ಕಾರ್ಕಳ: ಕೋವಿಡ್-19 ಲಾಕ್ ಡೌನ್ ಕಾರಣದಿಂದ ಜನರು ತಮ್ಮ ವೃತ್ತಿಗಿಂತ ಪ್ರವೃತ್ತಿಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಮನೆಯಲ್ಲಿ ಕಾಲಕಳೆಯುತ್ತಿರುವ ಮಂದಿ ದಿನನಿತ್ಯ ಹೊಸ ಹೊಸ ವಿಚಾರಗಳ ಬಗ್ಗೆ ಆಸಕ್ತಿ ಹೊಂದುತ್ತಿದ್ದಾರೆ. ಸದಾ ಕೆಲಸ, ಕಾರ್ಯ ಎಂದು ಬ್ಯುಸಿಯಾಗಿರುತ್ತಿದ್ದ ಮಂದಿ ಈಗ ಕುಟುಂಬದ ಜೊತೆಗೆ ಕಾಲ ಕಳೆಯುತ್ತಿದ್ದಾರೆ. ಊರ ಮೈದಾನದಲ್ಲಿ ಆಡುತ್ತಿದ್ದವರು ಈಗ ಮನೆಮಂದಿಯೊಂದಿಗೆ ಮನೆಯ ಅಂಗಳದಲ್ಲಿ ಆಡುತ್ತಿದ್ದಾರೆ. ಹೀಗೆ ಕೆರ್ವಾಶೆಯ ಯುವತಿಯೋರ್ವಳು ಮನೆಯಂಗಳದಲ್ಲಿ ಬಾರಿಸಿದ ಕವರ್ ಡ್ರೈವ್ ಹೊಡೆತವೊಂದು ವಿಶ್ವಮಟ್ಟದಲ್ಲಿ ಪ್ರಸಿದ್ಧಿಯಾಗಿದೆ.
ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದ ಯುವತಿ ಜ್ಯೋತಿ ಪೂಜಾರಿ ಅವರ ಕವರ್ ಡ್ರೈವ್ ಹೊಡೆತದ ವಿಡಿಯೋವೊಂದು ಈಗ ಭಾರಿ ವೈರಲ್ ಆಗುತ್ತಿದೆ. ಕ್ರೀಡಾ ಮಾಧ್ಯಮ ಸಂಸ್ಥೆ ಈಎಸ್ ಪಿಎನ್ ಕ್ರಿಕ್ ಇನ್ಫೋ, ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಪ್ರಕಟಿಸಿದ್ದು, ಕರಾವಳಿ ಯುವತಿಯ ಕವರ್ ಡ್ರೈವ್ ಗೆ ಜಗದಗಲ ಮೆಚ್ಚುಗೆ ವ್ಯಕ್ತವಾಗಿದೆ.
ಮುಂಬೈನಲ್ಲಿ ನೆಲೆಸಿರುವ ಜ್ಯೋತಿ ಪೂಜಾರಿ ಇತ್ತೀಚೆಗಷ್ಟೇ ಕೆರ್ವಾಶೆಯ ಮನೆಗೆ ಬಂದಿದ್ದರು. ಮೂರು ದಿನದ ಹಿಂದೆ ಮನೆಯಂಗಳದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಆಡುವಾಗ ರಂಜಿತ್ ಪೂಜಾರಿಯವರು ವಿಡಿಯೋ ಮಾಡಿ ತನ್ನ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ಗಮನಿಸಿದ ಸಂಸ್ಥೆ ಈಎಸ್ ಪಿಎನ್ ಕ್ರಿಕ್ ಇನ್ಫೋ ಈ ವಿಡಿಯೋವನ್ನು ತನ್ನ ಖಾತೆಯಲ್ಲಿ ಪ್ರಕಟಿಸಿದೆ.
“ಸ್ಟೆಪ್ಪಿಂಗ್ ಔಟ್ ಟು ದ ಲೆಗ್ಸೈಡ್ ಆಂಡ್ ಸ್ಮ್ಯಾಶಿಂಗ್ ಇಟ್ ಥ್ರೂದ ಕವರ್ಸ್’ ಎಂಬ ಬರಹದೊಂದಿಗೆ ವಿಡಿಯೋವನ್ನು ಪ್ರಕಟಿಸಿದ್ದು, ಇಂತಹ ಹೊಡೆತವನ್ನು ಹಿಂದೆ ನೋಡಿದ್ದೀರಾ ಎಂದು ಪ್ರಶ್ನಿಸಿದೆ.
ಈ ಪೋಸ್ಟ್ ವೈರಲ್ ಆಗಿದ್ದು, ಬಹಳಷ್ಟು ಮಂದಿ ಈಕೆ ತುಳುನಾಡಿನವರು, ಕೆ ಎಲ್ ರಾಹುಲ್ ರಂತೆಯೇ ಕರಾವಳಿಯ ಪ್ರತಿಭೆ ಎಂದು ಕೊಂಡಾಡಿದ್ದಾರೆ. 2009ರ ಟಿ20 ವಿಶ್ವಕಪ್ ಸೆಮಿ ಫೈನಲ್ ನಲ್ಲಿ ಜೋಹಾನ್ ಬೋಥರ ಬಾಲ್ ಗೆ ಶಾಹೀದ್ ಅಫ್ರಿದಿ ಇಂತಹುದೇ ಹೊಡೆತ ಬಾರಿಸಿದ್ದರು ಎಂದು ಒಬ್ಬರು ನೆನಪಿಸಿಕೊಂಡಿದ್ದಾರೆ. ತನ್ನ ದಾಖಲೆಯ 281 ರನ್ ಇನ್ನಿಂಗ್ಸ್ ವೇಳೆ ವಿವಿಎಸ್ ಲಕ್ಷ್ಮಣ್ ಅವರು ಶೇನ್ ವಾರ್ನ್ ಎಸೆತವನ್ನು ಹೀಗೆ ದಂಡಿಸಿದ್ದರು ಎಂದು ಮತ್ತೊಬ್ಬರು ನೆನೆಪಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ಮನೆಯಂಗಳದಲ್ಲಿ ಆಡಿದ ಆಟ ಸದ್ಯ ವಿಶ್ವಪ್ರಸಿದ್ದಿಯಾಗಿದೆ.