ರಾಜ್‌ಕುಮಾರ್, ವಿಷ್ಣುವರ್ಧನ್, ಶಂಕರನಾಗ್, ಅಂಬರೀಶ್ ಅವರಂಥ ಕನ್ನಡ ಚಿತ್ರರಂಗದ ಅನೇಕ ಮೇರು ಕಲಾವಿದರ ಜೊತೆ ಕೆಲಸ ಮಾಡಿದ ಅನುಭವವಿರುವ ಕೃಷ್ಣೋಜಿ ರಾವ್ ಅವರಿಗೆ ನಟನಾಗಿ ಸಾಕಷ್ಟು ಪ್ರಸಿದ್ಧಿ ಮತ್ತು ಜನಪ್ರಿಯತೆ ತಂದುಕೊಟ್ಟಿದ್ದು ಮಾತ್ರ “ಕೆಜಿಎಫ್’ ಸಿನಿಮಾದ ತಾತನ ಪಾತ್ರ.
ಸದ್ಯ “ಕೆಜಿಎಫ್’ ಸಿನಿಮಾದ ಬಳಿಕ “ಕೆಜಿಎಫ್ ತಾತ’ ಎಂದೇ ಚಿತ್ರರಂಗದಲ್ಲಿ ಮತ್ತು ಸಿನಿಪ್ರಿಯರಿಂದ ಗುರುತಿಸಿಕೊಳ್ಳುತ್ತಿರುವ ಕೃಷ್ಣೋಜಿ ರಾವ್, ಈಗ ಮೊದಲ ಬಾರಿಗೆ “ನ್ಯಾನೋ ನಾರಾಯಣಪ್ಪ’ ಸಿನಿಮಾದ ಮೂಲಕ ಪೂರ್ಣ ಪ್ರಮಾಣದಲ್ಲಿ ನಾಯಕ ನಟನಾಗಿ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೇ ಸದ್ದಿಲ್ಲದೆ “ನ್ಯಾನೋ ನಾರಾಯಣಪ್ಪ’ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಇತ್ತೀಚೆಗೆ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.
ಇದೇ ವೇಳೆ ಮಾತನಾಡಿದ ಕೃಷ್ಣೋಜಿ ರಾವ್, “ಕನ್ನಡದಲ್ಲಿ ಇಲ್ಲಿಯವರೆಗೆ ಹತ್ತಾರು ಸಿನಿಮಾಗಳಲ್ಲಿ ನಿರ್ದೇಶನ ವಿಭಾಗದಲ್ಲಿ, ಸಹನಟನಾಗಿ ಕೆಲಸ ಮಾಡಿದ್ದೇನೆ. ಆದರೆ “ಕೆಜಿಎಫ್’ ಸಿನಿಮಾದ ತಾತನ ಪಾತ್ರ ನನಗೆ ಸಾಕಷ್ಟು ಹೆಸರು ತಂದುಕೊಟ್ಟಿತು. ಈಗ ಎಲ್ಲರೂ ನನ್ನನ್ನು ಕೆಜಿಎಫ್ ತಾತ ಎಂದೇ ಗುರುತಿಸುತ್ತಾರೆ. ಇಷ್ಟು ವರ್ಷಗಳ ಕಾಲ ಸಹ ನಟನಾಗಿ ಬೇರೆ ಬೇರೆ ಥರದ ಪೋಷಕ ಪಾತ್ರಗಳನ್ನು ಮಾಡಿದ್ದೇನೆ. ಇದೇ ಮೊದಲ ಬಾರಿಗೆ “ನ್ಯಾನೋ ನಾರಾಯಣಪ್ಪ’ ಸಿನಿಮಾದಲ್ಲಿ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ಇದೊಂದು ಅಪ್ಪಟ ಲವ್ ಸಬ್ಜೆಕ್ಟ್ ಸಿನಿಮಾ. ಇಲ್ಲೊಂದು ವಯೋವೃದ್ಧರ ಪ್ರೀತಿ ಇದೆ. ಭಾವನಾತ್ಮಕ ಅಂಶಗಳಿವೆ. ನಿರ್ದೇಶಕರು ಹೇಳಿದ ಕಥೆ ಕೇಳಿ ಇಷ್ಟವಾಗಿ ಈ ಪಾತ್ರ ಒಪ್ಪಿಕೊಂಡು ಮಾಡಿದ್ದೇನೆ. ಈ ಸಿನಿಮಾ ಮತ್ತು ನನ್ನ ಪಾತ್ರ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬ ನಂಬಿಕೆ ಇದೆ’ ಎಂದು ಭರವಸೆ ವ್ಯಕ್ತಪಡಿಸಿದರು.
ಈ ಹಿಂದೆ “ಕೆಮಿಸ್ಟ್ರಿ ಆಫ್ ಕರಿಯಪ್ಪ’, “ಕ್ರಿಟಿಕಲ್ ಕೀರ್ತನೆಗಳು’ ಸಿನಿಮಾಗಳನ್ನು ನಿರ್ದೇಶಿಸಿದ್ದ ಕುಮಾರ್ ಎಲ್. “ನ್ಯಾನೋ ನಾರಾಯಣಪ್ಪ’ ಸಿನಿಮಾಕ್ಕೆ ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದಾರೆ. “ಎಮೋಶನ್ ಮತ್ತು ಸಸ್ಪೆನ್ಸ್ ವಿಷಯವನ್ನು ಇಟ್ಟುಕೊಂಡು ಕಾಮಿಡಿಯಾಗಿ ಈ ಸಿನಿಮಾವನ್ನು ತೆರೆಗೆ ತರುತ್ತಿದ್ದೇವೆ. ಮೆಸೇಜ್, ಎಂಟರ್‌ಟೈನ್ಮೆಂಟ್ ಎಲ್ಲವೂ ಸಿನಿಮಾದಲ್ಲಿದ್ದು, ಆದಷ್ಟು ಬೇಗ ಸಿನಿಮಾ ರಿಲೀಸ್ ಮಾಡಲಿದ್ದೇವೆ’ ಎಂಬುದು ಚಿತ್ರದ ಬಗ್ಗೆ ನಿರ್ದೇಶಕ ಕುಮಾರ್ ಮಾತು
ಜಿ.ಎಸ್.ಕಾರ್ತಿಕ ಸುಧನ್