Advertisement

ಖಲೀಸ್ಥಾನ್‌ ಪುನರುತ್ಥಾನ : ಪಾಕ್‌ ಐಎಸ್‌ಐನ ಹಿಂಬಾಗಿಲ ಸಂಚು

05:54 PM May 11, 2022 | Team Udayavani |

1980ರ ದಶಕದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ದಿಟ್ಟ ನಿರ್ಧಾರದೊಂದಿಗೆ ಮಕಾಡೆ ಮಲಗಿತ್ತು ಖಲೀಸ್ಥಾನಿ ಆಂದೋಲನ. ದೇಶದಲ್ಲಿ ಮರೆಯಾಗಿದ್ದರೂ ಅಮೆರಿಕ, ಕೆನಡಾ, ಲಂಡನ್‌ ಸೇರಿದಂತೆ ಕೆಲವು ಕಡೆಗಳಲ್ಲಿ ಖಲೀಸ್ಥಾನಿ ಪರ ನಿಲುವುಳ್ಳವರು ಇಂದಿಗೂ ಕಾರ್ಯಾಚರಣೆ ಮಾಡುತ್ತಿದ್ದಾರೆ. ಆದರೆ ಇತ್ತೀಚಿಗೆ ಹಿಮಾಚಲ ಪ್ರದೇಶದ ಅಸೆಂಬ್ಲಿ ಮುಂದೆಯೇ ಖಲೀಸ್ಥಾನಿ ಧ್ವಜವನ್ನು ಹಾಕಿರುವುದು, ನಾನಾ ಸಂಶಯಗಳಿಗೆ ಕಾರಣವಾಗಿದೆ. ಅಷ್ಟೇ ಅಲ್ಲ, ಇತ್ತೀಚಿನ ದಿನಗಳಲ್ಲಿ ಪಾಕಿಸ್ಥಾನದ ಐಎಸ್‌ಐ ಕೂಡ ಖಲೀಸ್ಥಾನ ಉಗ್ರರಿಗೆ ನೀರೊರೆಯುತ್ತಿದೆ. ಇದರ ಅಂಗವಾಗಿಯೇ ಹಿಮಾಚಲ ಪ್ರದೇಶದ ಅಸೆಂಬ್ಲಿ ಮುಂದೆ ಖಲೀಸ್ಥಾನ ಧ್ವಜ, ಮೊಹಾಲಿಯ ಪೊಲೀಸ್‌ ಗುಪ್ತಚರ ಇಲಾಖೆ ಕಟ್ಟಡದ ಮೇಲೆ ಬಾಂಬ್‌ ದಾಳಿ. ಇದರಲ್ಲಿ ಪಾಕ್‌ ಮೂಲದ ಪಾತಕಿಯ ಸಂಚೂ ಇದೆ. ಹಾಗಾದರೆ ಈ ಖಲೀಸ್ಥಾನಿ ಆಂದೋಲನವೆಂದರೆ ಏನು? ಈಗ ಮತ್ತೆ ಅವರು ಚಿಗಿತುಕೊಂಡಿರುವುದು ಏಕೆ ಎಂಬ ಕುರಿತ ಸಮಗ್ರ ವರದಿ ಇಲ್ಲಿದೆ.

Advertisement

ಏನಿದು ಖಲೀಸ್ಥಾನಿ ಆಂದೋಲನ?

ಸಿಕ್ಖ್ರಿಗೆ ಸ್ವತಂತ್ರ ಅಧಿಕಾರವುಳ್ಳ ಪ್ರತ್ಯೇಕ ರಾಜ್ಯವೊಂದು ಬೇಕು ಎಂಬ ಬೇಡಿಕೆಯೊಂದಿಗೆ ಪಂಜಾಬಿ ಸುಬಾ ಆಂದೋಲನ ಶುರುವಾಗಿತ್ತು. ಇದಕ್ಕೆ ಮೂಲ ಕಾರಣ ಕರ್ತರು ಅಕಾಲಿ ದಳ ನಾಯಕರು. ಇದು ಸಿಕ್ಖ್ರೇ ಬಾಹುಳ್ಯವುಳ್ಳ ರಾಜಕೀಯ ಪಕ್ಷವಾಗಿದ್ದು, ಈ ಬೇಡಿಕೆಯ ಹಿಂದೆ ಬಲವಾಗಿ ನಿಂತಿತ್ತು‡. ಆಗ ಕೇಂದ್ರದಲ್ಲಿದ್ದ ಸರಕಾರ, ರಾಜ್ಯ ಪುನರ್ವಿಂಗಡಣ ಆಯೋಗ ರಚನೆ ಮಾಡಿ, ಭಾಷೆಯ ಆಧಾರದ ಮೇಲೆ ರಾಜ್ಯವನ್ನು ವಿಭಾಗಿಸಿತ್ತು. ಅಂದರೆ ಸಿಕ್ಖ್ ಭಾಷೆಯನ್ನು ಹೆಚ್ಚಾಗಿ ಮಾತನಾಡುತ್ತಿದ್ದ ಪ್ರದೇಶವನ್ನು ಪಂಜಾಬ್‌ ಎಂದೂ, ಹಿಂದಿ ಮಾತನಾಡುತ್ತಿದ್ದವರು ಹೆಚ್ಚಿದ್ದ ಭಾಗವನ್ನು ಹರಿಯಾಣವೆಂದೂ ವಿಭಾಗಿಸಿದ್ದಲ್ಲದೇ, ಚಂಡೀಗಢ್‌ನನ್ನು ಎರಡೂ ರಾಜ್ಯಗಳಿಗೆ ರಾಜಧಾನಿ ಮಾಡಿ, ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತು. ಹಾಗೆಯೇ ಕೆಲವೊಂದು ಗುಡ್ಡಗಾಡು ಪ್ರದೇಶಗಳನ್ನು ಹಿಮಾಚಲ ಪ್ರದೇಶಕ್ಕೆ ಸೇರ್ಪಡೆ ಮಾಡಲಾಯಿತು.

ಆನಂದಪುರ ಸಾಬೀಬ್‌ ನಿರ್ಣಯ

ದಿನ ಕಳೆದ ಮೇಲೆ, ಅಕಾಲಿ ದಳದಲ್ಲೇ ವೈಮನಸ್ಸು ಬಂದು ಭಾಗವಾಯಿತು. ಒಂದು ಬಣ ಪ್ರಕಾಶ್‌ ಸಿಂಗ್‌ ಬಾದಲ್‌ ನೇತೃತ್ವದಲ್ಲಿ ಶಿರೋಮಣಿ ಅಕಾಲಿ ದಳವಾಗಿ ಪರಿವರ್ತನೆಯಾಯಿತು. ಅಲ್ಲದೇ, 1967 ಮತ್ತು 69ರ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಿಗಿ ಫೈಟ್‌ ನೀಡಿತು. ಆದರೆ, 1972ರ ಚುನಾವಣೆಯಲ್ಲಿ ಶಿರೋಮಣಿ ಅಕಾಲಿ ದಳ ಸಂಪೂರ್ಣವಾಗಿ ಸೋತಿತು. ಕಾಂಗ್ರೆಸ್‌ ಗೆದ್ದು ಬಂದಿತು. ಇದು ಶಿರೋಮಣಿ ಅಕಾಲಿ ದಳಕ್ಕೆ ಸಮಾಲೋಚನೆ ಮಾಡುವ ಅಗತ್ಯತೆಯನ್ನು ತಂದಿತು. ಹೀಗಾಗಿ ಆನಂದಪುರ ಸಾಹೀಬ್‌ ಗುರುದ್ವಾರದಲ್ಲಿ ಶಿರೋಮಣಿ ಅಕಾಲಿ ದಳ ಸಭೆ ಸೇರಿ ಮುಂದಿನ ನಡೆ ಬಗ್ಗೆ ಚರ್ಚೆ ನಡೆಸಿತು. ಆಗ ಪಂಜಾಬ್‌ ರಾಜ್ಯಕ್ಕೆ ಸ್ವಾಯತ್ತತೆ ಬೇಕು ಎಂಬ ನಿರ್ಣಯ ಅಂಗೀಕರಿಸಲಾಯಿತು. ಜತೆಗೆ ತಾವೇ ಒಂದು ಸಂವಿಧಾನವನ್ನೂ ರಚನೆ ಮಾಡಿಕೊಳ್ಳಬೇಕು ಎಂಬ ನಿರ್ಣಯವನ್ನೂ ತೆಗೆದುಕೊಳ್ಳಲಾಯಿತು. ಈ ನಿರ್ಣಯದ ಮೂಲಕ ಅಕಾಲಿ ದಳ ಸಿಕ್ಖ್ ಧರ್ಮ ಮತ್ತು ರಾಜಕೀಯ ಬೇರೆ ಬೇರೆಯಲ್ಲ, ಒಂದೇ ಎಂಬುದನ್ನು ಬಿಂಬಿಸಲು ಯತ್ನಿಸಿತು.

Advertisement

ಆಪರೇಷನ್‌ ಬ್ಲೂಸ್ಟಾರ್‌

ಭಿಂದ್ರನ್‌ವಾಲೆ ಮತ್ತು ಹರ್‌ಚರಣ್‌ ಸಿಂಗ್‌ ಅವರ ಆಟಾಟೋಪ ಹೆಚ್ಚಾಗುತ್ತಿದ್ದಂತೆ, ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಗಟ್ಟಿ ನಿಲುವು ತೆಗೆದುಕೊಂಡರು. ಮೊದಲಿಗೆ ಗೋಲ್ಡನ್‌ ಟೆಂಪಲ್‌ಗೆ ನುಗ್ಗಿಸುವ ಸಲುವಾಗಿ 200 ಕಮಾಂಡೋಗಳಿಗೆ ವಿಶೇಷ ತರಬೇತಿ ನೀಡಲಾಯಿತು. ಆಗ ಭಿಂದ್ರನ್‌ವಾಲೆಯನ್ನು ಅಪಹರಣ ಮಾಡಿಕೊಂಡು ಬರಬೇಕು ಎಂಬ ಉದ್ದೇಶವಿತ್ತು. ಆದರೆ ನಾಗರಿಕರ ಹತ್ಯೆಯಾಗಬಹುದು ಎಂಬ ಕಾರಣದಿಂದಾಗಿ ಈ ಆಪರೇಷನ್‌ ನಿಂತು ಹೋಯಿತು. ಆದರೆ, 1984ರ ಜೂ.5ರಂದು ಅನಿವಾರ್ಯವಾಗಿ ಕಾರ್ಯಾಚರಣೆ ಮಾಡಲೇಬೇಕಾಯಿತು. ಏಕೆಂದರೆ ಪಂಜಾಬ್‌ನಲ್ಲಿರುವ ಸಿಖ್‌ಯೇತರ ಶಾಸಕರು ಮತ್ತು ಸಂಸದರು ಹಾಗೂ ಗ್ರಾಮಗಳಿಗೆ ನುಗ್ಗಿ ಹಿಂದೂಗಳನ್ನು ಹತ್ಯೆ ಮಾಡುವ ಸಂಚು ರೂಪಿಸಲಾಗಿತ್ತು. ಇದನ್ನು ಮನಗಂಡೇ ಇಂದಿರಾ ಗಾಂಧಿ ಆಪರೇಷನ್‌ ಬ್ಲೂéಸ್ಟಾರ್‌ಗೆ ಒಪ್ಪಿಗೆ ನೀಡಿದ್ದರು. ಜೂ.5ರಿಂದ ಜೂ.10ರ ವರೆಗೆ ಈ ಕಾರ್ಯಾಚರಣೆ ನಡೆದು, ಉಗ್ರರನ್ನು ಸಂಪೂರ್ಣವಾಗಿ ಹೊಡೆದುಹಾಕಲಾಗಿತ್ತು.

ಮತ್ತೆ ಚೇತರಿಸಿಕೊಂಡಿದ್ದು ಹೇಗೆ?

ಕೇಂದ್ರ ಸರಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪಂಜಾಬ್‌ ಮತ್ತು ಹರಿಯಾಣದಲ್ಲಿ ಮೊದಲಿಗೆ ಪ್ರತಿಭಟನೆ ಶುರುವಾಗಿತ್ತು. ಆಗ ಈ ಪ್ರತಿಭಟನೆಗೆ ಕೆನಡಾ ಸೇರಿದಂತೆ ಜಗತ್ತಿನ ಬೇರೆ ಬೇರೆ ಕಡೆಗಳಲ್ಲಿ ಇರುವ ಖಲಿಸ್ಥಾನ್‌ ಪರ ಸಹಾನುಭೂತಿಯುಳ್ಳವರು ಇದಕ್ಕೆ ಸಹಾಯ ಮಾಡಿರಬಹುದು ಎಂಬ ಶಂಕೆ ಎದ್ದಿದ್ದವು. ಆದರೆ ಇದನ್ನು ರೈತ ಮುಖಂಡರು ತಿರಸ್ಕರಿಸಿದ್ದರು. ಆದರೆ ಈಗ ಪಾಕಿಸ್ಥಾನದ ಐಎಸ್‌ಐ, ಮತ್ತೆ ಭಾರತದಲ್ಲಿ ಖಲೀಸ್ಥಾನ ಉಗ್ರರನ್ನು ಬೆಳೆಸಲು ನೋಡುತ್ತಿದೆ. ಇದಕ್ಕೆ ಪೂರಕವೆಂಬಂತೆ, ಡ್ರೋನ್‌ ಮೂಲಕ ಪಂಜಾಬ್‌ಗ ಡ್ರಗ್ಸ್‌ ಪೂರೈಕೆ ಮಾಡುವುದು, ಇದರಿಂದ ಬಂದ ಹಣವನ್ನು ಭಯೋತ್ಪಾದನೆ ಕೃತ್ಯಗಳಿಗೆ ಬಳಸಿಕೊಳ್ಳಲು ಅನುವು ಮಾಡಿಕೊಡುವುದು ಸೇರಿದೆ. ಅಲ್ಲದೆ ಹಿಮಾಚಲ ಪ್ರದೇಶದ ಅಸೆಂಬ್ಲಿ ಮುಂದೆ ಖಲೀಸ್ಥಾನ ಧ್ವಜ ಹಾಕಿದ್ದೂ ಇದರ ಮುಂದಿನ ಯೋಜನೆ. ಅಲ್ಲದೆ ಮೊಹಾಲಿಯಲ್ಲಿರುವ ಪಂಜಾಬ್‌ ಗುಪ್ತಚರ ಇಲಾಖೆಯ ಕಟ್ಟಡದಲ್ಲಿ ಸೋಮವಾರವಷ್ಟೇ ಲಘು ಸ್ಫೋಟ ಮಾಡಿದ್ದ ದುಷ್ಕರ್ಮಿಗಳು, ಮಂಗಳವಾರವೂ ಅಂಥದ್ದೇ ಸ್ಫೋಟ ಮಾಡಿದ್ದಾರೆ. ಇದರ ಹಿಂದೆ ಖಲೀಸ್ಥಾನ್‌ ಪ್ರತ್ಯೇಕತಾವಾದಿ ಗುಂಪು ಸಿಕ್ಖ್ ಫಾರ್‌ ಜಸ್ಟೀಸ್‌ ಇದೆ.

ಯಾರು ಜರ್ನೈಲ್‌ ಸಿಂಗ್‌ ಭಿಂದ್ರನ್‌ವಾಲೆೆ?

ಆನಂದಪುರ ಸಾಹೀಬ್‌ ನಿರ್ಣಯದ ವೇಳೆ ಹುಟ್ಟಿಕೊಂಡ ವ್ಯಕ್ತಿಯೇ ಭಿಂದ್ರನ್‌ವಾಲೆ. ಈತ ಧಾರ್ಮಿಕ ನಾಯಕನಾಗಿದ್ದು, ಪಂಜಾಬ್‌ನಾದ್ಯಂತ ಸುತ್ತಾಡಿ, ಅತ್ಯಂತ ಸಂಪ್ರದಾಯವಾದಿ ಸಿಕ್ಖಿಸಮ್‌ ಬರಬೇಕು ಎಂದು ಕರೆಕೊಟ್ಟ. ಅಷ್ಟೇ ಅಲ್ಲ, ಈತ ಹಿಂದೂಗಳನ್ನು ಮತ್ತು ತಲೆಗೂದಲು ಕತ್ತರಿಸಿಕೊಳ್ಳುವ ಹಾಗೂ ಮದ್ಯ ವ್ಯಸನ ಮಾಡುವ ಸಿಕ್ಖ್ರನ್ನು ಗುರಿಯಾಗಿಸಿಕೊಂಡ. ಜತೆಗೆ ಪ್ರತಿಯೊಬ್ಬ ಸಿಕ್ಖ್, 32 ಮಂದಿ ಹಿಂದೂಗಳನ್ನು ಕೊಲ್ಲಬೇಕು ಎಂದು ಹೇಳುತ್ತಿದ್ದ. ಈತನ ವಿರುದ್ಧ ಯಾರಾದರೂ ಮಾತನಾಡಿದರೆ ಅವರನ್ನು ಟಾರ್ಗೆಟ್‌ ಮಾಡಿ ನಾಶ ಮಾಡದೇ ಬಿಡುತ್ತಿರಲಿಲ್ಲ. ಹೀಗಾಗಿಯೇ ಈತ ಹಿಂದ್‌ ಸಮಾಚಾರ್‌ ಗ್ರೂಪ್‌ ಪತ್ರಿಕೆಯ ಸ್ಥಾಪಕ ಲಾಲಾ ಜಗತ್‌ ನಾರಾಯಣ್‌ ಎಂಬುವರನ್ನು ಹತ್ಯೆ ಮಾಡಿದ. ಅಕಾಲಿ ದಳ ಸಿಕ್ಖ್ರ ಹೆಮ್ಮೆಯನ್ನು ಹೆಚ್ಚಳ ಮಾಡುವತ್ತ ಮತ್ತು ರಾಜಕೀಯವಾಗಿ ಮೇಲೆ ಬರುವತ್ತ ಗಮನ ಹರಿಸಿದ್ದರೆ, ಭಿಂದ್ರನ್‌ವಾಲೆೆ ತೀವ್ರಗಾಮಿಯಾಗಿ ಬದಲಾಗಿದ್ದ. 1982ರ ಅಗಸ್ಟ್‌ನಲ್ಲಿ ಭಿಂದ್ರನ್‌ವಾಲೆ ಮತ್ತು ಅಕಾಲಿ ದಳದ ಅಧ್ಯಕ್ಷ ಹರ್‌ಚರಣ್‌ ಸಿಂಗ್‌ ಲೋಂಗ್‌ವಾಲ, ಧರ್ಮಯುದ್ಧ ಮೋರ್ಚಾ ಎಂಬ ಆಂದೋಲನವನ್ನು ಆರಂಭಿಸಿದರು. ಇದರಲ್ಲಿ ಜನಜೀವನವನ್ನು ಅಸ್ವಸ್ಥಗೊಳಿಸುವುದು ಇದರಲ್ಲಿ ಸೇರಿತ್ತು. ಇವರಿಬ್ಬರೂ ಅಮೃತಸರದ ಗೋಲ್ಡನ್‌ ಟೆಂಪಲ್‌ ಅನ್ನೇ ತಮ್ಮ ನಿವಾಸವನ್ನಾಗಿ ಮಾಡಿಕೊಂಡರು. ಆಗ ಪ್ರತಿಭಟನೆಗಳು ಮತ್ತು ಪೊಲೀಸರ ಜತೆ ಘರ್ಷಣೆಗಳು ನಡೆದವು. ಆದರೆ ಶಿರೋಮಣಿ ಅಕಾಲಿ ದಳಕ್ಕೂ, ಹರ್‌ಚರಣ್‌ ಸಿಂಗ್‌ ಲೋಂಗ್‌ವಾಲ ಅವರ ಅಕಾಲಿದಳಕ್ಕೂ ಸಂಬಂಧವಿರಲಿಲ್ಲ  ಎಂಬುದು ಬೇರೆ ಮಾತು.

ಸಿಕ್ಖ್ ಫಾರ್‌ ಜಸ್ಟೀಸ್‌

2007ರಲ್ಲಿ ಅಮೆರಿಕದಲ್ಲಿ ಹುಟ್ಟಿಕೊಂಡ ಸಂಘಟನೆ ಇದಾಗಿದ್ದು, 2019ರಲ್ಲಿ ಕೇಂದ್ರ ಸರಕಾರ ಇದನ್ನು ನಿಷೇಧಿಸಿದೆ. ಇದು ಭಾರತದಿಂದ ಪಂಜಾಬ್‌ ಅನ್ನು ಪ್ರತ್ಯೇಕ ಮಾಡಬೇಕು ಎಂದು ಹೋರಾಟ ನಡೆಸುತ್ತಿದೆ. ಗುರುಪಂತ್‌ವಂತ್‌ ಸಿಂಗ್‌ ಪನ್ನು ಎಂಬಾತ ಇದನ್ನು ಹುಟ್ಟಿಹಾಕಿದ್ದಾನೆ. ಈತ ಪಂಜಾಬ್‌ ವಿವಿಯ ಕಾನೂನು ಪದವೀಧರನಾಗಿದ್ದು, ಅಮೆರಿಕದಲ್ಲಿ ಅಟಾರ್ನಿಯಾಗಿ ಕೆಲಸ ಮಾಡುತ್ತಿದ್ದಾನೆ. ಪಾಕಿಸ್ಥಾನದಲ್ಲಿಯೂ ಈತನ ಸಿಕ್ಖ್  ಫಾರ್‌ ಜಸ್ಟೀಸ್‌ ಸಂಘಟನೆಯ ಕಚೇರಿ ಇದೆ. ಈತನನ್ನು ಬಳಸಿಕೊಂಡು ಪಾಕ್‌ ಐಎಸ್‌ಐ ಭಾರತದಲ್ಲಿ ಉಗ್ರಗಾಮಿ ಕೃತ್ಯ ನಡೆಸಲು ನೋಡುತ್ತಿದೆ. ಅಲ್ಲದೆ, ಹಿಮಾಚಲ ಪ್ರದೇಶದ ವಿಧಾನಸಭೆ ಮುಂದಿನ ಧ್ವಜ ಪ್ರಕರಣದಲ್ಲಿ ಈತನ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next