Advertisement

Karnataka poll 2023; ಹಾವೇರಿಯಲ್ಲಿ ಘಟಾನುಘಟಿಗಳ ಖದರ್‌; ಉಕ್ಕಿನ ಮನುಷ್ಯ ಗುದ್ಲೆಪ್ಪ

06:17 PM Apr 05, 2023 | Team Udayavani |

ಹಾವೇರಿ: ಮರಿ ಕಲ್ಯಾಣವೆಂದೇ ಪ್ರಸಿದ್ಧಿ ಪಡೆದಿರುವ ಹಾವೇರಿ ವಿಧಾನಸಭಾ ಕ್ಷೇತ್ರ 15 ವಿಧಾನಸಭೆ ಚುನಾವಣೆ ಎದುರಿಸಿದ್ದು, ಈಗ 16ನೇ ಚುನಾವಣೆಗೆ ಸಿದ್ಧಗೊಂಡಿದೆ. 12 ಚುನಾವಣೆಗಳಲ್ಲಿ ಸಾಮಾನ್ಯ ಕ್ಷೇತ್ರವಾಗಿದ್ದ ಹಾವೇರಿ 2008ರಿಂದ ಎಸ್‌ಸಿ ಮೀಸಲು ಕ್ಷೇತ್ರವಾಗಿದೆ.

Advertisement

ಪ್ರಸಕ್ತ 2023ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯನ್ನಾಗಿ ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರನ್ನು ಘೋಷಿಸಿದೆ. ಆದರೆ, ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತಟ್ಟಿದೆ. ಬಿಜೆಪಿಯಲ್ಲಿ ಹಾಲಿ ಶಾಸಕ ನೆಹರು ಓಲೇಕಾರ ಇದ್ದರೂ ಅವರಿಗೆ ಟಿಕೆಟ್‌ ತಪ್ಪಿಸಲು ಇತರ ಆಕಾಂಕ್ಷಿಗಳು ಶತಾಯ ಗತಾಯ ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯಲ್ಲಿ ಲೀಡ್ಕರ್‌ ಉಪಾಧ್ಯಕ್ಷ ಡಿ.ಎಸ್‌.ಮಾಳಗಿ, ಜಿಪಂ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ, ಮಲ್ಲೇಶಪ್ಪ ಹರಿಜನ,
ವೆಂಕಟೇಶ ನಾರಾಯಣಿ, ರಾಮು ಮಾಳಗಿ, ಶ್ರೀಪಾದ ಬೆಟಗೇರಿ ಆಕಾಂಕ್ಷಿಗಳಿದ್ದಾರೆ. ಬಿಜೆಪಿ ಟಿಕೆಟ್‌ ಬಯಸಿ ಬ್ಯಾಡಗಿ ಗ್ರೇಡ್‌-2 ತಹಶೀಲ್ದಾರ್‌ ಗವಿಸಿದ್ದಪ್ಪ ದ್ಯಾಮಣ್ಣನವರ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದಾರೆ. ಹೀಗಾಗಿ, ಟಿಕೆಟ್‌ ಯಾರಿಗೆ ಸಿಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ಇನ್ನು ಬೇಡ ಜಂಗಮ(ಎಸ್‌ಸಿ) ಜಾತಿ ಪ್ರಮಾಣ ಪತ್ರ ಪಡೆದಿದ್ದ ಎಂ.ಎಂ.ಹಿರೇಮಠ ಪಕ್ಷೇತರರಾಗಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದರು. ಆದರೆ, ಜಿಲ್ಲಾಧಿಕಾರಿಗಳು ಅವರ ಜಾತಿ ಪ್ರಮಾಣ ಪತ್ರ ರದ್ದುಪಡಿಸಿದ್ದು, ಈ ಕ್ರಮವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಹಿರೇಮಠ ಹೇಳಿದ್ದಾರೆ. ಹೀಗಾಗಿ, ಹಾವೇರಿ ಮೀಸಲು ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಆಗುತ್ತಿರುವ ರಾಜಕೀಯ ಬೆಳವಣಿಗೆಗಳು ಕುತೂಹಲ ಮೂಡಿಸಿವೆ.

ಪಕ್ಷಕ್ಕಿಂತ ವ್ಯಕ್ತಿಗೆ ಆದ್ಯತೆ: ಹಾವೇರಿ ಕ್ಷೇತ್ರದಲ್ಲಿ ಪಕ್ಷಕ್ಕಿಂತ ವ್ಯಕ್ತಿಗಳಿಗೆ ಮಣೆ ಹಾಕಿರುವುದೇ ಹೆಚ್ಚು. ವ್ಯಕ್ತಿಯ ಸ್ವಭಾವ, ವರ್ಚಸ್ಸು ಆಧರಿಸಿ ಚುನಾವಣೆಯಲ್ಲಿ ಮತದಾರರು ಅಭ್ಯರ್ಥಿಗಳಿಗೆ ಮಣೆ ಹಾಕಿದ್ದಾರೆ. ಎಸ್‌.ಎಫ್‌.ತಾವರೆ, ಡಾ.ಚಿತ್ತರಂಜನ ಕಲಕೋಟಿ, ಬಸವರಾಜ ಶಿವಣ್ಣನವರ ಅವರು ಬೇರೆ-ಬೇರೆ ಪಕ್ಷದಿಂದ ಸ್ಪರ್ಧಿಸಿದ್ದರು. ಜನ ಪಕ್ಷಕ್ಕಿಂತ ವ್ಯಕ್ತಿಗೆ ಮಾನ್ಯತೆ ನೀಡಿದ್ದಾರೆ. ಆದರೆ ಪಕ್ಷೇತರರಾಗಿ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಈವರೆಗೂ ಮಾನ್ಯತೆ ನೀಡಿರುವುದು ಕಂಡು ಬಂದಿಲ್ಲ.

ಈವರೆಗಿನ ಹಾವೇರಿ ಶಾಸಕರು: 1951 ಗುದ್ಲೆಪ್ಪ ಹಳ್ಳಿಕೇರಿ(ಕಾಂಗ್ರೆಸ್‌), 1957 ಸಿದ್ದವ್ವ ಮಹಾದೇವಪ್ಪ ಮೈಲಾರ (ಕಾಂಗ್ರೆಸ್‌), 1962 ಬಿ.ವಿ.ಮಾಗಾವಿ (ಕಾಂಗ್ರೆಸ್‌), 1967 ಬಿ.ವಿ. ಮಾಗಾವಿ (ಕಾಂಗ್ರೆಸ್‌), 1972 ಎಸ್‌. ಎಫ್‌.ತಾವರೆ (ಕಾಂಗ್ರೆಸ್‌), 1978 ಎಸ್‌.ಎಫ್‌.ತಾವರೆ (ಕಾಂಗ್ರೆಸ್‌), 1983 ಡಾ.ಚಿತ್ತರಂಜನ ಕಲಕೋಟಿ (ಜೆಎನ್‌ಪಿ), 1985 ಡಾ.ಚಿತ್ತರಂಜನ ಕಲಕೋಟಿ (ಜನತಾ ಪಕ್ಷ), 1989 ಎಂ.ಡಿ.ಶಿವಪುರ (ಕಾಂಗ್ರೆಸ್‌), 1994 ಬಸವರಾಜ ಶಿವಣ್ಣನವರ (ಜನತಾ ದಳ), 1999 ಬಸವರಾಜ ಶಿವಣ್ಣನವರ (ಜೆಡಿಎಸ್‌), 2004 ಶಿವರಾಜ ಸಜ್ಜನರ (ಬಿಜೆಪಿ), 2008 ನೆಹರು ಓಲೇಕಾರ (ಬಿಜೆಪಿ), 2013 ರುದ್ರಪ್ಪ ಲಮಾಣಿ (ಕಾಂಗ್ರೆಸ್‌), 2018 ನೆಹರು ಓಲೇಕಾರ (ಬಿಜೆಪಿ) ಆಯ್ಕೆಯಾಗಿದ್ದಾರೆ.

Advertisement

ಹಾವೇರಿ (ಎಸ್‌ಸಿ) ಕ್ಷೇತ್ರದ ವಿಶೇಷ: ಈ ಕ್ಷೇತ್ರದ ಇತಿಹಾಸವನ್ನುಒಮ್ಮೆ ಅವಲೋಕಿಸಿದರೆ ಅನೇಕ ಕುತೂಹಲದ ಅಂಶಗಳು ಕಣ್ಣೆದುರು ನಿಲ್ಲುತ್ತವೆ. 2008ರಿಂದ ಎಸ್‌ಸಿ ಕ್ಷೇತ್ರವಾದ ನಂತರ ಇಲ್ಲಿನ ನಾಯಕರು ಬ್ಯಾಡಗಿಗೆ ವಲಸೆ ಹೋದರೆ, ಅಲ್ಲಿನ ನಾಯಕರು ಹಾವೇರಿಗೆ ಬಂದರು. 1951ರಲ್ಲಿ ಜರುಗಿದ ಮೊದಲ ಚುನಾವಣೆಯಿಂದ ಸತತವಾಗಿ ಐದು ಬಾರಿ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಹಾವೇರಿ ಮತದಾರರು ಮಣೆ ಹಾಕಿದ್ದು ಸೇರಿ ಒಟ್ಟು 8 ಬಾರಿ ಕಾಂಗ್ರೆಸ್‌ ಅಭ್ಯರ್ಥಿಗಳು ಆಯ್ಕೆಯಾಗಿದ್ದರೆ, 4 ಬಾರಿ ಜನತಾ ಪರಿವಾರದ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. 3 ಬಾರಿ ಬಿಜೆಪಿ ಗೆಲುವಿನ ನಗೆ ಬೀರಿದೆ.

ನಾಲ್ಕು ಬಾರಿ ಮಹಿಳೆಯರು ಇಲ್ಲಿ
ಕಣಕ್ಕಿಳಿದಿದ್ದು, ಒಂದು ಬಾರಿ ಮಾತ್ರ ಮಹಿಳೆ, ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹದೇವರ ಪತ್ನಿ ಸಿದ್ದಮ್ಮ ಆಯ್ಕೆಯಾಗಿರುವುದು ಕ್ಷೇತ್ರದ ವಿಶೇಷವಾಗಿದೆ. ಸ್ವಾತಂತ್ರ್ಯಹೋರಾಟಗಾರ, ಕರ್ನಾಟಕದ ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿದ್ದ ಗುದ್ಲೆಪ್ಪ ಹಳ್ಳಿಕೇರಿ ಅವರಂತಹ ಘಟಾನುಘಟಿಗಳು ಇಲ್ಲಿ ಆಯ್ಕೆಯಾಗಿದ್ದಾರೆ. ಗುದ್ಲೆಪ್ಪ ಹಳ್ಳಿಕೇರಿಯವರು ಅಂದಿನ ಮುಂಬೈ-ಕರ್ನಾಟಕ ವಿಧಾನಸಭೆ ಪ್ರವೇಶಿಸಿದ್ದರು. ಬಿ.ವಿ. ಮಾಗಾವಿ, ಎಸ್‌.ಎಫ್‌. ತಾವರೆ, ಡಾ. ಚಿತ್ತರಂಜನ ಕಲಕೋಟಿ, ಬಸವರಾಜ ಶಿವಣ್ಣನವರ ಅವರು ಸತತವಾಗಿ 2ಬಾರಿ ಆಯ್ಕೆಯಾಗಿದ್ದಾರೆ.

*ವೀರೇಶ ಮಡ್ಲೂರ

Advertisement

Udayavani is now on Telegram. Click here to join our channel and stay updated with the latest news.

Next