Advertisement

ಕವಿವಿಯಲ್ಲಿ ದೇಸಿ ಬೆಡಗಿನ ಖಾದಿ ಹವಾ

06:08 PM Mar 20, 2021 | Team Udayavani |

ಧಾರವಾಡ: ಗರಿ ಗರಿ ಜೀನ್ಸ್‌ ಪ್ಯಾಂಟ್‌, ಚೈನೀಜ್‌ ಕಾಲರ್‌ ಶರ್ಟ್‌, ಪ್ಯಾನ್‌ ಅಮೆರಿಕದಂತಹ ತುಟ್ಟಿಬಟ್ಟೆ ತೊಟ್ಟು ಮೋಜು ಮಾಡುವುದು ಕಾಲೇಜು ವಿದ್ಯಾರ್ಥಿಗಳಿಗೆ ಹೊಸದೇನಲ್ಲ.

Advertisement

ಫ್ಯಾಶನ್‌ ಬಟ್ಟೆಗಳೇ ಕಾಲೇಜು ಕ್ಯಾಂಪಸ್‌ಗಳಿಗೆ ಬಣ್ಣ ಬಳಿದು ಗರಿ ಎಳೆಯುತ್ತಲೇ ಇವೆ. ಇಂತಹ ಸಂದರ್ಭದಲ್ಲಿ ರಾಷ್ಟ್ರಕಟ್ಟಿದ ಖಾದಿ ಬಟ್ಟೆಯನ್ನು ಕಾಲೇಜು ವಿದ್ಯಾರ್ಥಿಗಳು ತೊಡಲು ಸಾಧ್ಯವೇ? ಖಂಡಿತಾ ಸಾಧ್ಯವಿದೆ ಎನ್ನುತ್ತಿದೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ.

ಹೌದು, ದೇಶಿ ಸಂಪ್ರದಾಯ, ಸಂಸ್ಕೃತಿ ಮತ್ತು ಜೀವನ ಶೈಲಿಯೇ ನಶಿಸಿ ಹೋಗುತ್ತಿರುವ ಈ ಸಂದರ್ಭದಲ್ಲಿ ಕನಿಷ್ಟ ಪಕ್ಷ ವಾರದಲ್ಲಿ ಒಂದು ದಿನ ಕಡ್ಡಾಯವಾಗಿ ಖಾದಿ ಧರಿಸುವಂತೆ ಕವಿವಿ ಸುತ್ತೋಲೆ ಹೊರಡಿಸಿ ಗಮನ ಸೆಳೆದಿದೆ. ಪ್ರತಿ ಬುಧವಾರ, ಜ.26ರ ಗಣರಾಜ್ಯೋತ್ಸವ, ಆ.15 ಸ್ವಾತಂತ್ರೋತ್ಸವ, ರಾಷ್ಟ್ರೀಯ ಕಾರ್ಯಕ್ರಮಗಳು ಇರುವಾಗ ಖಾದಿ ಬಟ್ಟೆಯಿಂದ ಸಿದ್ಧಗೊಳಿಸಿದ ಉಡುಪುಗಳನ್ನೇ ಧರಿಸುವಂತೆ ಸೂಚಿಸಿದೆ.

ಈ ಕುರಿತು ಕುಲಾಧಿಪತಿಗಳಾದ ರಾಜ್ಯಪಾಲರಿಗೂ ಪತ್ರ ಬರೆದು ಅವರ ಒಪ್ಪಿಗೆ ಕೂಡ ಪಡೆದಿದೆ. ಕಳೆದ ವರ್ಷವೇ ರಾಜಭವನಕ್ಕೆ ಈ ಸಂಬಂಧದ ಪತ್ರ ರವಾನೆಯಾಗಿತ್ತು. ಅಂತಿಮವಾಗಿ 2021, ಫೆ.25ರಂದು ಕವಿವಿಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ಸಂಬಂಧ ಪ್ರಮುಖ ನಿರ್ಣಯ ಕೈಗೊಳ್ಳಲಾಯಿತು. ಈ ಸಂಬಂಧ ಕವಿವಿ ಕುಲಪತಿಗಳು ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ಮಹಿಳಾ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಿದ್ದರು.

ಈ ಸಮಿತಿ ಕುಲಂಕುಷವಾಗಿ ಅಧ್ಯಯನ ನಡೆಸಿ ಫೆ.2ಕ್ಕೆ ಸಭೆ ನಡೆಸಿ ತನ್ನ ಶಿಫಾರಸುಗಳನ್ನು ಕವಿವಿಗೆ ಸಲ್ಲಿಸಿತ್ತು. ನಂತರ ನಡೆದ ಕವಿವಿ ಸಿಂಡಿಕೇಟ್‌ ಸಭೆ, ಯುಜಿಸಿ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿತ್ತು. ಇದನ್ನು ಪರಿಗಣಿಸಿದ ಕವಿವಿ ಕುಲಪತಿಗಳು ಮಾ.17ರಂದು ಖಾದಿ ಉಡುಪು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದಾರೆ.

Advertisement

ಘಟಿಕೋತ್ಸವಕ್ಕೂ ಖಾದಿ ಕಡ್ಡಾಯ: ಘಟಿಕೋತ್ಸವ ಎಂದರೆ ಹೆಚ್ಚಾಗಿ ಬ್ರಿಟಿಷ್‌ ಕಾಲದ ಪಳೆಯುಳಿಕೆ ಎಂಬಂತೆ ಕಪ್ಪು ಗೌನು ಮತ್ತು ತಲೆಗೆ ಕಪ್ಪು ಬಣ್ಣದ ಟೋಪಿಗಳು ರಾರಾಜಿಸುತ್ತವೆ. ಇದೇ ಪದ್ಧತಿಯಂತೆಯೇ ಕಳೆದ ಆರು ದಶಕಗಳಿಂದಲೂ ಕವಿವಿ ಘಟಿಕೋತ್ಸವ ನಡೆಯುತ್ತ ಬಂದಿದೆ. ಆದರೆ ಹಳೆ ಸಂಪ್ರದಾಯಗಳಿಗೆ ಬ್ರೇಕ್‌ ಹಾಕಿ ಗೌನು ಕೈ ಬಿಟ್ಟಿದೆ. ದೇಶಿತನದ ಧಿರಿಸಿಗೆ ಮಹತ್ವ ನೀಡಿದ್ದು, ಅಪ್ಪಟ ಖಾದಿಯ ಬಟ್ಟೆಯಿಂದಲೇ ಸಿದ್ಧಗೊಳಿಸಿದ ಉಡುಪು ಹಾಕಿಕೊಂಡು ಬರುವಂತೆ ಹೇಳಿದೆ. ಕಡ್ಡಾಯಗೊಳಿಸಿದ ಸಾಮಾನ್ಯ ದಿನಗಳಲ್ಲಿ ಪುರುಷರು ಪ್ಯಾಂಟ್‌-ಶರ್ಟ್‌,ಪೈಜಾಮ್‌- ಬುಜ್ಜಾ/ ಜಾಕೇಟ್‌, ಮಹಿಳೆಯರು ಸೀರೆ-ಕುಪ್ಪಸ, ಸಲ್ವಾರ್‌ -ಕಮೀಸ್‌/ಜಾಕೆಟ್‌ ಧರಿಸಬಹುದಾಗಿದೆ.

ಘಟಿಕೋತ್ಸವದಲ್ಲಿ ಮಾತ್ರ ರಾಜ್ಯಪಾಲರು, ಸಮ ಕುಲಾಧಿಪತಿಗಳು, ಮುಖ್ಯ ಅತಿಥಿಗಳು, ಗೌರವ ಡಾಕ್ಟರೇಟ್‌ ಪಡೆದ ಮಹನೀಯರು, ವಿದ್ಯಾ ವಿಷಯಕ ಪರಿಷತ್‌ ಸದಸ್ಯರು, ರ್‍ಯಾಂಕ್‌ ವಿಜೇತರು, ಸುವರ್ಣ ಪದಕ ಪಡೆದ ವಿದ್ಯಾರ್ಥಿಗಳು, ಡಾಕ್ಟರೇಟ್‌ ಪದವಿ ಪಡೆದ ವಿದ್ಯಾರ್ಥಿಗಳು, ವಿವಿ ಶಿಕ್ಷಕಕರು ಸಹ ಕಡ್ಡಾಯವಾಗಿ ಖಾದಿ ಬಿಳಿ ಉಡುಪುಗಳನ್ನು ಧರಿಸಬೇಕು.

ಬಸವರಾಜ ಹೊಂಗಲ್‌ 

Advertisement

Udayavani is now on Telegram. Click here to join our channel and stay updated with the latest news.

Next