ಮೈಸೂರು: ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ರೌಡಿಶೀಟರ್‌ಗಳ ಪರೇಡ್ ನಡೆಸಿದ ಪೊಲೀಸರು, ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಜದ ಶಾಂತಿ ಕದಡುವ ಕೆಲಸಕ್ಕೆ ಕೈಹಾಕಿದರೆ ನಿರ್ದಾಕ್ಷಿಣ್ಯವಾಗಿ ಗಡಿಪಾರು ಮಾಡುವುದಾಗಿ ಖಡಕ್ ಎಚ್ಚರಿಕೆ ನೀಡಿದರು.
ನಗರದ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲಿ ಶುಕ್ರವಾರ ನಗರದ 545 ರೌಡಿಗಳ ಪರೇಡ್ ನಡೆಸಿದ ಡಿಸಿಪಿ ವಿಷ್ಣುವರ್ಧನ್, ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ರೌಡಿ ನಿಗ್ರಹ ದಳ ನಿಮ್ಮ ಮೇಲೆ ಸದಾ ಕಣ್ಣಿಟ್ಟು, ನಿಮ್ಮ ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿರುತ್ತದೆ.
ನಿಮ್ಮ ನಡವಳಿಕೆ ತಿದ್ದಿಕೊಳ್ಳದಿದ್ದರೆ ಗಡಿಪಾರು ಮಾಡುವುದಕ್ಕೆ ಹಿಂದೆ ಮುಂದೆ ನೋಡುವುದಿಲ್ಲ ಎಂದರು. ಭೂ ವ್ಯವಹಾರ, ಮೀಟರ್ ಬಡ್ಡಿ ದಂಧೆ, ಕೋಮು ಸಂಘರ್ಷಕ್ಕೆ ಕಾರಣವಾಗುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದೆ, ಸಮಾಜದ ಶಾಂತಿ ಕಾಪಾಡಲು ಸಹಕರಿಸಬೇಕು.
ಮೈಸೂರು ನಗರದಲ್ಲಿ 950 ಜನರ ವಿರುದ್ಧ ರೌಡಿ ಶೀಟ್ ತೆರೆಯಲಾಗಿದೆ. ಈ ಪೈಕಿ ಕೆ.ಆರ್.ವಿಭಾಗದಲ್ಲಿ 310 ಜನ, ದೇವರಾಜ ವಿಭಾಗದಲ್ಲಿ 255 ಜನ ರೌಡಿಶೀಟರ್‌ಗಳಿದ್ದು, ಈ ಪೈಕಿ 135 ಜನ ರೌಡಿಗಳು ಹಾಜರಾಗಿದ್ದಾರೆ.
ಉದಯಗಿರಿ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಮಾಜಘಾತುಕ ಶಕ್ತಿಗಳು ಹೆಚ್ಚು ಸಕ್ರಿಯವಾಗಿರುವ ಹಿನ್ನೆಲೆಯಲ್ಲಿ 104 ಜನರ ವಿರುದ್ಧ ರೌಡಿ ಶೀಟ್ ತೆರೆಯಲಾಗಿದೆ. ಈ ರೌಡಿ ಶೀಟರ್‌ಗಳಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಆದರೂ ಇವರ ವಿರುದ್ಧ ಪದೇ ಪದೇ ದೂರುಗಳು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.