ಬಾಗಲಕೋಟೆ: ಜಿಲ್ಲೆಯ ಬಾದಾಮಿ ಮತ್ತು ಬೀಳಗಿ ಕ್ಷೇತ್ರಗಳ 16 ಸಾವಿರ ಹೆಕ್ಟೇರ್ ಭೂಮಿಗೆ ನೀರಾವರಿ ಕಲ್ಪಿಸುವ ಮಹತ್ವಾಕಾಂಕ್ಷಿ ಕೆರೂರ ಏತ ನೀರಾವರಿ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಈ ಎರಡೂ ಕ್ಷೇತ್ರಗಳ ರೈತರಿಗೆ ಖುಷಿ ತಂದಿದೆ. ಆದರೆ, ಈ ಯೋಜನೆಯಡಿ ಪೈಪ್‌ಲೈನ್ ಹಾದು ಹೋಗುವ ಮಾರ್ಗದಲ್ಲೇ 17 ವರ್ಷಗಳ ಹಿಂದೆಯೇ ನಿರ್ಮಿಸಿದ ಕಾಲುವೆಗಳಿಗೆ ನೀರು ಬರಲ್ಲ ಎಂಬ ವಿಷಯ ಬಹಿರಂಗಗೊಂಡಿದ್ದು, ರೈತರು ಬೇಸರ ಹೊರ ಹಾಕಿದ್ದಾರೆ.
ಈ ಯೋಜನೆಯಡಿ ಬಾದಾಮಿ ಕ್ಷೇತ್ರದ ಕೆರೂರ ಭಾಗದ 22 ಹಳ್ಳಿಗಳು ಹಾಗೂ ಬೀಳಗಿ ಕ್ಷೇತ್ರದ 9 ಹಳ್ಳಿಗಳ ರೈತರ ಭೂಮಿಗೆ ನೀರಾವರಿ ಒದಗಲಿದೆ. ಬೀಳಗಿ ಕ್ಷೇತ್ರ ವ್ಯಾಪ್ತಿಯ 10,100 ಎಕರೆ ಬಾದಾಮಿ ಕ್ಷೇತ್ರ ವ್ಯಾಪ್ತಿಯ 30 ಸಾವಿರ ಎಕರೆಗೆ ನೀರಾವರಿ ಕಲ್ಪಿಸಲು ಯೋಜನೆಯಡಿ ಡಿಪಿಆರ್ ಸಿದ್ಧಗೊಂಡಿದೆ. ಈ ಡಿಪಿಆರ್ ಸಿದ್ಧಪಡಿಸುವ ವೇಳೆ ಬೃಹತ್ ಪೈಪ್‌ಲೈನ್ ಹಾದು ಹೋಗುವ ಮಾರ್ಗದಲ್ಲೇ ಇರುವ ಘಟಪ್ರಭಾ ಬಲದಂಡೆ ಕಾಲುವೆಗೆ ನೀರು ಹರಿಸುವುದಿಲ್ಲ ಎಂಬುದು ಇದೀಗ ಸ್ಪಷ್ಟವಾಗಿದೆ. ಹೀಗಾಗಿ ಕಳೆದ 17 ವರ್ಷಗಳ ಹಿಂದೆಯೇ ನಿರ್ಮಾಣಗೊಂಡ ಕಾಲುವೆಗಳಿಗೆ ಈ ವರೆಗೆ ನೀರು ಹರಿದಿಲ್ಲ. ಹೀಗಾಗಿ ಕೆರೂರ ಏತ ನೀರಾವರಿ ಯೋಜನೆಯಡಿ ಹಾದು ಹೋಗುವ ಪೈಪ್‌ಲೈನ್ ಮಧ್ಯೆದಲ್ಲಿ ಬರುವ ಕಾಲುವೆಗಳಿಗೂ ನೀರು ಹರಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
25 ಸಾವಿರ ಎಕರೆಗಿಲ್ಲ ನೀರು: ಕರ್ನಾಟಕ ನೀರಾವರಿ ನಿಗಮದಿಂದ ಘಟಪ್ರಭಾ ಬಲದಂಡೆ ಕಾಲುವೆಯಡಿ ಜಿಲ್ಲೆಯ ಲೋಕಾಪುರದಿಂದ ಹುನಗುಂದ ತಾಲೂಕಿನ ಕಮತಗಿ ವರೆಗೂ ಒಟ್ಟು 52 ಸಾವಿರ ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು. ಇದಕ್ಕಾಗಿ 17 ವರ್ಷಗಳ ಹಿಂದೆಯೇ ಮುಖ್ಯ ಕಾಲುವೆ, ಉಪ ಕಾಲುವೆ ನಿರ್ಮಾಣಕ್ಕಾಗಿ ಸಾವಿರಾರು ಕೋಟಿ ಖರ್ಚು ಮಾಡಲಾಗಿದೆ. ಹಿಡಕಲ್ ಡ್ಯಾಂನಿಂದ ಜಿಎಲ್‌ಬಿಸಿ ಕಾಲುವೆಗೆ ನೀರು ಹರಿದಿದ್ದರೆ ಕಾಡರಗೊಪ್ಪ, ಕೆರಕಲಮಟ್ಟಿ, ಸೂಳಿಕೇರಿ, ಶಿರೂರ ಭಾಗದ ಪ್ರತಿಯೊಂದು ಹಳ್ಳಿಗೂ ನೀರಾವರಿ ಸೌಲಭ್ಯ ದೊರೆಯುತ್ತಿತ್ತು. ಆದರೆ, ಹಿಡಕಲ್ ಡ್ಯಾಂನಿಂದ ಆರಂಭಗೊಳ್ಳುವ ಜಿಎಲ್‌ಬಿಸಿ ಕಾಲುವೆಗೆ ಲೋಕಾಪುರ ವರೆಗೂ ಮಾತ್ರ ಸ್ವಲ್ಪ ಪ್ರಮಾಣದ ನೀರು ಬರುತ್ತಿದೆ. ಅದರ ಮುಂದೆ ಸುಮಾರು 92 ಕಿ.ಮೀ ವರೆಗೂ ಇರುವ ಕಾಲುವೆಗೆ ಒಮ್ಮೆಯೂ ನೀರು ಬಂದಿಲ್ಲ.
ಕಾಲುವೆಗೆ ಭೂಮಿಕೊಟ್ಟ ರೈತರು, ನೀರಿಗಾಗಿ ಕಾಯುತ್ತಲೇ ಇದ್ದಾರೆ. ಈ ಕಾಲುವೆಗೆ ನೀರು ಹರಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಗಂಭೀರ ಪ್ರಯತ್ನ ಮಾಡುತ್ತಿಲ್ಲ ಎಂಬ ಅಸಮಾಧಾನ ರೈತ ವಲಯದಿಂದ ಕೇಳಿ ಬರುತ್ತಿದೆ. ಹೊಸ ಕಾಮಗಾರಿಗೆ ಉತ್ಸಾಹ!: ಈ ಯೋಜನೆಯಡಿ ಆಲಮಟ್ಟಿ ಹಿನ್ನೀರು (2 ಟಿಎಂಸಿ ಅಡಿ) ಬಳಸಿಕೊಂಡು ನೀರಾವರಿ ಸೌಲಭ್ಯ ಕೊಡಲಿದೆ. ಹೆರಕಲ್ ಬಳಿ ಜಾಕ್ ವೆಲ್ ನಿರ್ಮಿಸಿ, ಅಲ್ಲಿಂದ ಪೈಪ್‌ಲೈನ್ ಮೂಲಕ ಕೆರೂರ ಭಾಗಕ್ಕೆ ನೀರು ಲಿಪ್ಟ್ ಮಾಡುವುದು. ಅಲ್ಲಿಂದ ಸೂಕ್ಷ್ಮ ನೀರಾವರಿ ಮೂಲಕ ರೈತರ ಭೂಮಿಗೆ ನೀರು ಕೊಡುವ ಉದ್ದೇಶ ಹೊಂದಲಾಗಿದೆ.
ಜಿಲ್ಲೆಯ ಮಟ್ಟಿಗೆ 525 ಕೋಟಿ ರೂ. ಮೊತ್ತದ ಬೃಹತ್ ಯೋಜನೆ ತರುವಲ್ಲಿ ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಅವರ ವಿಶೇಷ ಆಸಕ್ತಿ, ಸಚಿವ ಮುರುಗೇಶ ನಿರಾಣಿ ಅವರ ಪ್ರಯತ್ನಗಳೂ ಈ ಅನುದಾನ ತರುವಲ್ಲಿ ಪ್ರಮುಖವಾಗಿವೆ. ಆದರೆ, ಸದ್ಯ ನೀರಾವರಿ ಕಲ್ಪಿಸಲು ಉದ್ದೇಶಿಸಿರುವ ಗ್ರಾಮಗಳ ವ್ಯಾಪ್ತಿಯ ಎಂಎಲ್‌ಬಿಸಿ ಮತ್ತು ಜಿಎಲ್‌ಬಿಸಿ ಕಾಲುವೆಗಳಿವೆ. ಆ ಕಾಲುವೆಗಳಿಗೆ ನೀರು ಹರಿಸುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ನಡೆಬೇಕು. ಕೇವಲ ಹೊಸ ಕಾಮಗಾರಿ ಕೈಗೊಂಡು, ಭೂಮಿಯೊಳಗೆ ಪೈಪ್‌ಲೈನ್ ಹಾಕಿದರೆ ಸಾಲದು. ಇಂತಹ ಕಾಮಗಾರಿಗೆ ಬಹುತೇಕ ಅಧಿಕಾರಿಗಳು ಅತ್ಯಂತ ಉತ್ಸಾಹ ಹೊಂದಿರುತ್ತಾರೆ.
ಕಾಮಗಾರಿ ಪೂರ್ಣಗೊಂಡ ಬಳಿಕ, ರೈತರ ಹೊಲಕ್ಕೆ ನೀರು ಕೊಡಲು ಉತ್ಸಾಹ, ಜವಾಬ್ದಾರಿ ತೋರುವುದಿಲ್ಲ. ಇದಕ್ಕೆ ಜಿಎಲ್‌ಬಿಸಿ, ಎಂಎಲ್‌ಬಿಸಿ ಹಾಗೂ ದೇಶದ ಅತಿದೊಡ್ಡ ಹನಿ ನೀರಾವರಿ ಯೋಜನೆಯಾದ ರಾಮಥಾಳ ಯೋಜನೆಗಳೇ ಸಾಕ್ಷಿಯಾಗಿವೆ.