ಸಾಗರ: ಮಲೆನಾಡು ಭಾಗದಲ್ಲಿ ಆತಂಕ ಸೃಷ್ಟಿಸಿದ ಮಂಗನ ಕಾಯಿಲೆ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸತತ ಪ್ರಯತ್ನ ಮಾಡುತ್ತಿದೆ. ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಅರಳಗೋಡು ಗ್ರಾಪಂ ಸದಸ್ಯ ಚಂದ್ರರಾಜು ಹೇಳಿದರು.
ತಾಲೂಕಿನ ಅರಳಗೋಡಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಸಂಘದ ಸಹಕಾರದಿಂದ ಮಂಗಳವಾರ ಆರಂಭಿಸಿದ ಮಂಗನ ಕಾಯಿಲೆ ಮುಕ್ತ ಮಲೆನಾಡು ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಯಿಲೆ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ ಎಂದರು.
ಆರೋಗ್ಯ ಇಲಾಖೆ ನವೆಂಬರ್ ತಿಂಗಳಲ್ಲೇ ಜಾಗೃತಿ ಆರಂಭಿಸಿದೆ. ವೈದ್ಯಕೀಯ ತಂಡ ಪ್ರತಿ ಮನೆಗೂ ಭೇಟಿ ನೀಡಿ ಅರಿವು ಮೂಡಿಸಿದೆ. ಜ್ವರ ಬಂದಾಗ ನೈತಿಕ ಧೈರ್ಯ ತುಂಬಿ ಸಕಾಲಿಕ ಪ್ರಯತ್ನ ಮಾಡುತ್ತಿದೆ. ಆರಂಭದಲ್ಲಿ ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದರು. ಆದರೆ ಸಾವಿನ ಸಂಗತಿ ತಿಳಿದ ಮೇಲೆ ಜನ ಜಾಗೃತರಾದರು. ಇಲಾಖೆಯೂ ತುರ್ತು ಕ್ರಮ ಕೈಗೊಂಡಿದೆ. ಇಲಾಖೆ ಈ ಭಾಗದಲ್ಲಿ ಆರೋಗ್ಯದ ಸೌಭಾಗ್ಯ ಕಾಪಾಡುತ್ತಿದೆ. ಇನ್ನೂ 2-3 ತಿಂಗಳು ಬೇಸಿಗೆ ಇರುವುದರಿಂದ ಆರೋಗ್ಯ ಇಲಾಖೆ ಸೇವೆ ಮುಂದುವರಿಸಬೇಕು. ನಿಮಗೆ ಎಲ್ಲ ಸಹಕಾರ ನೀಡುತ್ತೇವೆ ಎಂದರು.
ತಾಪಂ ಮಾಜಿ ಅಧ್ಯಕ್ಷ ಬಿ.ಸಿ.ಲಕ್ಷ್ಮೀನಾರಾಯಣ ಮಾತನಾಡಿ, ಜನರಲ್ಲಿ ಆರಂಭದಲ್ಲಿ ತಿಳಿವಳಿಕೆಯ ಕೊರತೆ ಇತ್ತು. ನಂತರ ಆರೋಗ್ಯ ಇಲಾಖೆ ಕೈಗೊಂಡ ಕ್ರಮಗಳಿಂದ ಕಾಯಿಲೆ ನಿಯಂತ್ರಣಕ್ಕೆ ಬಂದಿದೆ. ಜನರು ಹೆಚ್ಚು ಜಾಗೃತರಾಗಬೇಕು. ನಮ್ಮ ಜವಾಬ್ದಾರಿಯೂ ಇದೆ. ನಮ್ಮ ಪರಿಚಿತರಿಗೆ, ಸುತ್ತಮುತ್ತಲ ಜನರಿಗೆ ಸರಿಯಾದ ಮಾಹಿತಿ ಕೊಡಬೇಕು. ಇಲಾಖೆ ಅತ್ಯುತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಇದರಿಂದ ಹಲವಾರು ಜೀವಗಳು ಉಳಿದಿವೆ. ಇಲಾಖೆ ದಿನದ 24 ಗಂಟೆಯೂ ವಿಶೇಷ ಸೇವೆ ನೀಡುತ್ತಿದ್ದು, ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದೆ. ಕೆಲವರ ಅಪಪ್ರಚಾರಕ್ಕೆ ಕಿವಿಗೊಡದೇ ಇಲಾಖೆ ಸಿಬ್ಬಂದಿಗಳು ಸೇವೆಯನ್ನು ಮುಂದುವರಿಸಬೇಕು. ಯಾರೂ ಗಾಳಿಸುದ್ದಿಗೆ ಕಿವಿಗೊಡದೇ ವಾಸ್ತವ ಸಂಗತಿಗಳನ್ನು ಅರಿತುಕೊಳ್ಳಬೇಕು ಎಂದರು.
ಗ್ರಾಮಸ್ಥ ಮಂಜಯ್ಯ ಜೈನ್ ಮರಬಿಡಿ ಮಾತನಾಡಿ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಬ್ಬ ಹರಿದಿನ ಮರೆತು ಜನರ ಸೇವೆಯಲ್ಲಿ ನಿರತರಾಗಿದ್ದಾರೆ. ದಿನದ 24 ಗಂಟೆಯೂ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ಮನೆಗೂ ಭೇಟಿ ನೀಡಿ ಜನರ ಆರೋಗ್ಯ ಪರೀಕ್ಷಿಸುತ್ತಿದ್ದಾರೆ. ಇಂಥ ಹೊತ್ತಲ್ಲಿ ಇಲಾಖೆ ಸಿಬ್ಬಂದಿಗಳಿಗೂ ಮಾನಸಿಕ ಧೈರ್ಯ ತುಂಬಬೇಕು ಎಂದರು.
ಆರೋಗ್ಯ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಮ.ಸ. ನಂಜುಂಡಸ್ವಾಮಿ ಮಾತನಾಡಿ, ಮಂಗನ ಕಾಯಿಲೆ ಮುಕ್ತ ಮಲೆನಾಡು ಮಾಡಬೇಕೆಂಬುದು ಇಲಾಖೆಯ ಚಿಂತನೆ. ಸರ್ಕಾರ ಹಾಗೂ ಸಾರ್ವಜನಿಕರು ಸೇರಿ ಇದನ್ನು ನಿರ್ಮೂಲನೆ ಮಾಡಬೇಕಿದೆ. ಹುಟ್ಟಿದ ಮನುಷ್ಯನಿಗೆ ಸಾವು ನಿಶ್ಚಿತ. ಆದರೆ ಯಾರ ಸಾವು ಹೇಗೆ ಎಂಬುದು ಗೊತ್ತಿಲ್ಲ. ಕಾಯಿಲೆ ಬಂದಾಗ ಸೂಕ್ತ ಆರೈಕೆ ಮಾಡುವ ಮೂಲಕ ವ್ಯಕ್ತಿಯನ್ನು ಬದುಕಿಸಲು ಇಲಾಖೆ ನಿರಂತರ ಶ್ರಮಿಸುತ್ತಿದೆ. ಕಾಯಿಲೆ ನಿರ್ಮೂಲನೆಗೆ ಆರೋಗ್ಯ ಇಲಾಖೆ ನಿರಂತರ ಪ್ರಯತ್ನ ಮುಂದುವರಿಸುತ್ತದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಬಿ.ಸಿ.ವೆಂಕಟೇಶ್, ತಾಲೂಕು ಆರೋಗ್ಯಾಧಿಕಾರಿ ಡಾ| ಮುನಿವೆಂಕಟರಾಜು, ಕೆಎಫ್‌ಡಿ ಅಧಿಕಾರಿ ಡಾ| ಕಿರಣ್, ಆರೋಗ್ಯ ಇಲಾಖೆ ನೌಕರರ ಸಂಘದ ತಾಲೂಕು ಅಧ್ಯಕ್ಷ ವೈ. ಮೋಹನ್, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಗ್ರಾಮಸ್ಥರು ಇದ್ದರು.