ಬೆಳಗಾವಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹ ವ್ಯಕ್ತಿ. ಅದರಲ್ಲಿ ಎರಡು ಮಾತಿಲ್ಲ. ಆದರೆ, ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲದಿರುವಾಗ ಇದರ ಬಗ್ಗೆ ಅನಗತ್ಯ ಚರ್ಚೆ ಮಾಡುವುದು ಸರಿಯಲ್ಲ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಖಾರವಾಗಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿ, ಮುಖ್ಯಮಂತ್ರಿ ಸ್ಥಾನ ಐದು ವರ್ಷಗಳಿಗೆ ಒಪ್ಪಂದ ಆಗಿದೆ. ಹೀಗಿರುವಾಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅರ್ಹವಾದ ವ್ಯಕ್ತಿ ಎಂದು ಹೇಳುವ ಅಗತ್ಯವಿರಲಿಲ್ಲ.
ಪದೇ ಪದೆ ಈ ವಿಚಾರವನ್ನು ಪ್ರಸ್ತಾಪ ಮಾಡುವುದು ಸರಿಯಲ್ಲ. ನಿಮಗೆ ಬದಲಾವಣೆ ಮಾಡುವ ಮನಸ್ಸಿದ್ದರೆ ಮಾಡಿ ಬಿಡಿ. ಅದನ್ನು ಬಿಟ್ಟು ಒಮ್ಮೆ ಸಿದ್ದರಾಮಯ್ಯ ಹೆಸರು, ಮತ್ತೂಮ್ಮೆ ಖರ್ಗೆ ಅವರ ಹೆಸರು, ಇನ್ನೊಮ್ಮೆ ಮತ್ತೂಬ್ಬರ ಹೆಸರು ಪ್ರಸ್ತಾಪ ಮಾಡುವುದು ಸರಿಯಲ್ಲ ಎಂದರು.
ಈ ರೀತಿಯ ಹೇಳಿಕೆಗಳಿಂದ ಪರಸ್ಪರ ಸಂಬಂಧ ಹದಗೆಡುತ್ತದೆ. ವೈಯಕ್ತಿಕ ಟೀಕೆಗಳು ಹೆಚ್ಚಾಗುತ್ತವೆ. ಶಬ್ದಗಳು ತೂಕದಲ್ಲಿರಬೇಕು. ಕೆಲವೊಮ್ಮೆ ಟೀಕೆಗಳು ಭಾರೀ ನಷ್ಟ ಉಂಟು ಮಾಡುತ್ತವೆ. ಈಗ ಸಮ್ಮಿಶ್ರ ಸರ್ಕಾರ ಚೆನ್ನಾಗಿಯೇ ನಡೆಯುತ್ತಿದೆ. ಅದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.
ಮುಖ್ಯಮಂತ್ರಿ ಸ್ಥಾನ ಖಾಲಿ ಇದ್ದಾಗ ಆ ಸ್ಥಾನಕ್ಕೆ ಯಾರನ್ನು ಮಾಡಬೇಕು. ಯಾರು ಇದ್ದರೆ ಉತ್ತಮ ಎಂಬುದರ ಬಗ್ಗೆ ಚರ್ಚೆ ನಡೆಯಲಿ. ವಿನಾಕಾರಣ ಚರ್ಚೆ ಮಾಡಿ ವಿವಾದ ಸೃಷ್ಟಿ ಮಾಡುವುದು ಬೇಡ. ಮಾಧ್ಯಮಗಳ ಮುಂದೆ ಏನೇನೋ ಮಾತನಾಡಿ ಪ್ರಚಾರ ಪಡೆಯುವುದರಿಂದ ಯಾರಿಗೂ ಒಳ್ಳೆಯದಾಗುವುದಿಲ್ಲ ಎಂದರು.