Advertisement

“ಹಿಂಸೆಗೆ ಪ್ರಚೋದನೆ ನೀಡಿದ್ದೇ ಖಾದರ್‌’

11:35 PM Dec 20, 2019 | Lakshmi GovindaRaj |

ಬೆಂಗಳೂರು: ದಕ್ಷಿಣ ಕನ್ನಡ ಶಾಂತವಾಗಿತ್ತು. ಆದರೆ, ಮಾಜಿ ಸಚಿವ ಯು.ಟಿ.ಖಾದರ್‌ ಅವರು ನೇರವಾಗಿ ಉತ್ತರ, ಈಶಾನ್ಯ ರಾಜ್ಯಗಳಲ್ಲಾದಂತೆ ಇಲ್ಲಿಯೂ ರಾಜ್ಯಕ್ಕೆ ಬೆಂಕಿ ಹಾಕುತ್ತಾರೆ ಎಂದು ಹೇಳಿದ್ದು, ಪರೋಕ್ಷವಾಗಿ ಸಮಾಜದ್ರೋಹಿಗಳು, ಕಟ್ಟಾ ಮತೀಯವಾದಿಗಳು ಈ ಕೃತ್ಯಕ್ಕೆ ಕುಮ್ಮಕ್ಕು ಕೊಟ್ಟಂತಾಗಿದೆ. ಖಾದರ್‌ ಅವರು ಮಾತನಾಡದಿದ್ದರೆ ಈ ರೀತಿ ಆಗುತ್ತಿರಲಿಲ್ಲ. ತಮ್ಮ ಅಸ್ತಿತ್ವಕ್ಕಾಗಿ ಅವರು ಈ ರೀತಿ ಮಾಡಿದ್ದಾರೆ ಎನಿಸುತ್ತದೆ. ಈ ಬಗ್ಗೆ ತನಿಖೆಯಾಗಿ ಅವರ ಕಾರ್ಯಾಚರಣೆ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಆಗ್ರಹಿಸಿದ್ದಾರೆ.

Advertisement

ರಾಜ್ಯ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ದಕ್ಷಿಣ ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ಮತೀಯ ಘರ್ಷಣೆ ನಡೆದಿರಲಿಲ್ಲ. ಮಂಗಳೂರಿನಿಂದ ಕೊಡಗು, ಮೈಸೂರುವರೆಗೆ ಈ ರೀತಿಯ ಸಣ್ಣಪುಟ್ಟ ಮತೀಯ ಘರ್ಷಣೆಯಾದ ಕೂಡಲೇ ಕೇರಳದ ಮೂಲಭೂತ ಮತೀಯವಾದಿಗಳ ಪ್ರವೇಶವಾಗುವುದು, ಜೀವ ಹಾನಿ ಮಾಡಿ ಕೇರಳಕ್ಕೆ ಹೋಗುವುದು ನಡೆದಿದೆ. ಅಂತಹ ವಿದ್ರೋಹಿಗಳೊಂದಿಗೆ ಕಾಂಗ್ರೆಸ್‌ನವರಿಗೆ ನಿಕಟ ಸಂಪರ್ಕವಿದೆ. ಕಾಂಗ್ರೆಸ್‌ನವರು ಆಗಾಗ ಅವರ ಉಪಯೋಗ ಪಡೆಯುತ್ತಾರೆ ಎಂದು ದೂರಿದರು.

ಹೊರಗಿನಿಂದ ಜನರನ್ನು ಕರೆ ತರಲಾಗಿದೆ: ಗುರುವಾರದ ಘಟನೆ ದಕ್ಷಿಣ ಕನ್ನಡ ಭಾಗದವರಿಂದ ಆದ ಕೃತ್ಯವಲ್ಲ. ಬೇರೆಯವರು ಬಂದದ್ದು ಈ ರೀತಿಯ ದೊಡ್ಡ ಗಲಾಟೆಗೆ ಕಾರಣವಾಗಿದೆ. ಕೇರಳದಿಂದ ಬಂದವರಿಂದ ಈ ರೀತಿ ಆಗುವ ಸಾಧ್ಯತೆಗಳಿವೆ. ದೇಶದ ವಿವಿಧೆಡೆ ಹಿಂಸಾಚಾರ ನಡೆದಾಗಲೂ ಎರಡು- ಮೂರು ದಿನ ಮಂಗಳೂರು ಶಾಂತವಾಗಿತ್ತು. ಆದರೆ 2-3 ದಿನದ ನಂತರ ಜನರನ್ನು ಕರೆ ತಂದು ಗಲಾಟೆ ಮಾಡಿದಂತಿದೆ ಎಂದು ಸಂಶಯ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಮುಖಂಡರು ಮಂಗಳೂರಿಗೆ ಭೇಟಿ ನೀಡುವ ಪ್ರಯತ್ನದ ಬಗ್ಗೆ ಪ್ರತಿಕ್ರಿಯಿಸಿದ ಸದಾನಂದ ಗೌಡ, ಭೇಟಿ ನೀಡಲು ಇದು ಸಕಾಲವಲ್ಲ. ಮೊದಲಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಕಾಂಗ್ರೆಸ್‌ ನಾಯಕರಿಗೆ ಶಾಂತಿ ಕಾಪಾಡಲು ಹೇಳಲಿ. ಮೊದಲೇ ಹೊತ್ತಿ ಉರಿಯುತ್ತಿರುವ ದಕ್ಷಿಣ ಕನ್ನಡಕ್ಕೆ ಇನ್ನಷ್ಟು ಪೆಟ್ರೋಲ್‌ ಸುರಿಯಲು ಹೋಗುವುದನ್ನು ಮಾಡಬಾರದು. ಇವರು ಹೋಗುವುದರಿಂದ ಸಮಾಜ ದ್ರೋಹಿಗಳಿಗೆ ಇನ್ನಷ್ಟು ಬೆಂಬಲ ಸಿಕ್ಕಂತಾಗಲಿದೆ. ಪರೋಕ್ಷವಾಗಿ ಗಲಾಟೆಗೆ ಪ್ರೇರಣೆ ನೀಡಿದಂತಾಗುತ್ತದೆ ಎಂದರು.

ಕಾಂಗ್ರೆಸ್‌ ನಾಯಕರು ಮಂಗಳೂರಿಗೆ ಹೋಗುವುದಾಗಿ ಹೇಳುತ್ತಿದ್ದಂತೆ ಶಾಂತವಾಗಿದ್ದ ಉಪ್ಪಿನಂಗಡಿಯಲ್ಲಿ ಕಲ್ಲು ತೂರಾಟವಾಗಿದೆ. ಕೊನೆಗೆ ಸರ್ಕಾರ, ಪೊಲೀಸರ ಮೇಲೆ ದೋಷಾರೋಪ ಮಾಡುತ್ತಾರೆ. ಪರಿಸ್ಥಿತಿ ಶಾಂತವಾದ ಬಳಿಕ ಕೆಲ ದಿನಗಳ ನಂತರ ಭೇಟಿ ನೀಡಲಿ ಎಂದು ಸಲಹೆ ನೀಡಿದರು. ಬಿಜೆಪಿ ಸರ್ಕಾರವಿರುವ ರಾಜ್ಯಗಳಲ್ಲೇ ಹಿಂಸಾಚಾರ ನಡೆಯುತ್ತಿದೆಯಲ್ಲ ಎಂದು ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಸರ್ಕಾರವಿರುವ ರಾಜ್ಯಗಳಲ್ಲಿ ಅನ್ಯ ಪಕ್ಷಗಳಿಗೆ ಹೊಟ್ಟೆ ಉರಿ ಇದೆ. ಹಾಗಾಗಿ ಗಲಭೆ, ಹಾರಿಕೆ ಸುದ್ದಿಗಳನ್ನು ಹರಡುವ ಪ್ರಯತ್ನ ನಡೆದಿದೆ ಎಂದರು.

Advertisement

ಪ್ರಚೋದನೆಯೇ ಕಾರಣ: ಡಿಸಿಎಂ
ಬೆಂಗಳೂರು: ರಾಷ್ಟ್ರದಲ್ಲಿ ಭದ್ರತೆ ಹಾಗೂ ಏಕತೆಗಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸಲಾಗಿದ್ದು, ಕಾಯ್ದೆ ಕುರಿತು ಕೆಲವರು ತಪ್ಪು ಮಾಹಿತಿ ನೀಡಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಕಾಂಗ್ರೆಸ್‌ನ ಯು.ಟಿ.ಖಾದರ್‌ ಅವರು ಪ್ರಚೋದನೆ ನೀಡಿ ಹಿಂಸಾಚಾರ ತೀವ್ರ ರೂಪ ಪಡೆಯಲು ಕಾರಣರಾಗಿದ್ದಾರೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಆರೋಪಿಸಿದ್ದಾರೆ.

ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಕಾರ್ಯಕರ್ತರ ಅಹವಾಲು ಆಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ಕಾಯ್ದೆಯಿಂದ ದೇಶದ ಯಾವುದೇ ಸಮುದಾಯ, ಜನಾಂಗದವರಿಗೆ ಅನ್ಯಾಯವಾಗದು. ಬೇರೆ ದೇಶದಿಂದ ವಲಸೆ ಬಂದು ರಾಷ್ಟ್ರದಲ್ಲಿ ಅನೇಕ ವರ್ಷದಿಂದ ನೆಲೆಸಿದವರಿಗೂ ಪೌರತ್ವ ನೀಡಲು ನಿರ್ಧರಿಸಲಾಗಿದೆ. ಆದರೂ, ಪ್ರತಿಪಕ್ಷಗಳು ತಪ್ಪು ಮಾಹಿತಿ ನೀಡುತ್ತಿರುವುದರಿಂದ ಕಲಬುರಗಿ, ಮಂಗಳೂರು ಸೇರಿದಂತೆ ಹಲವೆಡೆ ಹಿಂಸಾಚಾರ ನಡೆದಿದೆ. ಮಂಗಳೂರಿನಲ್ಲಿ ಯು.ಟಿ.ಖಾದರ್‌ ಅವರು ಪ್ರಚೋದನಕಾರಿ ಭಾಷಣ ಮಾಡಿದ್ದೇ ಹಿಂಸಾಚಾರಕ್ಕೆ ಕಾರಣವಾಯಿತು ಎಂಬ ಮಾತು ಎಲ್ಲೆಡೆಯಿಂದ ಕೇಳಿ ಬರುತ್ತಿದೆ ಎಂದು ಹೇಳಿದರು.

ಸ್‌ಗೆ ಹಾನಿ ಮಾಡುವುದು ಬೇಡ: ಪ್ರತಿಭಟಿಸುವುದು ಅವರ ಹಕ್ಕು. ಆದರೆ, ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಬೇಕು. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳಿಗೆ ಕಲ್ಲು ತೂರಾಟ ನಡೆಸುವುದು, ಹಾನಿ ಮಾಡುವುದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿ ಎಲ್ಲರಿಗೂ ಹೊರೆಯಾಗಲಿದೆ. ಹಾಗಾಗಿ, ಸರ್ಕಾರಿ ಬಸ್‌ಗಳಿಗೆ ಕಲ್ಲು ಎಸೆದು ಹಾನಿ ಮಾಡಬಾರದು ಎಂದು ಸಾರಿಗೆ ಸಚಿವನಾಗಿ ಮನವಿ ಮಾಡುತ್ತೇನೆ ಎಂದರು. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಅವರು ರೈಲುಗಳಿಗೆ ಬೆಂಕಿ ಹಚ್ಚಿದರೆ, ಹಾನಿ ಮಾಡಿದರೆ ಕ್ರಮ ಕೈಗೊಳ್ಳುವಂತೆ ಹೇಳಿದ್ದಾರೆ. ಮಾತಿನ ಭರದಲ್ಲಿ “ಕಂಡಲ್ಲಿ ಗುಂಡಿಕ್ಕಿ’ ಎಂದು ಹೇಳಿರಬಹುದೇ ಹೊರತು ಪ್ರಚೋದನಕಾರಿ ಹೇಳಿಕೆ ನೀಡಿಲ್ಲ ಎಂದು ಸಮರ್ಥಿಸಿಕೊಂಡರು.

ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಮರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಮಾನವೀಯತೆಯ ನೆಲೆಯಲ್ಲಿ ತರಲಾದ ತಿದ್ದುಪಡಿ ಇದಾಗಿದ್ದು, ಹಿಂದೆಯೇ ಆಗಬೇಕಿತ್ತು. ಈ ಹಿಂದೆ ಮತೀಯ ಆಧಾರದ ಮೇಲೆ ಪಾಕಿಸ್ತಾನ ವಿಭಜನೆಗೊಂಡಿದ್ದರ ಫ‌ಲವಾಗಿ ಈ ತಿದ್ದುಪಡಿ ಕಾಯ್ದೆ ಬಂದಿದೆ.
-ಸದಾನಂದ ಗೌಡ, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next