Advertisement

ಕಲಾವಿದರು ಹಾದಿ ತಪ್ಪಲು ಪ್ರೇಕ್ಷಕ ವರ್ಗವೂ ಕಾರಣ: ಕೆ.ಎಚ್‌.ದಾಸಪ್ಪ ರೈ

01:23 AM Jul 07, 2024 | Team Udayavani |

ಸರಿ ಸುಮಾರು ಐದು ದಶಕಗಳ ಕಾಲ ಯಕ್ಷಗಾನ ಕಲಾವಿದನಾಗಿ ಹತ್ತಾರು ಕಥಾನಾಯಕನ ಪಾತ್ರಗಳಿಗೆ ತನ್ನ ಸೌಮ್ಯ ನಡೆಯಿಂದ ಜೀವ ತುಂಬಿದ್ದ ಕೆ.ಎಚ್‌.ದಾಸಪ್ಪ ರೈ ಅವರು ಯಕ್ಷಗಾನ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಪಾರ. ಈಶ್ವರಮಂಗಲದ ಕುತ್ಯಾಳದಲ್ಲಿ 1950ರ ಮೇ 10ರಂದು ಬೈಂಕಿ ರೈ ಮತ್ತು ಕುಂಜಕ್ಕೆ ದಂಪತಿಯ ಪುತ್ರನಾಗಿ ಜನಿಸಿದ ದಾಸಪ್ಪ ರೈ ಅವರಿಗೆ ಈಗ 75 ರ ಹರೆಯ. 6ನೇ ತರಗತಿ ತನಕ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪಡೆದು ತನ್ನ 16ನೇ ವಯಸ್ಸಿನಲ್ಲಿ ಯಕ್ಷಗಾನ ಕ್ಷೇತ್ರ ಪ್ರವೇಶಿಸಿದರು. ಕರ್ನಾಟಕ ಯಕ್ಷಗಾನ ನಾಟಕ ಸಭಾದಲ್ಲಿ ಕಲಾವಿದರಾಗಿದ್ದ ಕೆ.ಎನ್‌. ಬಾಬು ರೈ ಅವರಲ್ಲೇ ನಾಟ್ಯಾಭ್ಯಾಸ ಮಾಡಿ, ಮೇಳದಲ್ಲಿ ಕಲಾವಿದರಾಗಿ ಪಾತ್ರ ನಿರ್ವಹಿಸಲಾರಂಭಿಸಿದರು. ಕರ್ನಾಟಕ ಮೇಳದ ಮೆನೇಜರ್‌ ಆಗಿದ್ದ ವೇಳೆ ಮಳೆಗಾಲದ ಬುಕ್ಕಿಂಗ್‌ ವ್ಯವಸ್ಥೆಯನ್ನು ಪರಿಚಯಿಸಿ ಮೇಳಕ್ಕೆ ಆರ್ಥಿಕ ಶಕ್ತಿ ತುಂಬಿದ್ದರು. ಇದನ್ನು ಇತರ ಡೇರೆ ಮೇಳಗಳು ಅನುಸರಿಸಿದವು. ಆ ಬಳಿಕದ ವರ್ಷಗಳಲ್ಲಿ ಕದ್ರಿ ಮೇಳದ ಪ್ರಧಾನ ಕಲಾವಿದ ಮತ್ತು ಉಸ್ತುವಾರಿ ಹುದ್ದೆ ದಾಸಪ್ಪ ರೈಗಳ ಹೆಗಲಿಗೇರಿತು. ಈ ಸಂದರ್ಭದಲ್ಲಿ “ಗೆಜ್ಜೆದ ಪೂಜೆ’, “ಸತ್ಯದಪ್ಪೆ ಚೆನ್ನಮ್ಮ’ ಪ್ರಸಂಗಗಳು ಭಾರೀ ಜನಮನ್ನಣೆ ಪಡೆದುವು. ಮುಂದೆ ದಾಸಪ್ಪ ರೈಗಳು ಸ್ವತಃ ಕುಂಬಳೆ ಮೇಳ ಪ್ರಾರಂಭಿಸಿ, ಕೈ ಸುಟ್ಟುಕೊಂಡರು. ಮೇಳದ ಯಜಮಾನರಾಗಿ ಸೋತರೂ ಧೃತಿಗಡದೆ ಮತ್ತೆ ಕಲಾವಿದರಾಗಿ ಕರ್ನಾಟಕ ಮೇಳ, ಕದ್ರಿ ಮೇಳ, ಮಂಗಳಾದೇವಿ ಮೇಳಗಳಲ್ಲಿ ತಿರುಗಾಟ ನಡೆಸಿದರು. ರಾವಣ, ಮಹಿಷಾಸುರ, ಕಂಸ, ಭೀಮ ಮುಂತಾದ ಪಾತ್ರಗಳಲ್ಲದೆ ಹಲವು ತುಳು ಪ್ರಸಂಗಗಳ ನಾಯಕನ ಪಾತ್ರಗಳು ಅವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿದ್ದವು. ಹೀಗೆ ತೆಂಕುತಿಟ್ಟಿನ ವಿವಿಧ ಮೇಳಗಳಲ್ಲಿ ಕಲಾವಿದ, ಮೆನೇಜರ್‌ ಮತ್ತು ಮೇಳದ ಯಜಮಾನ…ಹೀಗೆ ದಶಕಗಳ ಕಾಲ ಕಲಾಸೇವೆ ಮಾಡಿದ ದಾಸಪ್ಪ ರೈ ಈಗ ಪುತ್ತೂರು ನಗರದ ಬಪ್ಪಳಿಗೆಯಲ್ಲಿ ವಿಶ್ರಾಂತ ಜೀವನ ಸಾಗಿಸುತ್ತಿದ್ದಾರೆ.

Advertisement

ತುಳು ಯಕ್ಷರಂಗದಲ್ಲಿ ಇತಿಹಾಸ ಬರೆದ “ಕಾಡ ಮಲ್ಲಿಗೆ’ ಪ್ರಸಂಗವು ನಿಮ್ಮ ಯಕ್ಷ ಬದುಕಿನಲ್ಲಿ ವಹಿಸಿದ ಪಾತ್ರ ಏನು?
“ಕಾಡಮಲ್ಲಿಗೆ’ ನನ್ನ ಬದುಕಿಗೆ ಹೊಸ ರೂಪ ನೀಡಿದ ಪ್ರಸಂಗ. ಆ ಕಾಲದಲ್ಲಿ ಕರ್ನಾಟಕ ಮೇಳದಲ್ಲಿ ವ್ಯಕ್ತಿ ನೋಡಿ ಪ್ರಸಂಗ ಬರೆಯಲಾಗುತ್ತಿತ್ತು. ನಾನು ಯುವಕನಾಗಿದ್ದೆ. ಕಾಡಮಲ್ಲಿಗೆಯಲ್ಲಿ ನನಗೆ ಮುಖ್ಯ ಪಾತ್ರ ಬರುವ ಹಾಗೆ ಪ್ರಸಂಗ ಬರೆದಿದ್ದರು. ಆದರೆ ಯಕ್ಷಗಾನದಲ್ಲಿ ಆಗ ಒಂದು ಪದ್ಧತಿ ಇತ್ತು. ವಯಸ್ಸಿನಲ್ಲಿ ಕಿರಿಯವನಾಗಿದ್ದರೂ, ದೊಡ್ಡ ಕಲಾವಿದನಾಗಿ ಗುರುತಿಸಿಕೊಂಡಿದ್ದರೆ ಆತನಿಗೆ ಮುಖ್ಯ ಪಾತ್ರ ನೀಡಲಾಗುತ್ತಿತ್ತು. ಆಗ ಅಳಕೆ ರಾಮಯ್ಯ ಅವರು ಮುಖ್ಯ ಕಲಾವಿದರಾಗಿದ್ದ ಕಾರಣ “ಕಾಡಮಲ್ಲಿಗೆ’ಯಲ್ಲಿ ಅವರಿಗೆ ಮುಖ್ಯ ಪಾತ್ರ ನೀಡಬೇಕಾದ ಅನಿವಾರ್ಯತೆ ಉಂಟಾಯಿತು. ಹೀಗಾಗಿ ಆ ಪ್ರಸಂಗದಲ್ಲಿ ನಾನು ಮೈಂದ ಗುರಿಕಾರನ ಪಾತ್ರ ನಿರ್ವಹಿಸಿದೆ. ನಾನು ಯುವಕ, ನನ್ನ ಪಾತ್ರ ವೃದ್ಧನದ್ದು. ಅದು ನನಗೆ ಭಾರೀ ಹೆಸರು ತಂದುಕೊಟ್ಟಿತು. ಈಗಲೂ ಜನ ಮೈಂದ ಗುರಿಕಾರ ಪಾತ್ರ ನಿರ್ವಹಿಸಿದ್ದ ದಾಸಪ್ಪ ರೈ ಎನ್ನುತ್ತಾರೆ.

“ಅಭಿನವ ಕೋಟಿ’ಯೆಂದೇ ಜನಾದರಣೆ ಪಡೆದಿದ್ದೀರಿ, ಆ ಪಾತ್ರದ ಬಗ್ಗೆ ಹೇಳಿ?
ನನ್ನ ದೇಹ, ಸ್ವರನಾದ ಖಳನಾಯಕನ ತರಹ ಇತ್ತು. ಆದರೆ ಸ್ವಭಾವ ಮೃದು. ಹೀಗಾಗಿ ನನಗೆ ಕಥಾನಾಯಕ ಪಾತ್ರ ಒಲಿಯಿತು. ಆ ಕಾಲದಲ್ಲಿ ಬೋಳಾರ ನಾರಾಯಣ ಶೆಟ್ಟಿ ಅವರ ಕೋಟಿಯ ಪಾತ್ರ ಬಹು ಪ್ರಸಿದ್ಧಿ ಪಡೆದಿತ್ತು. ನಾನು ಅದನ್ನು ನೋಡಿ ಅನುಭವಿಸಿದ್ದೆ. ಹಾಗಾಗಿ ನಾನು ಕೋಟಿ ಪಾತ್ರ ನಿರ್ವಹಿಸುವಾಗ ಅನುಭವಿಸುತ್ತಾ, ಬೋಳಾರ ಅವರ ನೆನಪಿನೊಂದಿಗೆ ಪಾತ್ರ ನಿರ್ವಹಿಸುತ್ತಿದ್ದೆ. ನನ್ನ ಪಾತ್ರವನ್ನು ಜನ ಮೆಚ್ಚಿ “ಅಭಿನವ ಕೋಟಿ’ ಬಿರುದು ಕೊಟ್ಟರು. ಕಲಾವಿದನ ಪಾತ್ರವನ್ನು ಮೆಚ್ಚಿ ಕಲಾಭಿಮಾನಿಗಳೇ ಬಿರುದು ಕೊಟ್ಟಾಗ ಇದಕ್ಕಿಂತ ಮಿಗಿಲಾದ ಗೌರವ ಬೇರೊಂದಿಲ್ಲ ಅನ್ನುವುದು ನನ್ನ ಭಾವನೆ.

ಮೇಳದ ಬಗ್ಗೆ ಕಲಾವಿದರ ನಿಷ್ಠೆಯ ಬಗ್ಗೆ ಏನು ಹೇಳುತ್ತೀರಿ?
ಹಿಂದೆ ಕಲಾವಿದರಿಗೆ ಮೇಳದ ಬಗ್ಗೆ ಅಪಾರ ನಿಷ್ಠೆ ಇತ್ತು. ಯಾವುದೇ ಕಲಾವಿದ ಮೇಳ ಯಜಮಾನನದ್ದು ಎಂದು ಹೇಳುತ್ತಿರಲಿಲ್ಲ. ನಮ್ಮ ಮೇಳ ಎಂಬ ಅಭಿಮಾನ ಹೊಂದಿದ್ದರು. ಯಜಮಾನರ ಮೇಲೆಯೂ ಅಪಾರ ಗೌರವ, ಭಯ, ಭಕ್ತಿ ಇತ್ತು. ಈಗ ಆ ಮನಃಸ್ಥಿತಿ ಕೆಲವರಲ್ಲೇ ಉಳಿದಿರಬಹುದು. ಬಹುತೇಕರಲ್ಲಿ ಆ ಭಾವನೆಯೇ ಇಲ್ಲ. ಈಗ ವೇತನ ಎಷ್ಟಿದೆ ಎಂದು ನೋಡಿ ಮೇಳಕ್ಕೆ ಸೇರುವ ಕಲಾವಿದರು ಇದ್ದಾರೆ. ಅವರಿಗೆ ನಮ್ಮ ಮೇಳ ಎಂಬ ಅಭಿಮಾನವೂ ಕಡಿಮೆ. ಇದು ಈಗಿನ ಬಹುತೇಕ ಮೇಳಗಳ ಕಥೆ.

ಯಕ್ಷಗಾನದಲ್ಲಿ ಭಾಷಾ ಶುದ್ಧತೆಯ ಬಗ್ಗೆ?
ಆ ಕಾಲದಲ್ಲಿ ತುಳು ಭಾಷಾ ಪ್ರಸಂಗಗಳಲ್ಲಿ ಒಂದೇ ಒಂದು ಆಂಗ್ಲ ಭಾಷಾ ಪದ ಬಳಕೆಯಾಗುತ್ತಿರಲಿಲ್ಲ. ಕನ್ನಡದಲ್ಲಿಯೂ ಇರಲಿಲ್ಲ. ಈಗ ಆಂಗ್ಲ ಭಾಷೆ ನುಸುಳಿದೆ. ಭಾಷಾ ಶುದ್ಧತೆಗೆ ಯಕ್ಷಗಾನ ಕ್ಷೇತ್ರ ಕೊಟ್ಟ ಕೊಡುಗೆ ಹಿರಿದಾದುದು. ಹಿಂದಿನ ಕಾಲದಲ್ಲಿ ಯಕ್ಷಗಾನವನ್ನು ನೋಡಿ ಜನ ಪರಿವರ್ತನೆ ಆಗಿದ್ದರು. ಮಹಾಭಾರತ, ರಾಮಾಯಣದ ಬಗ್ಗೆಯೂ ಒಲವು ತೋರಿದ್ದರು. ಆ ಕಾಲದಲ್ಲಿ ಮನೋರಂಜನೆಗೆ ಜನರಿಗೆ ಇದ್ದ ಏಕೈಕ ಆಯ್ಕೆ ಯಕ್ಷಗಾನವಾಗಿತ್ತು. ಈಗ ಮನೋರಂಜನೆಯ ವ್ಯಾಪ್ತಿ ಬಹಳಷ್ಟು ವಿಸ್ತಾರವಾಗಿದೆ.

Advertisement

ಯಕ್ಷಗಾನದ ಪರಂಪರೆ ಉಳಿಸಲು ಕಲಾ ಪ್ರೇಕ್ಷಕರ ಜವಾಬ್ದಾರಿಯು ಇದೆಯಲ್ಲವೇ?
ಖಂಡಿತ ಇದೆ. ಈಗ ಯಕ್ಷಗಾನ ಸಂಪ್ರದಾಯದ ಪರಿಧಿಯನ್ನು ದಾಟಿ ಬರುವ ಸಂಭಾಷಣೆಯ ಹಿಂದೆ ಪ್ರೇಕ್ಷಕರ ಪಾತ್ರವೂ ಇದೆ. ಕಲಾವಿದರು ತಪ್ಪು ಹಾದಿ ಹಿಡಿಯಲು ಪ್ರೇಕ್ಷಕರ ವರ್ಗ ಕೂಡ ಒಂದು ಕಾರಣ. ದ್ವಂದ್ವಾರ್ಥ ಮತ್ತು ಅಸಭ್ಯ ಪದಗಳ ಬಳಕೆ, ರಾಜಕೀಯ ಆಧಾರಿತ ಸಂಭಾಷಣೆಗಳು ಯಕ್ಷಗಾನದೊಳಗೆ ಬರಬಾರದು ಎಂದಿದ್ದರೂ, ಪ್ರೇಕ್ಷಕರು ಅದನ್ನೇ ಬಯಸಿದರೆ ಕಲಾವಿದರೂ ಹಾದಿ ತಪ್ಪುತ್ತಾರೆ. ಪ್ರೇಕ್ಷಕ ವರ್ಗ ಜಾಗೃತಿ ಹೊಂದಿದರೆ ಸಹಜವಾಗಿ ಯಕ್ಷಗಾನ ತನ್ನ ಮೂಲ ಸ್ವರೂಪದಲ್ಲೇ ಉಳಿಯಲು ಸಾಧ್ಯವಾಗುತ್ತದೆ.

ನೀವು ಮೇಳ ಕಟ್ಟಿದಾಗಿನ ಅನುಭವ ಮತ್ತು ಈಗಿನ ಪರಿಸ್ಥಿತಿ?
-ನಾನು ಕುಂಬಳೆ ಮೇಳ ಕಟ್ಟಿದ ಕಾಲದಲ್ಲಿ ಪರಿಸ್ಥಿತಿ ಕಷ್ಟ ಇತ್ತು. ಆರ್ಥಿಕ ಪರಿಸ್ಥಿತಿ, ಕಲಾವಿದರನ್ನು ಜತೆಗೂಡಿಸುವುದು ಹೀಗೆ ಒಂದು ಮೇಳ ಕಟ್ಟಲು ಸಾಕಷ್ಟು ಪರಿಶ್ರಮ ಬೇಕಿತ್ತು. ನಾನು ಮೇಳ ಮಾಡುವ ಸಂದರ್ಭದಲ್ಲಿ 10 ರಿಂದ 15 ಲಕ್ಷ ರೂ. ವ್ಯಯಿಸಿದ್ದೆ. 1.5 ಲಕ್ಷ ರೂ. ಸಾಲ ಪಡೆದು ಮೇಳ ಕಟ್ಟಿದ್ದು, ಬ್ಯಾಂಕ್‌ನಲ್ಲಿ ಶೇ.18 ಬಡ್ಡಿಯನ್ನು ಕಟ್ಟಬೇಕಿತ್ತು. ಮೇಳಕ್ಕೆ ಬೇಕಾದ ಎಲ್ಲ ಸಾಮಗ್ರಿಗಳನ್ನು ಹೊಸದಾಗಿಯೇ ಖರೀದಿಸಬೇಕಿತ್ತು. ಈಗ ಮೇಳ ಕಟ್ಟುವುದು ಸುಲಭ. ಡ್ರೆಸ್‌, ವಾಹನ ಎಲ್ಲವೂ ಬಾಡಿಗೆಗೆ ಸಿಗುತ್ತದೆ. ಆ ದಿನಕ್ಕೆ ಬೇಕಾದ ಕಲಾವಿದರು ಅಂದೇ ಸಿಗುತ್ತಾರೆ. ಈಗ ಹೆಸರಿಗೋಸ್ಕರ ಮೇಳ ಕಟ್ಟುವವರೇ ಹೆಚ್ಚು.

ನಿಮ್ಮ ವೈಯಕ್ತಿಕ ಮತ್ತು ಯಕ್ಷಗಾನದ ಬದುಕು; ಹೇಗೆ ವಿಶ್ಲೇಷಿಸುತ್ತಿರಿ?
ವೈಯಕ್ತಿಕ ಮತ್ತು ವೃತ್ತಿ ಬದುಕು ಎರಡಲ್ಲೂ ನಾನು ಅನುಭವಿಸಿದ್ದು ನೋವನ್ನೇ. ಕಲಾವಿದನಾಗಿ ಗೆದ್ದರೂ, ಬಹಳ ಪ್ರೀತಿಯಿಂದ ಕಟ್ಟಿದ ಕುಂಬಳೆ ಮೇಳದಲ್ಲಿ ಸೋತ ನೋವು ಮರೆತಿಲ್ಲ. ಆ ಕಾಲದಲ್ಲಿ ವೃತ್ತಿ, ವೈಯಕ್ತಿಕ ಬದುಕಿನ ಪ್ರತೀಕ್ಷಣದಲ್ಲಿಯೂ ಸೋಲೇ ನನ್ನನ್ನು ನೆರಳಿನಂತೆ ಹಿಂಬಾಲಿ ಸಿತು. ಮೇಳದ ಯಜಮಾನನಾಗಿ ನನ್ನ ಬಾಡಿಗೆ ಮನೆ ತುಂಬಾ ಜನ ಓಡಾಡುತ್ತಿದ್ದರು. ಮೇಳದಲ್ಲಿ ಸೋತಾಗ ಆ ಮನೆಯನ್ನೇ ಬಿಟ್ಟು ಬೀದಿಗೆ ಬಂದೆ. ಮಕ್ಕಳಿಗೆ ಒಂದು ಹೊತ್ತಿನ ಊಟಕ್ಕೂ ತತ್ವಾರ ಉಂಟಾಯಿತು. ಪ್ರೀತಿಯಿಂದ ಸಾಕಿ ಬೆಳೆಸಿದ್ದ ಮಗಳ ಸಾವು, ವಾಸವಿದ್ದ ಮನೆ ಬೆಂಕಿಗೆ ಪೂರ್ತಿ ಆಹುತಿಯಾದುದು… ಹೀಗೆ ಸಾಲು-ಸಾಲು ಸವಾಲು ಎದುರಾಯಿತು. ಎಲ್ಲವನ್ನೂ ಸಹಿಸಿಕೊಂಡು ಪತ್ನಿ ನನ್ನ ಕಷ್ಟಗಳಿಗೆ ಹೆಗಲು ಕೊಟ್ಟು ನಿಂತಳು. ಕೊನೆಗೆ ಕಲಾಭಿಮಾನಿಗಳ ನೆರವಿನಿಂದ ಅಲ್ಲೇ ಹೊಸ ಮನೆ ಕಟ್ಟಿದೆ. ಒಡಿಯೂರು ಸ್ವಾಮೀಜಿ ಅವರ ಸಲಹೆ, ಸಹಕಾರವೂ ಇತ್ತು. ಮೇಳದ ಯಜಮಾನನಾಗಿದ್ದ ನಾನು ನನ್ನ ಬದುಕಿನ ಅನಿವಾರ್ಯತೆ, ಪತ್ನಿಯ ಒತ್ತಾಯಕ್ಕೆ ಮಣಿದು ಬೇರೆ ಮೇಳಕ್ಕೆ ಸೇರಿಕೊಂಡು ಕಲಾವಿದನಾಗಿ ಮುನ್ನಡೆದೆ. ನನ್ನ ವೈಯಕ್ತಿಕ ಬದುಕಿನಲ್ಲಿ ನೋವುಗಳೇ ಹೆಚ್ಚಿರಬಹುದು. ಆದರೆ ಯಕ್ಷಗಾನ ನನಗೆ ತೃಪ್ತಿ ಕೊಟ್ಟಿದೆ. ಜನರು ನನ್ನನ್ನು ಗುರುತಿಸುವುದು ಯಕ್ಷಗಾನದಿಂದಲೇ. ದಾಸಪ್ಪ ರೈ ಎಂಬ ಹೆಸರು ಉಳಿಯಲು ಕಾರಣ ಯಕ್ಷಗಾನ. ಇದರಲ್ಲಿ ಎರಡು ಮಾತೇ ಇಲ್ಲ.

ಹೊಸ ಕಲಾವಿದರಿಗೆ ಏನು ಹೇಳಲು ಬಯಸುತ್ತೀರಿ? 
ಹೊಸ ಕಲಾವಿದರು ಮೇಳದ ಬಗ್ಗೆ ಪ್ರೀತಿ ಹೊಂದಿರಬೇಕು. ಪ್ರೇಕ್ಷಕ ವರ್ಗಕ್ಕೆ ಖುಷಿಯಾಗುತ್ತದೆ ಎಂದು ಭಾವಿಸಿ ತನ್ನ ಪಾತ್ರದ ಪರಿಧಿಯನ್ನು ಮೀರಬಾರದು. ನಮ್ಮತನವನ್ನು ಬಿಟ್ಟು ಹೋಗಬಾರದು. ಹಾಗಂತ, ಆಧುನಿಕತೆಗೆ ತಕ್ಕ ಹಾಗೆ ಬದಲಾವಣೆ ಬೇಕು. ಆದರೆ ಅದು ಯಕ್ಷಗಾನದ ಪರಂಪರೆ, ರೀತಿ ನೀತಿಗಳನ್ನು ಮೀರಿ ಅಲ್ಲ.

- ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next