ಉಡುಪಿ: ಕೋವಿಡ್ – 19 ವೈರಸ್ ಸದ್ದು ಮಾಡುತ್ತಿರುವಂತೆ ಕಳೆದ ವರ್ಷ ಕರಾವಳಿ ಮತ್ತು ಮಲೆನಾಡು ಭಾಗಗಳನ್ನು ನಡುಗಿಸಿದ ಕೆಎಫ್ಡಿ (ಮಂಗನ ಕಾಯಿಲೆ)ಯ ಸದ್ದು ಕಡಿಮೆಯಾಗಿದೆ. ಕಳೆದ ವರ್ಷ ಉಡುಪಿ ಜಿಲ್ಲೆಯಲ್ಲಿ 15 ಜನರಿಗೆ ಮಂಗನ ಕಾಯಿಲೆ ಲಕ್ಷಣ ಕಂಡು ಬಂದು ಮಾದರಿಗಳನ್ನು ಕಳುಹಿಸಿದಾಗ ಇಬ್ಬರಿಗೆ ಪಾಸಿಟಿವ್ ಬಂದಿತ್ತು. ಈ ಬಾರಿ ಯಾರಿಗೂ ರೋಗ ಲಕ್ಷಣ ಕಂಡುಬಂದಿಲ್ಲ. ಈ ವರ್ಷ ಜನವರಿಯಿಂದೀಚೆಗೆ 8 ಸತ್ತ ಮಂಗಗಳ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದಾಗ ಎಲ್ಲವೂ ನೆಗೆಟಿವ್ ಬಂದಿವೆ.
ಮಂಗನ ಕಾಯಿಲೆ ಹೆಚ್ಚು ಸದ್ದು ಮಾಡುವುದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಮತ್ತು ನಿರ್ದಿಷ್ಟವಾಗಿ ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ. ಶಿವಮೊಗ್ಗ ಜಿಲ್ಲೆಯಲ್ಲಿ ಹೋದ ವರ್ಷ ಮಂಗನಕಾಯಿಲೆಯಿಂದ 23 ಸಾವು ಸಂಭವಿಸಿದ್ದರೆ ಈ ಬಾರಿ ಇದುವರೆಗೆ ಎರಡು ಸಾವಿನ ಪ್ರಕರಣಗಳು ಆಗಿವೆ. ಜಿಲ್ಲೆಯಲ್ಲಿ ಹೋದ ವರ್ಷ 240 ಪ್ರಕರಣಗಳಿದ್ದರೆ ಈ ವರ್ಷ ಇದುವರೆಗೆ 90 ಪ್ರಕರಣಗಳು ದಾಖಲಾಗಿವೆ. ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಹೋದ ವರ್ಷ ಸುಮಾರು 130 ಪ್ರಕರಣಗಳಿದ್ದರೆ ಈ ವರ್ಷ 20 ಪ್ರಕರಣಗಳಿವೆ. ಸಾಗರದಲ್ಲಿ ಹೋದ ವರ್ಷ 45 ಪ್ರಕರಣಗಳಿದ್ದರೆ ಈ ವರ್ಷ 20 ಪ್ರಕರಣಗಳಿವೆ.
ಸಾಗರ ತಾಲೂಕಿನಿಂದ ಕಳೆದ ವರ್ಷ ಮಣಿಪಾಲ ಆಸ್ಪತ್ರೆಗೆ ಬಹುತೇಕ ರೋಗಿಗಳು ಬಂದಿದ್ದರು. ಅವರಿಗೆಲ್ಲ ಸರಕಾರದಿಂದ ವೈದ್ಯಕೀಯ ವೆಚ್ಚವನ್ನು ಭರಿಸಲಾಗಿತ್ತು. ಈ ಬಾರಿ ಸಾಗರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲಾಗಿದೆ. ಕೆಲವರು ಮಣಿಪಾಲ ಮತ್ತು ಶಿವಮೊಗ್ಗದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸಾಮಾನ್ಯವಾಗಿ ಜನವರಿಯಿಂದ ಮಂಗನ ಕಾಯಿಲೆ ಕಂಡುಬರುತ್ತದೆ. ಮಾರ್ಚ್, ಎಪ್ರಿಲ್‌ನಲ್ಲಿ ಕಡಿಮೆ ಯಾಗುತ್ತ ಹೋಗುತ್ತದೆ. ಈ ಬಾರಿ ಇನ್ನಷ್ಟು ಕಾಯಿಲೆ ಬರುವ ಸಾಧ್ಯತೆ ಗಳಿಲ್ಲ.
ಕೊರೊನಾ ಮತ್ತು ಮಂಗನ ಕಾಯಿಲೆ ಎರಡೂ ಕಾಯಿಲೆಗಳ ಹರಡುವಿಕೆ ಮೂಲ ಪ್ರಾಣಿಜನ್ಯ, ಲಕ್ಷಣಗಳು ಒಂದೇ. ಕೊರೊನಾದಲ್ಲಿ ಶೀತ, ಜ್ವರ, ಕೆಮ್ಮು ಕಂಡುಬಂದರೆ ಮಂಗನ ಕಾಯಿಲೆ ಯಲ್ಲಿ ಜ್ವರ, ಶೀತ, ತಲೆನೋವು, ಮೈಕೈ ನೋವುಗಳು ಕಂಡುಬರುತ್ತವೆ. ಮಂಗನ ಕಾಯಿಲೆಯು ಮಂಗನಿಗೆ ಕಚ್ಚಿದ ಉಣ್ಣಿ ಮನುಷ್ಯನಿಗೆ ಕಚ್ಚಿ ಬರುತ್ತದೆ. ಈಗ ಕೊರೊನಾ ಪ್ರಾಣಿಜನ್ಯ ಎನ್ನುತ್ತಿವೆ ವರದಿಗಳು. ಎರಡೂ ವೈರಸ್ ಮೂಲಕ ಹರಡುತ್ತವೆ.
ಕಳೆದ ವರ್ಷಕ್ಕೆ ತುಲನೆ ಮಾಡಿದರೆ ಈ ವರ್ಷ ಜಿಲ್ಲೆಯಲ್ಲಿ ಕೆಎಫ್ಡಿ ಪೀಡಿತರ ಸಂಖ್ಯೆ ಇಳಿಮುಖವಾಗಿದೆ. ಇದಕ್ಕೆ ಬೇಕಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿದೆ.
– ಡಾ| ರಾಜೇಶ್ ಸುರಗಿಹಳ್ಳಿ, ಜಿಲ್ಲಾ ಆರೋಗ್ಯಾಧಿಕಾರಿ, ಶಿವಮೊಗ್ಗ
ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಂಗನಕಾಯಿಲೆಗೆ ಸಂಬಂಧಿಸಿದ ಲಸಿಕೆಗಳನ್ನು ಇರಿಸಲಾಗಿದೆ. ಈ ವರ್ಷ ಯಾರಲ್ಲೂ ರೋಗ ಲಕ್ಷಣ ಕಂಡುಬಂದಿಲ್ಲ.
– ಡಾ| ವಾಸುದೇವ್, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಉಡುಪಿ