Advertisement

ಉದ್ಯೋಗಾಸಕ್ತರಿಗೆ ಕೆಜಿಟಿಟಿಐ ಸಂಜೀವಿನಿ

01:58 AM Feb 10, 2022 | Team Udayavani |

ಕಾರ್ಕಳ: ಯುವಜನರ ಉದ್ಯೋಗಾವಕಾಶ ವೃದ್ಧಿಗಾಗಿ ರಾಜ್ಯ ಕೌಶಲಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆಯು ಪ್ರಮುಖ ಜಿಲ್ಲೆಗಳಲ್ಲಿ ಕರ್ನಾಟಕ ಜರ್ಮನ್‌ ಟೆಕ್ನಿಕಲ್‌ ಟ್ರೈನಿಂಗ್‌ ಇನ್‌ಸ್ಟಿಟ್ಯೂಟ್‌ (ಕೆಜಿಟಿಟಿಐ) ಆರಂಭಿಸುತ್ತಿದ್ದು, ರಾಜ್ಯದ 7ನೇ ಸಂಸ್ಥೆಯು ಕಾರ್ಕಳದಲ್ಲಿ ಶೀಘ್ರ ಕಾರ್ಯಾರಂಭ ಮಾಡಲಿದೆ.

Advertisement

2012ರಲ್ಲಿ ಬೆಂಗಳೂರು, ಗುಲ್ಬರ್ಗ; 2015ರಲ್ಲಿ ಮಂಗಳೂರು, ಬೆಳಗಾವಿ ಮತ್ತು ಹುಬ್ಬಳ್ಳಿಗಳಲ್ಲಿ ತೆರೆಯಲಾಗಿತ್ತು. ಇದೀಗ ಬೆಂಗಳೂರಿನ ವಿಸ್ತರಿತ ಕೇಂದ್ರ ಗೌರಿಬಿದನೂರಿನಲ್ಲಿ, ಮಂಗಳೂರಿನ ವಿಸ್ತರಿತ ಕೇಂದ್ರವನ್ನು ಕಾರ್ಕಳದಲ್ಲಿ ತೆರೆಯಲಾಗುತ್ತಿದೆ. 8ನೇ ಘಟಕ ಮೈಸೂರಿನಲ್ಲಿ ಸ್ಥಾಪನೆಯಾಗಲಿದೆ. ಜರ್ಮನಿಯ ತಂತ್ರಜ್ಞರು ಇಲ್ಲಿಗೆ ಆಗಮಿಸಿ ತರಬೇತಿ ನೀಡು ವುದು ಇಲ್ಲಿನ ವೈಶಿಷ್ಟ್ಯ.

ಏನೆಲ್ಲ ಕೋರ್ಸ್‌?
ಸಿಸ್ಕೋ ಐಟಿ ಎಸೆನ್ಶಿಯಲ್ಸ್‌, ಸಿಸ್ಕೋ ಸರ್ಟಿಫೈಡ್‌ ನೆಟ್‌ವರ್ಕ್‌ ಅಸೋಸಿಯೇಟ್‌, ಅಕೌಂಟ್ಸ್‌ ಎಕ್ಸಿಕ್ಯೂಟಿವ್‌, ಮ್ಯಾನುಫ್ಯಾಕ್ಚರಿಂಗ್‌ ಟೆಕ್ನಾಲಜಿಯಲ್ಲಿ ಸಿಎನ್‌ಸಿ ಮಿಲ್ಲಿಂಗ್‌, ಸಿಎನ್‌ಸಿ ಟರ್ನಿಂಗ್‌, ಸಿಎನ್‌ಸಿ ಮೆಷಿನ್ಸ್‌, ಆಟೋಡೆಸ್ಕ್, ಮಾಸ್ಟರ್‌ ಕ್ಯಾಮ್‌ ತರಬೇತಿ ನೀಡಲಾಗುತ್ತದೆ. ಸಿಎಂ-ಕೆಕೆವೈ ಯೋಜನೆಯಡಿ ಉಚಿತ ತರಬೇತಿ ಇದೆ. ಇದು 3ರಿಂದ 4 ತಿಂಗಳ ಅಲ್ಪಾವಧಿಯದು. ರಾಜ್ಯದ ಯಾವುದೇ ಭಾಗದವರು ಬಂದು ತರಬೇತಿ ಪಡೆಯಬಹುದು. ದೂರದವರು ವಸತಿ ವ್ಯವಸ್ಥೆ ತಾವೇ ಕಲ್ಪಿಸಿಕೊಳ್ಳಬೇಕಾಗುತ್ತದೆ.

ಬಹುಕೋಟಿ ರೂ. ಮೌಲ್ಯದ ಉಪಕರಣ
ಕಾರ್ಕಳ ಕಾಬೆಟ್ಟು ಸರಕಾರಿ ಪಾಲಿಟೆಕ್ನಿಕ್‌ ಆವರಣದಲ್ಲಿ 71 ಲಕ್ಷ ರೂ. ವೆಚ್ಚದಲ್ಲಿ ಕೆಜಿಟಿಟಿಐ ಕೇಂದ್ರ ನಿರ್ಮಾಣಗೊಂಡಿದೆ. ಕಂಪ್ಯೂಟರ್‌ ಲ್ಯಾಬ್‌, ಯಂತ್ರೋಪಕರಣಗಳ ಅಳವಡಿಕೆಗೆ ಸಿದ್ಧತೆಗಳಾಗಿವೆ. 4.75 ಕೋ.ರೂ ಮೌಲ್ಯದ ಯಂತ್ರೋಪಕರಣಗಳು ಜರ್ಮನಿಯಿಂದ ಸದ್ಯವೇ ಬರಲಿವೆ.

ಮೂಲ ಸೌಕರ್ಯಗಳಲ್ಲಿ ಉದ್ಯೋಗ ಸೃಷ್ಟಿಯೂ ಒಂದು. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸರಕಾರಿ ಮತ್ತು ಖಾಸಗಿಯ ಸಾಕಷ್ಟು ಉದ್ದಿಮೆಗಳಿದ್ದು, ಇಲ್ಲಿನ ಗ್ರಾಮೀಣ ವಿದ್ಯಾರ್ಥಿಗಳ ಕೌಶಲಾಭಿವೃದ್ಧಿಗೆ ಒತ್ತು ನೀಡಿ ಕೇಂದ್ರವನ್ನು ಕಾರ್ಕಳದಲ್ಲಿ ತೆರೆಯಲಾಗುತ್ತಿದೆ. ಸ್ಥಳೀಯರಿಗೆ ಉದ್ಯೋಗ ಸಿಗುತ್ತಿಲ್ಲ ಎಂಬ ಅಪವಾದವೂ ಇದರಿಂದ ದೂರವಾಗಲಿದೆ.
– ಸುನಿಲ್‌ ಕುಮಾರ್‌, ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವರು

Advertisement

ಕೌಶಲ ತರಬೇತಿ ಪಡೆದವರಿಗೆ ವಿವಿಧ ಉದ್ದಿಮೆಗಳಲ್ಲಿ ವಿಪುಲ ಅವಕಾಶಗಳಿದ್ದು, ನೌಕರಿ ಪಡೆದು ಭವಿಷ್ಯ ರೂಪಿಸಿಕೊಳ್ಳಲು ಈ ಕೇಂದ್ರ ಸಹಕಾರಿಯಾಗಲಿದೆ.
– ಗಿರಿಧರ್‌, ನಿರ್ದೇಶಕರು,
ಕರ್ನಾಟಕ ಜರ್ಮನ್‌ ಮತ್ತು ಟೆಕ್ನಾಲಜಿ ತರಬೇತಿ ಕೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next