Advertisement

ಬಜಾರ್‌ಗೆ ಧನ್‌ವೀರ್‌

06:00 AM Jul 06, 2018 | |

“ಬಹುಪರಾಕ್‌ನಲ್ಲಿ ನಾನು ಮೆಸೇಜ್‌ ಕೊಡೋಕೆ ಹೋಗಿದ್ದೆ. ಆದರೆ, ಪ್ರೇಕ್ಷಕರೇ ನನಗೆ ಮೆಸೇಜ್‌ ಕೊಟ್ಟರು …’

Advertisement

– ಹೀಗೆ ಹೇಳಿ ತಮ್ಮ ಎಂದಿನ ಶೈಲಿಯಲ್ಲಿ ನಕ್ಕರು. ಸುನಿ ಅವರ ಈ ಮಾತಿಗೆ ಕಾರಣವಾಗಿದ್ದು, “ಬಜಾರ್‌’ ಚಿತ್ರ. ಸುನಿ ಈಗ “ಬಜಾರ್‌’ ಎಂಬ ಚಿತ್ರವನ್ನು ಮಾಡಿ ಮುಗಿಸಿದ್ದಾರೆ. ಇದು ಯಾವ ಜಾನರ್‌ ಸಿನಿಮಾ, ಏನಾದರೂ ಈ ಸಿನಿಮಾದಲ್ಲಿ ಮೆಸೇಜ್‌ ಇದೆಯಾ ಎಂಬ ಪ್ರಶ್ನೆ ಸುನಿಗೆ ಇತ್ತೀಚೆಗೆ ಪತ್ರಕರ್ತರಿಂದ ಎದುರಾಯಿತು. ಅದಕ್ಕೆ ಉತ್ತರವಾಗಿ ಸುನಿ ಹೀಗೆ ಹೇಳಿದ್ದು. ಸುನಿ “ಬಜಾರ್‌’ ಮೂಲಕ ಮತ್ತೂಂದು ಜಾನರ್‌ಗೆ ತೆರೆದುಕೊಂಡಿದ್ದಾರೆ. ಇದು ಔಟ್‌ ಅಂಡ್‌ ಔಟ್‌ ಮಾಸ್‌ ಎಂಟರ್‌ಟೈನರ್‌. ಈ ಸಿನಿಮಾ ಮೂಲಕ ಧನ್‌ವೀರ್‌ ನಾಯಕರಾಗಿ ಲಾಂಚ್‌ ಆಗುತ್ತಿದ್ದಾರೆ. ಒಬ್ಬ ಹೊಸ ಹೀರೋನಾ ಲಾಂಚ್‌ಗೆ ಏನೆಲ್ಲಾ ಬೇಕೋ ಆ ಎಲ್ಲಾ ಅಂಶಗಳಿರುವ ಕಮರ್ಷಿಯಲ್‌ ಸಿನಿಮಾವಾಗಿ “ಬಜಾರ್‌’ ಮೂಡಿಬಂದಿದೆ. ಈಗಾಗಲೇ ಚಿತ್ರೀಕರಣ ಕೂಡಾ ಮಾಡಿ ಮುಗಿಸಿದ್ದಾರೆ. “ಈ ಸಿನಿಮಾದಲ್ಲಿ ಸಂದೇಶ ಕೊಡುವ ಗೋಜಿಗೆ ಹೋಗಿಲ್ಲ. ಪಕ್ಕಾ ಕಮರ್ಷಿಯಲ್‌ ಸಿನಿಮಾ. ಲವ್‌, ಆ್ಯಕ್ಷನ್‌ಗೆ ಇಲ್ಲಿ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಮುಖ್ಯವಾಗಿ ಈ ಸಿನಿಮಾದಲ್ಲಿ ಪಾರಿವಾಳ ರೇಸ್‌ ಅನ್ನು ತೋರಿಸಿದ್ದೇವೆ. ನಾಯಕ ಇಲ್ಲಿ ಪಾರಿವಾಳ ರೇಸ್‌ನಲ್ಲಿ ತೊಡಗಿರುವ ವ್ಯಕ್ತಿ. ಹಾಗಾಗಿ, ಪಾರಿವಾಳ ರೇಸ್‌ ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ. ಪಾರಿವಾಳ ಜೊತೆ ಚಿತ್ರೀಕರಣ ಮಾಡೋದು ತುಂಬಾ ಕಷ್ಟ. ಅವುಗಳ ಮೂಡ್‌ನೋಡಿಕೊಂಡು ಚಿತ್ರೀಕರಣ ಮಾಡಬೇಕಿತ್ತು’ ಎಂದು ಚಿತ್ರೀಕರಣದ ಅನುಭವ ಹಂಚಿಕೊಂಡರು ಸುನಿ. ಪಾರಿವಾಳಗಳಿರುವ ದೃಶ್ಯಗಳನ್ನು ಪ್ರಕಾಶ್‌ನಗರ ಸುತ್ತಮುತ್ತ ಚಿತ್ರೀಕರಿಸಲಾಗಿದೆಯಂತೆ. ನಾಯಕ ಧನ್‌ವೀರ್‌ ಈ ಚಿತ್ರಕ್ಕಾಗಿ ಸಿಕ್ಸ್‌ಪ್ಯಾಕ್‌ ಮಾಡಿಕೊಂಡ ಬಗ್ಗೆಯೂ ಸುನಿ ಹೇಳಿದರು. ಆರಂಭದಲ್ಲಿ ಸಿಕ್ಸ್‌ಪ್ಯಾಕ್‌ ಮಾಡಿಸುವ ಐಡಿಯಾ ಇರಲಿಲ್ಲವಂತೆ. ಆ ನಂತರ ನಾಯಕಿ ಕನಸು ಕಾಣುವ ಹಾಡೊಂದರಲ್ಲಿ ನಾಯಕ ಸಿಕ್ಸ್‌ಪ್ಯಾಕ್‌ನಲ್ಲಿ ಕಾಣಿಸಿಕೊಳ್ಳಬೇಕಾದ್ದರಿಂದ ಧನ್‌ವೀರ್‌ ಸಿಕ್ಸ್‌ಪ್ಯಾಕ್‌ ಮಾಡಿದ್ದಾಗಿ ಹೇಳಿಕೊಂಡರು.

ನಾಯಕ ಧನ್‌ವೀರ್‌ ಹೆಚ್ಚೇನು ಮಾತನಾಡಲಿಲ್ಲ. 22 ದಿನದಲ್ಲಿ ಸಿಕ್ಸ್‌ಪ್ಯಾಕ್‌ ಮಾಡಿದ್ದಾಗಿ ಹೇಳಿಕೊಂಡರು. ಇನ್ನು ಚಿತ್ರದಲ್ಲಿ ಆ್ಯಕ್ಷನ್‌ ದೃಶ್ಯಗಳು ತುಂಬಾ ಸವಾಲಾಗಿತ್ತಂತೆ. ಧನ್‌ವೀರ್‌ ಇಲ್ಲಿ ಕಲ್ಕಿ ಎಂಬ ಪಾತ್ರ ಮಾಡಿದ್ದಾರೆ. ನಾಯಕಿ ಅದಿತಿ ಇಲ್ಲಿ ಪಾರಿಜಾತ ಎಂಬ ಮಧ್ಯಮ ವರ್ಗದ ಕುಟುಂಬದ ಹುಡುಗಿಯಾಗಿ ನಟಿಸಿದ್ದಾರೆ. ಚಿತ್ರವನ್ನು ತಿಮ್ಮೇಗೌಡ ನಿರ್ಮಿಸಿದ್ದಾರೆ. ತಮ್ಮ ಮಗನ ಸಿನಿಮಾ ಆಸೆಗಾಗಿ ಸಿನಿಮಾ ನಿರ್ಮಾಣಕ್ಕೆ ಬಂದಿದ್ದು, ಎಲ್ಲವೂ ಅಂದುಕೊಂಡಂತೆ ನಡೆದು ಮೂಡಿಬಂದ ಖುಷಿ ಅವರದು. ಮುಂದಿನ ದಿನಗಳಲ್ಲಿ ಮತ್ತಷ್ಟು ಒಳ್ಳೆಯ ಸಿನಿಮಾಗಳನ್ನು ನಿರ್ಮಿಸುವ ಆಸೆ ಅವರಿಗಿದೆ. ಚಿತ್ರದ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಶಿವಧ್ವಜ್‌, ಎಲ್ಲವನ್ನು ಕಾರ್ಪೋರೇಟ್‌ ಶೈಲಿಯಲ್ಲಿ ಮಾಡಿದ್ದರಿಂದ ಶೇ. 30ರಷ್ಟು ಉಳಿತಾಯವಾಗಿದೆ ಎನ್ನುವುದು ಅವರ ಮಾತು. ಚಿತ್ರದ ಸಂಗೀತ ನಿರ್ದೇಶಕ ರವಿ ಬಸ್ರೂರು, ಸಂತೋಷ್‌ ಪಾತಾಜೆ ಕೂಡಾ “ಬಜಾರ್‌’ನ ಟೀಸರ್‌ ಬಿಡುಗಡೆಗೆ ಸಾಕ್ಷಿಯಾದರು. 

Advertisement

Udayavani is now on Telegram. Click here to join our channel and stay updated with the latest news.

Next