Advertisement

ರೌಡಿಶೀಟರ್‌ಗಳಿಗೆ ಖಡಕ್‌ ಎಚ್ಚರಿಕೆ

01:32 PM Mar 24, 2019 | Lakshmi GovindaRaju |

ದೇವನಹಳ್ಳಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಸುಮಾರು 1,500 ರೌಡಿಶೀಟರ್‌ಗಳ ಪರೇಡ್‌ ನಡೆಸಿ, ಚುನಾವಣೆಯಲ್ಲಿ ಶಾಂತಿ ಕದಡುವ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಖಡಕ್‌ ಎಚ್ಚರಿಕೆ ನೀಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರಾಮ್‌ ನಿವಾಸ್‌ ಸಪೆಟ್‌ ತಿಳಿಸಿದರು.

Advertisement

ಲೋಕಸಭಾ ಚುನಾವಣೆಗೆ ಸಂಬಂಧಿಸಿ ಇಲಾಖೆ ಕೈಗೊಂಡಿರುವ ಕ್ರಮಗಳ ಬಗ್ಗೆ “ಉದಯವಾಣಿ’ಯೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು. ಬಾಂಡ್‌ ಮುಟ್ಟುಗೋಲು: ಜಿಲ್ಲೆಯಲ್ಲಿ 1,500 ರೌಡಿ ಶೀಟರ್‌ಗಳನ್ನು ಗುರುತಿಸಿ ಅವರಿಂದ 50 ಸಾವಿರ ರೂ., 1 ಲಕ್ಷ ರೂ. ಭದ್ರತಾ ಠೇವಣಿಯುಳ್ಳ ಬಾಂಡ್‌ ಪೇಪರ್‌ನಲ್ಲಿ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ.

ಮುಚ್ಚಳಿಕೆಗೆ ವಿರುದ್ಧವಾಗಿ ನಡೆದುಕೊಂಡರೆ ಬಾಂಡ್‌ ಪೇಪರ್‌ನಲ್ಲಿ ನಮೂದಿಸಿರುವ ಹಣವನ್ನು ಮಟ್ಟುಗೋಲು ಹಾಕಿಕೊಳ್ಳಲಾಗುವುದು. ಕಠಿಣ ಕಾನೂನು ಕ್ರಮವನ್ನು ಜರುಗಿಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಪೊಲೀಸ್‌ ಇಲಾಖೆ ನಿಮ್ಮೆಲ್ಲರ ನಡವಳಿಕೆ ಹಾಗೂ ದೈನಂದಿನ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಿರುತ್ತದೆ. ಇಲಾಖೆಯಿಂದ ನೀಡುವ ಯಾವುದೇ ಸೂಚನೆಗಳನ್ನು ಉಲ್ಲಂಘನೆ ಮಾಡಿದರೆ ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ತಿಳಿಸಲಾಗಿದೆ ಎಂದು ಹೇಳಿದರು.

ನಿರ್ಭೀತಿಯಿಂದ ಮತದಾನ ಮಾಡಿ: ಚುನಾವಣಾ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ನಿರ್ಭೀತಿಯಿಂದ ಭಾಗವಹಿಸಿ, ಮತದಾನ ಮಾಡಬೇಕು. ರೌಡಿಶೀಟರ್‌ಗಳು ಯಾವುದೇ ವ್ಯಕ್ತಿಗಳ ಮೇಲೆ ಪ್ರಭಾವ ಬೀರಬಾರದು. ಚುನಾವಣೆ ನ್ಯಾಯಯುತ ಮತ್ತು ಪಾರದರ್ಶಕವಾಗಿ ನಡೆಯಲು ಎಲ್ಲಾ ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನು ಪೊಲೀಸ್‌ ಇಲಾಖೆ ಕೈಗೊಂಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ ಆಯಾ ಪೊಲೀಸ್‌ ಠಾಣೆಗಳ ವ್ಯಾಪ್ತಿಗೆ ಬರುವ ರೌಡಿಶೀಟರ್‌ಗಳನ್ನು ಕರೆಸಿ ಎಚ್ಚರಿಕೆ ನೀಡಲಾಗುತ್ತಿದೆ ಎಂದು ಹೇಳಿದರು.

Advertisement

ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚನೆ: ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣಾ ಕ್ಷೇತ್ರದ ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಗೆ ಒಳಪಡುವ ದೇವನಹಳ್ಳಿ ತಾಲೂಕು, ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ ತಾಲೂಕುಗಳಿಗೆ ಸಂಬಂಧಿಸಿ ಅಲ್ಲಿನ ಠಾಣಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಈಗಾಗಲೇ ತಮ್ಮ ತಮ್ಮ ವ್ಯಾಪ್ತಿಯ ರೌಡಿಶೀಟರ್‌ಗಳ ಕರೆಯಿಸಿ ಪರೇಡ್‌ ಮಾಡಿಸಿದ್ದಾರೆ. ಅಲ್ಲದೇ, ಅವರಿಂದ, ಭದ್ರತಾ ಠೇವಣಿಯುಳ್ಳ ಬಾಂಡ್‌ ಪೇಪರ್‌ನಲ್ಲಿ ಮುಚ್ಚಳಿಕೆ ಬರೆಸಿಕೊಂಡು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ರೌಡಿಶೀಟರ್‌ಗಳು ಲೋಕಸಭಾ ಚುನಾವಣೆಯಲ್ಲಿ ಯಾವುದೇ ರೀತಿಯ ಅಹಿತರ ಚಟುವಟಿಕೆಗಳಲ್ಲಿ ತೊಡಗದಂತೆ ಎಲ್ಲಾ ರೀತಿಯ ಕಟ್ಟೆಚ್ಚರದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅವರ ಮೇಲೆ ಪೊಲೀಸರು ಸದಾ ಕಣ್ಣಿಟ್ಟಿರುತ್ತಾರೆ. ಹಾಗೊಮ್ಮೆ, ಅಹಿತರ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡುಬಂದರೆ ಅಂತಹವರ ವಿರುದ್ಧ ಕಾನೂನು ಪ್ರಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಸೂಚನೆಯನ್ನೂ ನೀಡಲಾಗಿದೆ ಎಂದು ತಿಳಿಸಿದರು.

ಸಿಆರ್‌ಎಫ್ ಪಡೆ ನಿಯೋಜನೆ: ಚುನಾವಣೆಗೆ ಪ್ಯಾರಾ ಮಿಲಿಟರಿ(ಸಿಆರ್‌ಎಫ್)ಪಡೆಯನ್ನು ಜಿಲ್ಲೆಯ ವಿವಿಧ ಕಡೆಗಳಲ್ಲಿ ನಿಯೋಜಿಸಲಾಗುವುದು. ಆಯಾ ತಾಲೂಕುಗಳಲ್ಲಿ ಚುನಾವಣೆಗೆ ಪ್ಯಾರಾ ಮಿಲಿಟರಿ(ಸಿಆರ್‌ಎಫ್)ಪಡೆಗಳಿಂದ ಪರೇಡ್‌ ಮಾಡಿಸಲಾಗುವುದು. ಸೂಕ್ಷ್ಮ ಮತಗಟ್ಟೆಗಳಲ್ಲಿ ಜನರಿಗೆ ಭಯವಿಲ್ಲದಂತೆ ಅಗತ್ಯ ರಕ್ಷಣೆ ನೀಡಲಾಗುವುದು. ನಿರ್ಭೀತರಾಗಿ ಮತದಾನ ಮಾಡುವಂತೆ ಮತದಾರರಿಗೆ ಜಾಗೃತಿ ಮೂಡಿಸಲಾಗುವುದು ಎಂದರು.

ಸಜ್ಜನರಾಗಿ ಬಾಳು ಅವಕಾಶ: ಚುನಾವಣೆ ಶಾಂತಿಯುತವಾಗಿ ನಡೆಯಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಪೊಲೀಸ್‌ ಇಲಾಖೆ ಮಾಡಿಕೊಳ್ಳುತ್ತಿದೆ. ಬಂದೂಕು ಪರವಾನಗಿ ಪಡೆದಿರುವವರಿಂದ ಬಂದೂಕುಗಳ‌ನ್ನು ಸಂಗ್ರಹಿಸಿಕೊಳ್ಳಲಾಗುತ್ತಿದೆ. ರೌಡಿಗಳಿಗೆ ಪರಿವರ್ತನೆಗೆ ಅವಕಾಶವಿದೆ.

ಹಾಗಾಗಿ, ಉತ್ತಮ ನಡವಳಿಕೆಯೊಂದಿಗೆ ಯಾವುದೇ ಅಪರಾಧ ಪ್ರಕರಗಳಲ್ಲಿ ಭಾಗಿಗಳಾಗದೇ ಸಜ್ಜನರಾಗಿ ಜೀವನ ನಡೆಸಲು ಮುಂದಾದರೆ, ಅಂತಹವರನ್ನು ರೌಡಿಶೀಟರ್‌ ಪಟ್ಟಿಯಿಂದ ತೆಗೆದುಹಾಕುವ ಅವಕಾಶವಿದೆ. ಈ ಅವಕಾಶವನ್ನು ಬಳಸಿಕೊಂಡು ಉತ್ತಮ ಜೀವನ ನಡೆಸುವಂತಾಬೇಕೆಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next