Advertisement

ರೈತರ ಸಾಲ ಮನ್ನಾ ತಡೆಯುವ ಹುನ್ನಾರ: ಖಂಡ್ರೆ ಆರೋಪ

11:24 AM Nov 12, 2018 | Team Udayavani |

ಕಲಬುರಗಿ: ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಪ್ರತಿಪಕ್ಷ ಬಿಜೆಪಿ ನಾಯಕರಿಗೆ ಭಯ ಮತ್ತು ಹೊಟ್ಟೆಕಿಚ್ಚು ಶುರುವಾಗಿದೆ. ಆದ್ದರಿಂದ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲ ಮನ್ನಾ ಆಗದಂತಹ ಹುನ್ನಾರಗಳು ನಡೆಯುತ್ತಿವೆ ಎಂದು ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಗಂಭೀರ ಆರೋಪ ಮಾಡಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದ ಅನ್ನಭಾಗ್ಯ ಸೇರಿದಂತೆ ಎಲ್ಲ ಯೋಜನೆಗಳನ್ನು ಸಮ್ಮಿಶ್ರ ಸರ್ಕಾರದಲ್ಲೂ ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಅಲ್ಲದೇ, ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸುಮಾರು 38 ಸಾವಿರ ಕೋಟಿ ರೂ. ಸಾಲವನ್ನು ಮನ್ನಾ ಮಾಡುವಂತೆ ಗಟ್ಟಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ರೈತರ ಸಾಲ ಮನ್ನಾವಾದಲ್ಲಿ ಜನತೆ ತಮ್ಮ ಮಾತು ಕೇಳಲ್ಲ ಎನ್ನುವ ಭಯ ಬಿಜೆಪಿಯವರಲ್ಲಿ ಕಾಡುತ್ತಿದೆ ಎಂದರು.

ಈಗಾಗಲೇ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ ಗಳಲ್ಲಿರುವ ಸಾಲ ಮನ್ನಾ ಜಾರಿಗೊಂಡಿದೆ. ಆದರೆ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲದ ಬಗ್ಗೆ ಮಾಹಿತಿ ನೀಡದಂತೆ ಬ್ಯಾಂಕ್‌ ಅಧಿಕಾರಿಗಳ ಮೇಲೆ ಬಿಜೆಪಿಯವರು ಒತ್ತಡ ಹೇರುತ್ತಿದ್ದಾರೆ. ರೈತರ ಸಾಲ ಮನ್ನಾದ ಅವಧಿ ಮುಗಿದಂತೆ ಏಕರೀತಿ ತಿರುವಳಿ ಮಾಡಲು ಪ್ರಯತ್ನಿಸುತ್ತಿದ್ದೇವೆ. ಸಾಲ ಮನ್ನಾ ಆಗದಂತೆ ತಡೆಯುವ ಬಿಜೆಪಿಯ ನೀತಿಗಳಿಂದ ತಡವಾಗುತ್ತಿದೆ. ಆದರೂ, ರೈತರು ಯಾವುದೇ ಆಂತಕ ಪಡುವುದು ಬೇಡ ಎಂದರು.

ಕೇಂದ್ರದ ಮೋದಿ ಸರ್ಕಾರ ದೇಶದ ಜನತೆಗೆ ಸುಳ್ಳು ಹೇಳುತ್ತಾ ಮೋಸ ಮತ್ತು ವಂಚನೆ ಮಾಡುವುದರಲ್ಲಿ ತೊಡಗಿದೆ. ನೋಟ್‌ ಬ್ಯಾನ್‌ ಮತ್ತು ಜಿಎಸ್‌ಟಿ ಜಾರಿಯಿಂದ ಸಾಮಾನ್ಯ ಜನರಿಗೆ ಮೋದಿ ಸರ್ಕಾರ ಪೆಟ್ಟುಕೊಟ್ಟಿದೆ. ನೋಟ್‌ ಬ್ಯಾನ್‌ ಮಾಡಿದ್ದು ದೇಶದ ಇತಿಹಾಸದಲ್ಲೇ ಮಹಾನ್‌ ಅಪರಾಧವಾಗಿದೆ ಎಂದು ಕಿಡಿಕಾರಿದರು.

ಮೋದಿ ಸರ್ಕಾರದ ತೀರ್ಮಾನಗಳಿಂದ ಉದ್ಯೋಗಸ್ಥರ ಸಂಖ್ಯೆ ಕುಸಿದಿದ್ದು, 25 ಲಕ್ಷ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಸಣ್ಣ ಕೈಗಾರಿಕೆಗಳು ಬಾಗಿಲು ಹಾಕಿಕೊಂಡಿವೆ. ನಿತ್ಯ ಬೆಲೆ ಏರಿಕೆಯಿಂದ ನಾಗರಿಕರು ತತ್ತರಿಸುತ್ತಿದ್ದಾರೆ. ಬ್ಯಾಂಕಿಂಗ್‌ ವ್ಯವಸ್ಥೆ ಮತ್ತು ಆರ್‌ಬಿಐ ಮೇಲಿನ ವಿಶ್ವಾಸ ಕಡಿಮೆಯಾಗಿದೆ. ಜಿಎಸ್‌ಟಿಯನ್ನು ಸರಿಯಾಗಿ ಅನುಷ್ಠಾನ ಮಾಡಿಲ್ಲ. ದೇಶದ ಜಿಡಿಪಿ 1.5ರಷ್ಟು
ಕುಸಿದಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ರೂ. ಮೌಲ್ಯ ಪಾತಾಳಕ್ಕೆ ಇಳಿದಿದೆ. ಪೆಟ್ರೋಲ್‌ ಮತ್ತು ಅನಿಲ ದರ ಹೆಚ್ಚಾಗುತ್ತಿದ್ದು, ಮೋದಿ ಹೇಳಿದ್ದು ಎಲ್ಲವೂ ಸುಳ್ಳು ಎಂದು ಜನತೆಗೆ ತಿಳಿಯುತ್ತಿದೆ ಎಂದರು.

Advertisement

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಸಂತಕುಮಾರ, ಎಂಎಲ್‌ಸಿ ಶರಣಪ್ಪ ಮಟ್ಟೂರ, ಮಾಜಿ ಮೇಯರ್‌ ಶರಣುಕುಮಾರ ಮೋದಿ ಇದ್ದರು.

ಕಾಂಗ್ರೆಸ್‌ ಅಲೆ ಶುರುವಾಗಿದೆ
ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್‌ ಅಲೆ ಮತ್ತೆ ಬೀಸುತ್ತಿದೆ. ಇತ್ತೀಚೆಗೆ ರಾಜ್ಯದಲ್ಲಿ ನಡೆದ ಐದು ಉಪಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ನಾಲ್ಕು ಸ್ಥಾನ ಗೆದ್ದಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಮೈತ್ರಿಯಾಗಿ ಚುನಾವಣೆ ಎದುರಿಸಲು ತೀರ್ಮಾನಿಸಲಾಗಿದೆ. ಆದರೆ, ಸ್ಥಾನಗಳ ಹಂಚಿಕೆ ಇನ್ನೂ ತೀರ್ಮಾನವಾಗಿಲ್ಲ ಎಂದು ಈಶ್ವರ ಖಂಡ್ರೆ ತಿಳಿಸಿದರು. ನರೇಂದ್ರ ಮೋದಿ ದುರ್ಬಲ ಪ್ರಧಾನಿಯಾಗಿದ್ದು, ದೇಶದಲ್ಲಿ ಅರಾಜಕತೆ ಮತ್ತು ಮತಗಳ ಧೃವೀಕರಣ ನಡೆಯುತ್ತಿದೆ. ರಾಜ್ಯದಲ್ಲಿ ಇವತ್ತು ಅಧಿಕಾರಕ್ಕೆ ಬರುತ್ತೇವೆ, ನಾಳೆ ಅಧಿಕಾರಕ್ಕೆ ಬರುತ್ತೇವೆ ಎಂದು ಬಿಜೆಪಿ ನಾಯಕರು ಹೇಳಿಕೊಂಡು ತಿರುಗುತ್ತಿದ್ದಾರೆ. ಆದರೆ, ತಿಪ್ಪರಲಾಗ ಹಾಕಿದರೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲ್ಲ. ಮುಂದಿನ ಲೋಕಸಭೆಯಲ್ಲಿ ಬಿಜೆಪಿಯವರು 22-24 ಸ್ಥಾನಗಳಲ್ಲಿ ಗೆಲ್ಲುವ ಕನಸು ಬಿಟ್ಟು, 2-4 ಸ್ಥಾನ ಗೆಲ್ಲಲ್ಲು ಹೋರಾಟ ನಡೆಸಲಿ ಸಾಕು ಎಂದು ಸವಾಲೆಸೆದರು. ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆಯನ್ನು ಇನ್ನೊಂದು ವಾರ ಇಲ್ಲವೇ, 15 ದಿನದಲ್ಲಿ ಮಾಡಲಾಗುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next