ಕೆರೂರ: ರೈತರು ಬೆಳೆಯುವ ಕಬ್ಬನ್ನು ಸಕಾಲದಲ್ಲಿ ಕಟಾವು ಮಾಡುವುದರಿಂದ ಅಧಿಕ ಇಳುವರಿ ಸಿಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಹೇಳಿದರು. ಕುಳಗೇರಿ ಕ್ರಾಸ್ ಸಮೀಪದ ಎಮ್‌ಆರ್‌ಎನ್ ಶುಗರ್ನಲ್ಲಿ ಕಬ್ಬು ನುರಿಸುವ ಹಂಗಾಮಿಗೆ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಬಾದಾಮಿ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಅನುಕೂಲವಾಗಲಿ ಎಂದು ಈ ಭಾಗದಲ್ಲಿ 3 ಸಕ್ಕರೆ ಕಾರ್ಖಾನೆ ಆರಂಭಿಸಲಾಗಿದೆ. ಇದರಿಂದ ರೈತರು ಬೆಳೆದ ಕಬ್ಬು ನಿಗದಿತ ಸಮಯದಲ್ಲಿ ಕಾರ್ಖಾನೆ ತಲುಪಲು ನೆರವಾಗಿದೆ. ಅಲ್ಲದೆ ಸುತ್ತಮುತ್ತಲಿನ ಸುಮಾರು 10000 ಯುವಕರಿಗೆ ಉದ್ಯೋಗ ದೊರಕಿದಂತಾಗಿದ್ದು, ಕೃಷಿ ಸಂಬಂಧಿ ಪೂರಕ ವೃತ್ತಿಗಳಿಗೆ ಉತ್ತೇಜನ ದೊರಕಲಿದೆ ಎಂದರು. ಪ್ರತಿದಿನ ಈ ಕಾರ್ಖಾನೆಯಲ್ಲಿ 10 ಸಾವಿರ ಟನ್ ಕಬ್ಬು ನುರಿಸುವ ಗುರಿಯಿದೆ.
ರೈತರಿಗೆ ತೊಂದರೆಯಾಗದಂತೆ ಕಬ್ಬು ನುರಿಸುವ ಭರವಸೆಯೊಂದಿಗೆ ಸರಕಾರ ನಿಗದಿಪಡಿಸಿದ ದರದಂತೆ ಸಕಾಲದಲ್ಲಿ ಬಿಲ್ ಪಾವತಿಸುವುದಾಗಿ ತಿಳಿಸಿದರು. ರಾಮದುರ್ಗ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಕಾರ್ಖಾನೆಯ ಬಾಯ್ಲರ್‌ಗೆ ಅಗ್ನಿ ಪ್ರದೀಪನ ಮಾಡಿದರಲ್ಲದೆ ಕಬ್ಬು ನುರಿಸುವ ಯಂತ್ರಕ್ಕೆ ಚಾಲನೆ ನೀಡಿ ರೈತರು ಹಾಗೂ ಕಾರ್ಖಾನೆಗೆ ಶುಭ ಕೋರಿದರು.
ಕಾರ್ಖಾನೆಯ ಎಮ್‌ಡಿ ರವಿಕಾಂತ ಪಾಟೀಲ ಮಾತನಾಡಿ, ಕಬ್ಬಿನ ಹಂಗಾಮು ಈ ಬಾರಿ ಮುಂಚಿತವಾಗಿ ಆರಂಭವಾಗಿದ್ದು ಸುಮಾರು 80 ರಿಂದ 90 ದಿನಗಳ ಕಾಲ ಬೆಳೆಯ ಪ್ರಮಾಣ ಆಧರಿಸಿ ಕಬ್ಬು ನುರಿಸುವ ಪ್ರಕ್ರಿಯೆ ನಡೆಯಲಿದೆ ಎಂದರು.
ಈ ವರ್ಷ 8 ಲಕ್ಷ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ ಎಂದು ಕಾರ್ಖಾನೆಯ ಉತ್ಪಾದನಾ ಸಾಮರ್ಥ್ಯದ ವಿವರ ನೀಡಿದರು. ಮುಖಂಡರಾದ ಈರನಗೌಡ ಕರಿಗೌಡ್ರ. ಹಣಮಂತಗೌಡ ಗೌಡರ, ಸಂಗಯ್ಯ ಸರಗಣಾಚಾರಿ. ಪಿ.ಆರ್. ಗೌಡರ. ಎಂ. ಹಂಗರಗಿ, ಹಣಮಂತ ಗೋಡಿ, ಅಶೋಕ ಜಿಗಳೂರ, ಭೀಮನಗೌಡ ಪಾಟೀಲ, ಮಲ್ಲಯ್ಯ ಸುರಗಿಮಠ, ಮಲ್ಲು ಕಂಠೆಪ್ಪನವರ ಹಾಜರಿದ್ದರು.