Advertisement

ಹೊಸ ವರ್ಷಾಚರಣೆಗೆ ಖಾಕಿ ಕಾವಲು

01:00 AM Dec 29, 2019 | Lakshmi GovindaRaj |

ಬೆಂಗಳೂರು: ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಸಿದ್ಧತೆ ಕೂಡ ಜೋರಾಗಿದೆ. ಈ ನಡುವೆ ಸಂಭ್ರಮಾಚರಣೆಯಲ್ಲಿ ಯಾವುದೇ ತೊಡಕು ಉಂಟಾಗದಂತೆ ಎಚ್ಚರಿಕೆ ವಹಿಸಿರುವ ನಗರ ಪೊಲೀಸರು ಮಹಾತ್ಮಗಾಂಧಿ, ಬ್ರಿಗೇಡ್‌ ರಸ್ತೆ ಸೇರಿ ಎಲ್ಲೆಡೆ ಬಿಗಿ ಪೊಲೀಸ್‌ ಬಂದೋಬಸ್ತ್ ಕೈಗೊಂಡಿದ್ದಾರೆ. ಈ ನಡುವೆ ನೈಟ್‌ಲೈಫ್ ಅವಧಿಯನ್ನು ತಡರಾತ್ರಿ ಒಂದು ಗಂಟೆಯಿಂದ ಎರಡು ಗಂಟೆವರೆಗೂ ವಿಸ್ತರಿಸಲಾಗಿದ್ದು, ಸಂಚಾರ ನಿರ್ವಹಣೆಗೂ ಕೆಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

Advertisement

ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌, ಡಿ.31ರ ಸಂಜೆ ನಾಲ್ಕು ಗಂಟೆಯಿಂದ ಜ.1ರ ಬೆಳಗ್ಗೆ ಎಂಟು ಗಂಟೆವರೆಗೆ ನಗರದ ಎಲ್ಲ ವಿಭಾಗಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಪೊಲೀಸ್‌ ಸಿಬ್ಬಂದಿ ಎರಡು ಪಾಳಿಯಲ್ಲಿ ಕೆಲಸ ಮಾಡಲಿದ್ದು, ಸಂಜೆ ನಾಲ್ಕು ಗಂಟೆಯಿಂದ ತಡರಾತ್ರಿ ಎರಡು ಗಂಟೆವರೆಗೆ ಒಂದು ಪಾಳಿ ಮತ್ತು 2 ಗಂಟೆಯಿಂದ ಮರು ದಿನ ಮುಂಜಾನೆ ಎಂಟು ಗಂಟೆವರೆಗೆ ಮತ್ತೂಂದು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಇಬ್ಬರು ಹೆಚ್ಚುವರಿ ಪೊಲೀಸ್‌ ಆಯುಕ್ತರು ಮತ್ತು ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತರ ನೇತೃತ್ವದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತರ ನೇತೃತ್ವದಲ್ಲಿ ಸಂಚಾರ ನಿರ್ವಹಣೆ ನಡೆಯಲಿದೆ. 11 ಮಂದಿ ಡಿಸಿಪಿಗಳು, 41 ಎಸಿಪಿ, 215 ಇನ್‌ಸ್ಪೆಕ್ಟರ್‌, 591 ಪಿಎಸ್‌ಐ, 941 ಎಎಸ್‌ಐ, 7500 ಕಾನ್‌ಸ್ಟೆಬಲ್‌, ಹೆಡ್‌ಕಾನ್‌ಸ್ಟೆಬಲ್‌ಗ‌ಳು,

1500 ಗೃಹ ರಕ್ಷಕ ದಳ ಸಿಬ್ಬಂದಿ, 94 ಕೆಎಸ್‌ಆರ್‌ಪಿ, ಸಿಎಆರ್‌ ತುಕಡಿ, ಆ್ಯಂಬುಲೆನ್ಸ್‌ಗಳು ಹಾಗೂ ಕ್ಯೂಆರ್‌ಟಿ, ವಾಟರ್‌ ಜೆಟ್‌ ಸೇರಿ ಸುಮಾರು 10 ಸಾವಿರ ಮಂದಿ ಪೊಲೀಸರು ಭದ್ರತೆಗೆ ನಿಯೋಜಿಸಲಾಗಿದೆ. ಹೈವೆಗಳಲ್ಲೂ ಪೊಲೀಸರು ಗಸ್ತು ತಿರುಗಲಿದ್ದಾರೆ. ಇದರೊಂದಿಗೆ ನಗರಾದ್ಯಂತ ಒಂದೂವರೆ ಸಾವಿರ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಹೇಳಿದರು.

ಎಂ.ಜಿ, ಬ್ರಿಗೇಡ್‌ ರಸ್ತೆಯಲ್ಲಿ ಭದ್ರತೆ ಹೆಚ್ಚಳ: ಕೇಂದ್ರ ವಿಭಾಗದ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆಯಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದ್ದು, ಸುತ್ತಲು ಆರೇಳು ವಾಚ್‌ ಟವರ್‌ಗಳನ್ನು ನಿರ್ಮಿಸಲಾಗಿದೆ. ಸಿಬ್ಬಂದಿ ದೂರದರ್ಶಕ ಯಂತ್ರಗಳ ಮೂಲಕ ಪ್ರತಿಯೊಬ್ಬರ ಚಲನವಲನಗಳ ಮೇಲೆ ನಿಗಾವಹಿಸಲಿದ್ದಾರೆ. ಹಾಗೆಯೇ ಕಾವೇರಿ ಎಂಪೋರಿಯಂ ವೃತ್ತದ ಸುತ್ತಮುತ್ತ ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ಈ ಸ್ಥಳದಲ್ಲಿ ಆ್ಯಂಬುಲೆನ್ಸ್‌ಗಳು ಇರಲಿವೆ.

Advertisement

ಜತೆಗೆ ನಮ್ಮ-100 ಸಹಾಯವಾಣಿ ಕೇಂದ್ರ ಮತ್ತು ನಗರದ ಎಲ್ಲೆಡೆ 270 ಹೊಯ್ಸಳ ವಾಹನಗಳು ಎಂದಿನಂತೆ ನಿರಂತರವಾಗಿ ಕಾರ್ಯನಿರ್ವಹಿಸಲಿದ್ದು, ಹೆಚ್ಚಿನ ಗಸ್ತು ತಿರುಗಲಿವೆ. ಇದೇ ವೇಳೆ ಇಂದಿರಾನಗರ, ಕೋರಮಂಗಲದಲ್ಲಿಯೂ ಭದ್ರತೆ ಕೈಗೊಳ್ಳಲಾಗಿದೆ. ಖಾಸಗಿ ಕಂಪನಿಗಳಲ್ಲಿಯೂ ಹೊಸವರ್ಷಾಚರಣೆ ನಡೆಯಲಿದ್ದು, ಅಲ್ಲಿಯೂ ಪೊಲೀಸರ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮಹಿಳಾ, ಮಕ್ಕಳ ಸುರಕ್ಷತೆಗೆ ಆದ್ಯತೆ: ಸಂಭ್ರಮಾ ಚರಣೆ ನೆಪದಲ್ಲಿ ಬಾಟಲಿ ಒಡೆಯುವುದು, ಕೂಗಾ ಡುವುದು, ಬಲವಂತವಾಗಿ ಶುಭಾಶಯ ಕೋರು ವುದು, ಅಪರಿಚಿತರ ಮೇಲೆ ಬೀಳುವುದು ಮಾಡ ಬಾರದು ಹಾಗೂ ರಸ್ತೆ, ಪಾರ್ಕ್‌ಗಳಲ್ಲಿ ಪಾರ್ಟಿ ಮಾಡುವಂತಿಲ್ಲ. ಡಿ.31ರಂದು ರಾತ್ರಿ ಪ್ರಯಾಣಿಕರ ಸಂಚಾರಕ್ಕೆ ರಾತ್ರಿ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುವಂತೆ ಒಲಾ, ಉಬರ್‌, ಮೆಟ್ರೋ, ಬಿಎಂಟಿಸಿ ಮತ್ತು ಆಟೋ ಚಾಲಕರ ಜತೆ ಚರ್ಚಿಸಲಾಗಿದ್ದು, ಹೆಚ್ಚುವರಿ ಪ್ರಯಾಣ ದರ ಪಡೆಯದಂತೆ ಸೂಚಿಸಲಾಗಿದೆ. ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಒತ್ತು ಕೊಡುವಂತೆ ಸೂಚಿಸಲಾಗಿದೆ ಎಂದರು.

ಕಾರ್ಯಕ್ರಮಕ್ಕೆ ಬರುವ ಮಹಿಳೆಯರು ಮತ್ತು ಮಕ್ಕಳು ತಮ್ಮ ಪರಿಚಯಸ್ಥರ ಜತೆಯೇ ಓಡಾಡಬೇಕು. ಗುಂಪುಗಳಾಗಿದ್ದರೆ ಒಳಿತು. ಒಬ್ಬರೇ ಹೋಗಬೇಡಿ. ಒಂದು ವೇಳೆ ಅಂತಹ ಸಂದರ್ಭದಲ್ಲಿ ಭಯ ಉಂಟಾದರೆ ಕೂಡಲೇ ಪೊಲೀಸ್‌ ಸಹಾಯವಾಣಿ 100 ಮತ್ತು ಸುರಕ್ಷಾ ಆ್ಯಪ್‌ ನೆರವು ಪಡೆಯಬಹುದು. ಆ್ಯಪ್‌ ಅಧರಿತ ಕ್ಯಾಬ್‌ಗಳು, ಆಟೋ ಚಾಲಕರು ಒಬ್ಬರೇ ಮಹಿಳಾ ಪ್ರಯಾಣಿಕರನ್ನು ಕರೆದೊಯ್ಯುವಾಗ ಅನುಚಿತವಾಗಿ ನಡೆದುಕೊಂಡರೆ ಕಠಿಣ ಕ್ರಮಕೈಗೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮಾದಕ ವಸ್ತು ವ್ಯಸನಿಗಳ ಮೇಲೆ ನಿಗಾ: ಪಂಚತಾರಾ ಹೋಟೆಲ್‌, ರೆಸ್ಟೋರೆಂಟ್‌, ಪಬ್‌ ಹಾಗೂ ಬಾರ್‌ಗಳ ವಹಿವಾಟಿನ ಅವಧಿಯನ್ನು ಡಿ.31ರಂದು ತಡರಾತ್ರಿ ಒಂದು ಗಂಟೆಯಿಂದ ಎರಡು ಗಂಟೆವರೆಗೆ ವಿಸ್ತರಣೆ ಮಾಡಲಾಗಿದೆ. ಗ್ರಾಹಕರ ಸುರಕ್ಷತೆ ಹಿನ್ನೆಲೆಯಲ್ಲಿ ಪಬ್‌ ಮತ್ತು ಬಾರ್‌ನಲ್ಲಿ ಸಿಸಿಟಿವಿ ಕ್ಯಾಮೆರಾ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪರಿಶೀಲಿಸಿಕೊಳ್ಳಬೇಕು. ಮಾದಕ ವಸ್ತು ಮಾರಾಟ ಹಾಗೂ ಅಪ್ರಾಪ್ತರಿಗೆ ಮದ್ಯ ಸರಬರಾಜು ಮಾಡುವಂತಿಲ್ಲ. ಅದರ ಮೇಲೆ ಮಾದಕ ವಸ್ತು ನಿಗ್ರಹ ದಳದ ಸಿಬ್ಬಂದಿ ನಿಗಾವಹಿಸಲಿದ್ದು, ಈ ಭಾರಿ ಶ್ವಾನದಳ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಡ್ರಂಕ್‌ ಆಂಡ್‌ ಡ್ರೈವ್‌ ಮಾಡಿದರೆ ಕ್ರಿಮಿನಲ್‌ ಕೇಸ್‌: ಡಿ.31ರ ರಾತ್ರಿ ಹೊಸವರ್ಷಾಚರಣೆ ದಿನ ಕುಡಿದ ವಾಹನ ಚಲಾಯಿಸುವರ ಪತ್ತೆಗೆ ಕಾರ್ಯಾಚರಣೆಗೆ ನಡೆಸಲಾಗುವುದು. ಸಿಕ್ಕಿಬಿದ್ದವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಬಂಧಿಸಲಾ ಗುವುದು ಎಂದು ಸಂಚಾರ ವಿಭಾಗ ಜಂಟಿ ಪೊಲೀಸ್‌ ಆಯುಕ್ತ ಡಾ ಬಿ.ಆರ್‌.ರವಿಕಾಂತೇಗೌಡ ಹೇಳಿದರು.

ಸಾಮಾನ್ಯ ದಿನಗಳಲ್ಲಿ ಕುಡಿದು ವಾಹನ ಚಲಾಯಿಸಿದರೆ ವಾಹನ ಜಪ್ತಿ ಮಾಡಲಾಗುತ್ತದೆ. ದಂಡದ ನೋಟಿಸ್‌ ಕೊಡಲಾಗುತ್ತದೆ. ಆದರೆ, ಇದೀಗ ಕ್ರಿಮಿನಲ್‌ ಪ್ರಕರಣ ದಾಖಲಿಸ ಬೇಕಾಗುತ್ತದೆ. ಜತೆಗೆ ನಗರದ 175 ಸ್ಥಳಗಳಲ್ಲಿ ಕುಡಿದು ವಾಹನ ಚಲಾಯಿಸುವವರ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತದೆ. ಈ ಕುರಿತು ತಂಡ ಕೂಡ ರಚಿಸಲಾಗಿದೆ.

ಹೋಟೆಲ್‌, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳ ಸುತ್ತ-ಮುತ್ತ ಸಂಚಾರ ಪೊಲೀಸರು ಗಸ್ತು ತಿರುಗಲಿದ್ದು, ಅವುಗಳ ಸಮೀಪದಲ್ಲಿಯೇ ವಾಹನ ಸವಾರನನ್ನು ಪರಿಶೀಲಿಸಲಿದ್ದಾರೆ. ಡಿ.31ರಂದು ರಾತ್ರಿ 10 ಗಂಟೆಯಿಂದ ಜ.1ರ ಬೆಳಗ್ಗೆ 6ರವರೆಗೆ ಕೆ.ಆರ್‌.ಪುರ ಮೇಲು ಸೇತುವೆ ಹೊರತುಪಡಿಸಿ ನಗರದ 44 ಮೇಲು ಸೇತುವೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ ಎಂದು ಹೇಳಿದರು.

ಸಂಚಾರ ನಿರ್ಬಂಧ: ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಚರ್ಚ್‌ಸ್ಟ್ರೀಟ್‌, ಮ್ಯೂಸಿಯಂ ರಸ್ತೆ, ರೆಸ್ಟ್‌ಹೌಸ್‌ ರಸ್ತೆ, ರೆಸಿಡೆನ್ಸಿ ಕ್ರಾಸ್‌ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಜತೆಗೆ 16 ಪ್ರದೇಶಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಹಾಗೆಯೇ ಈ ಮಾರ್ಗಗಳಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಹೇಳಿದರು.

ಬಿ-ಸೇಫ್ ಅಭಿಯಾನಕ್ಕೆ ರಾಕಿಂಗ್‌ ಸ್ಟಾರ್‌ ಸಾಥ್‌: ಮದ್ಯ ಸೇವಿಸಿ ವಾಹನ ಚಲಾಯಿ ಸದಂತೆ ನಟ ಯಶ್‌ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಸಂಚಾರ ಪೊಲೀಸರ ಬಿ-ಸೇಫ್ ಅಭಿಯಾನಕ್ಕೆ ಯಶ್‌ ಸಹಕಾರ ನೀಡಿದ್ದು, ಈ ಕುರಿತು ವಿಡಿಯೋ ಬಿಡುಗಡೆ ಮಾಡಿದ್ದಾರೆ. “ಹೊಸವರ್ಷ ಪ್ರತಿವರ್ಷವೂ ಬರುತ್ತದೆ. ಹೊಸ ಆಸೆ, ಕನಸು, ಚಿಗುರು, ಗುರಿ ಹೀಗೆ ನಾನಾ ಯೋಜನೆಗಳನ್ನು ರೂಪಿಸಿಕೊಂಡು ಹೊಸವರ್ಷವನ್ನು ಬರ ಮಾಡಿಕೊಳ್ಳುವ ಸಮಯ.

ಈ ಸಂದರ್ಭದಲ್ಲಿ ಕುಡಿದು ವಾಹನ ಚಲಾಯಿಸಿದರೆ, ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಅಧಿಕ’ ಎಂದು ಹೇಳಿದ್ದಾರೆ. “ಹೊಸವರ್ಷಾಚರಣೆ ಸಂದರ್ಭದಲ್ಲಿ ಸ್ನೇಹಿತರ ಜತೆ ಪಾರ್ಟಿ ಮಾಡಿ ಮದ್ಯದ ಅಮಲಿನಲ್ಲೇ ವಾಹನ ಚಾಲನೆ ಮಾಡಿದರೆ ಅನಾಹುತ ಆಗುತ್ತದೆ. ಅದರಿಂದ ನಿಮ್ಮನ್ನೆ ನಂಬಿರುವ ತಮ್ಮ ಕುಟುಂಬ ಸದಸ್ಯರು ಜೀವನುದ್ದಕ್ಕೂ ನೋವು ಅನುಭಿಸಬೇಕಾಗುತ್ತದೆ. ಹೀಗಾಗಿ ಪ್ರತಿಯೊಬ್ಬರು ಕುಡಿದು ವಾಹನ ಚಲಾಯಿಸಬೇಡಿ’ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next