಿ ರೂ. ಆಗುತ್ತದೆ. ಇದೇ ಹಣವನ್ನು ಘಟಕಗಳಿಗೆ ಮೂಲಸೌಕರ್ಯ ಕಲ್ಪಿಸಲು ಬಳಕೆ ಮಾಡಲಾಗಿದೆ ಎಂದರು.

ಮುಂಬಡ್ತಿಯಲ್ಲಿ ತಾರತಮ್ಯ; ಆಕ್ರೋಶ: ಪ್ರೊಬೇಷನರಿ ಮುಗಿಸಿಕೊಂಡು ಬರುವರಿಗೆಲ್ಲಾ ಮುಂಬಡ್ತಿ ಸಿಗುತ್ತಿದೆ. ಆದರೆ, 10-12 ವರ್ಷಗಳಿಂದ ಬಿಬಿಎಂಪಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳಿಗೆ ಮಾತ್ರ ತಡವಾಗಿ ಸಿಗುತ್ತಿದೆ. ಈ ಧೋರಣೆ ಯಾಕೆ? ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಮಂಜುನಾಥ ರೆಡಿ ಆಕ್ರೋಶ ವ್ಯಕ್ತಪಡಿಸಿದರು. ದನಿಗೂಡಿಸಿದ ಪದ್ಮನಾಭ ರೆಡ್ಡಿ, “ಸೇವಾ ಜೇಷ್ಠತಾ ಪಟ್ಟಿಯಲ್ಲಿ ನಿಯಮಿತವಾಗಿ ಅಧಿಕಾರಿಗಳಿಗೆ ಮುಂಬಡ್ತಿ ನೀಡಬೇಕು. ಬಲಾಡ್ಯರಿಗೆ ಮಾತ್ರ ಮುಂಬಡ್ತಿ, ಉಳಿದವರಿಗೆ ಏನೂ ಇಲ್ಲ’ ಎಂದು ದೂರಿದರು.

ಉಪ ಮೇಯರ್‌ ಹೆಸರಿಲ್ಲ: ಲ್ಯಾಪ್‌ಟಾಪ್‌ ಸೇರಿದಂತೆ ಯಾವುದೇ ಪತ್ರಿಕೆ ಆಮಂತ್ರಣ, ಜಾಹಿರಾತುಗಳಲ್ಲಿ ಉಪ ಮೇಯರ್‌ ಹೆಸರು ಇರುವುದಿಲ್ಲ. ಈ ನಿರ್ಲಕ್ಷ್ಯ ಧೋರಣೆ ಯಾಕೆ? ಸಂವಹನದ ಕೊರತೆ ಎದ್ದುಕಾಣುತ್ತಿದೆ. ಇದು ಪುನರಾವರ್ತನೆ ಆಗಬಾರದು ಎಂದು ವಿಧಾನ ಪರಿಷತ್‌ ಸದಸ್ಯ ರಮೇಶ್‌ಬಾಬು ಆರೋಪಿಸಿದರು.  ಮೇಯರ್‌ ಸಂಪತ್‌ ರಾಜ್‌ ಮಾತನಾಡಿ, ಡಿಪಿಎಆರ್‌ನಲ್ಲಿ ಈ ಜಾಹಿರಾತು ಸಿದ್ಧಗೊಳ್ಳುವುದರಿಂದ ಹೆಸರು ಕೈಬಿಟ್ಟು ಹೋಗಿರಬಹುದು. ಆದರೆ, ಈ ಬಗ್ಗೆ ಡಿಪಿಎಆರ್‌ ಜತೆ ಮಾತನಾಡಿ, ಪುನರಾವರ್ತನೆ ಆಗದಂತೆ ನೋಡಿಕೊಳ್ಳುವಂತೆ ಆಯುಕ್ತರಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next