ಮಂಗಳೂರು:ವಾಮಂಜೂರು ಬಳಿಯ ಕೆತ್ತಿಕಲ್ ಬಳಿ ಗುಡ್ಡ ಕುಸಿತ ಘಟನೆಗೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ನೇತೃತ್ವದಲ್ಲಿ ಗುರುವಾರ ವಿಶೇಷ ಸಭೆ ನಡೆಯಿತು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ, ಶಿರೂರಿನಲ್ಲಿ ಪರಿಶೀಲನೆ ನಡೆಸಿದ ತಂಡದ ಸದಸ್ಯರು, ಎನ್‌ಎಂಆರ್‌ಐ, ಪಾಲಿಕೆ ಅಧಿಕಾರಿಗಳು ಸಹಿತ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಗುಡ್ಡ ಕುಸಿತಕ್ಕೆ ಸಂಬಂಧಿಸಿ ನಿಖರ ಕಾರಣಗಳನ್ನು ಪತ್ತೆ ಹಚ್ಚಲು ಸಭೆಯಲ್ಲಿ ಚರ್ಚೆ ನಡೆಯಿತು. ಉಳಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ನಡೆಯುತ್ತಿರುವ ಗುಡ್ಡ ಕುಸಿದ ಪ್ರಕರಣಕ್ಕೆ ಸಂಬಂಧಿಸಿ ಎದುರಾಗಿರುವ ಅಪಾಯ ಹಾಗೂ ಎದುರಾಗಬಹುದಾದ ಅಪಾಯದ ಬಗ್ಗೆ ಚರ್ಚೆ ನಡೆಸಲಾಯಿತು.
ಅವುಗಳ ವರದಿ ನೀಡುವಂತೆಯೂ ಸಭೆಯಲ್ಲಿ ಸೂಚನೆ ನೀಡಲಾಯಿತು. ಗುಡ್ಡ ಕುಸಿತ ತಡೆಯಲು ಮುನ್ನೆಚ್ಚರಿಕೆ ಕ್ರಮಗಳೇನಿದೆ ಅವುಗಳ ಬಗ್ಗೆಯೂ ಚರ್ಚೆ ನಡೆಯಿತು.
ಅಮೃತ ನಗರ ಪ್ರದೇಶದಿಂದ ಚರಂಡಿ ನೀರು ಕೆಳಗಿನ ಹೆದ್ದಾರಿ ಭಾಗಕ್ಕೆ ಹರಿಯದಂತೆ ಕ್ರಮ ವಹಿಸುವಂತೆ ಸಭೆಯಲ್ಲಿ ಸ್ಥಳೀಯಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.