Advertisement

ಕೆರೆಕಾಡು: ಕೆರೆಗೆ ಜೀವ ತುಂಬಿ ಜೀವ ಉಳಿಸಿಕೊಂಡರು !

03:26 PM Mar 31, 2017 | |

ಹಳೆಯಂಗಡಿ: ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯತ್‌ ಸೇರಿದರೆ ಗ್ರಾಮದ ಅಭಿವೃದ್ಧಿ ಕಷ್ಟವೇನಲ್ಲ ಎಂಬುದಕ್ಕೆ ಇದು ಉದಾಹರಣೆ. ಇತಿಹಾಸದಿಂದ ಪಾಠ ಕಲಿಯುವುದೆಂದರೆ ಇದೇ. ಗ್ರಾ.ಪಂ. ಮತ್ತು ಗ್ರಾಮಸ್ಥರು ಸೇರಿ ಕಳೆದು ಕೊಂಡಿದ್ದ ಕೆರೆಗೆ ಜೀವ ತುಂಬುತ್ತಿರುವ ಘಟನೆ ಇದು.

Advertisement

ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿಯ ಜಾತ್ರೆಯ ಜಳಕದ ಕೆರೆ ಎಂದೇ ಪ್ರಸಿದ್ಧಿ ಪಡೆದ ಕೆರೆಕಾಡಿನ ಕೆರೆಯಲ್ಲಿ ಹೂಳು ತುಂಬಿ ಸುತ್ತ ಮುತ್ತಲೂ ನೀರಿನ ಪ್ರಮಾಣ ಕುಸಿದಿತ್ತು. ಆದರೆ, ಕಳೆದ ವರ್ಷ ಒಂದಿಷ್ಟು ಹೂಳೆತ್ತಿದ್ದರಿಂದ ಸ್ವಲ್ಪ ಜೀವ ಕಳೆ ತುಂಬಿತು. ಕೆರೆಯಲ್ಲಿ ಹೆಚ್ಚು ನೀರು ಸಂಗ್ರಹ ವಾದ ಕಾರಣ ಸ್ಥಳೀಯ ಹಲವು ಬಾವಿಗಳಲ್ಲಿ ನೀರಿನ ಒರತೆ ಹೆಚ್ಚಿದ್ದು, ಸಾಕಷ್ಟು ನೀರಿದೆ. 

ಪಡು ಪಣಂಬೂರು ಗ್ರಾ.ಪಂ.ನ ಬೆಳ್ಳಾಯರು ಗ್ರಾಮದ ಕೆರೆಕಾಡಿನ ಈ ಸಣ್ಣ ಊರು ಈ ಮೊದಲು ಅರಸು ಕಾಡು ಎಂದೇ ಪ್ರಸಿದ್ಧ. ಸುಮಾರು 25 ವರ್ಷಗಳ ಹಿಂದೆ ಸುಬ್ರಹ್ಮಣ್ಯ ಮಹಾ ಗಣಪತಿ ದೇವಸ್ಥಾನದ‌ ಅಭಿವೃದ್ಧಿಯ ಬಗ್ಗೆ ಅಷ್ಟಮಂಗಲ ಪ್ರಶ್ನೆಯಲ್ಲಿ ಬೆಳ್ಳಾಯರು ಗ್ರಾಮದ ಕೆರೆಯನ್ನು ಪುನರ್‌ನಿರ್ಮಿಸಿ ದೇವರ ಮೂರ್ತಿ ಗೆ ಇಲ್ಲಿಯೇ ವಿಶೇಷ ಪೂಜೆ ಪುನಸ್ಕಾರ ಮಾಡಲು ನಿರ್ಧರಿಸಲಾಯಿತು. ಹೀಗಾಗಿ ಅರಸು ಕಾಡೆಂಬುದು ಕೆರೆಕಾಡು ಎಂದು ಬದಲಾಯಿತು. ಕೆಲವು ವರ್ಷಗಳ ಬಳಿಕ ಈ ದಂಡೆಯಲ್ಲಿನ ಕಲ್ಲುಗಳೆಲ್ಲ ಸಡಿಲಾಗಿ ಬಿದ್ದಿತ್ತಲದೇ, ಹೂಳು ತುಂಬಿ ನೀರಿನ ಹರಿವೂ ಕಡಿಮೆಯಾಗಿತ್ತು. ಇದನ್ನು ಮನಗಂಡ ಪಡುಪಣಂಬೂರು ಗ್ರಾ.ಪಂ. ಹಾಗೂ ಪೂಪಾಡಿಕಟ್ಟೆಯ ಪ್ರಮುಖರು ಸೇರಿ ಕಳೆದ ವರ್ಷ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಸುಮಾರು 1.40 ಲಕ್ಷ ರೂ. ವೆಚ್ಚದಲ್ಲಿ ಶ್ರಮದಾನದ ಮೂಲಕ ಹೂಳನ್ನು ಹಾಗೂ ಕೆರೆಗೆ ಬಿದ್ದಿರುವ ಕಲ್ಲುಗಳನ್ನು ಶೇ.70ರಷ್ಟು ತೆಗೆದು ದುರಸ್ತಿಪಡಿಸಿದರು. ಎಪ್ರಿಲ್‌ ಬಂದರೂ ಸುಮಾರು ಐದಾರು ಅಡಿಗಿಂತ ಹೆಚ್ಚು ನೀರಿದ್ದು, ಬಾವಿ ಹಾಗೂ ಗ್ರಾಮ ಪಂಚಾಯತ್‌ನ ಕೊಳವೆ ಬಾವಿಗಳಲ್ಲೂ ನೀರಿದೆ. ಇದರಿಂದ ಉತ್ತೇಜಿತಗೊಂಡ ಗ್ರಾ. ಪಂ., ಈ ವರ್ಷ ಕೆರೆ ಸಂಜೀವಿನಿ ಯೋಜನೆಯಡಿ ಸುಮಾರು 20ರಿಂದ 30 ಲಕ್ಷ ರೂ. ವೆಚ್ಚದಲ್ಲಿ ಪುನರ್‌ನಿರ್ಮಾಣಕ್ಕೆ ಮುಂದಾಗಿದೆ.

ಜಗತ್ತಿನಲ್ಲಿ 1.4 ಬಿಲಿಯನ್‌ ಜನರು  ಜಲಾನಯನ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.ಇಲ್ಲಿ ಹೆಚ್ಚಿನ ನೀರು ಪೋಲಾಗುತ್ತಿದ್ದು ಇದರಿಂದಾಗಿ ನದಿ, ಅಂತರ್ಜಲ ಬರಿದಾಗುತ್ತಿದೆ.

ಯುರೋಪಿನ  ಶೇ. 60ರಷ್ಟು  ನಗರವಾಸಿಗಳು   ಅಂದರೆ ಸುಮಾರು 1 ಲಕ್ಷ ಮಂದಿ ಕೊಳವೆ ಬಾವಿಯ ನೀರನ್ನು  ಬಳಸುತ್ತಿದ್ದು, ಇದರಿಂದ  ಅಂತರ್ಜಲ ಮಟ್ಟ ಶೀಘ್ರವಾಗಿ  ಬರಿದಾಗುತ್ತಿದೆ.

Advertisement

ಕುಡಿಯುವ ನೀರಿನ ವ್ಯತ್ಯಯ ಕಂಡು ಕಳೆದ ಬಾರಿ ಹೂಳನ್ನು ತೆಗೆಯಲಾಗಿತ್ತು. ಈ ಬಾರಿ ಅದರ ಫಲಿತಾಂಶ ನಮಗೆ ಸಿಕ್ಕಿದೆ. ಆದುದರಿಂದ ಈಗ ಕೆರೆಯ ಪುನರ್‌ ನಿರ್ಮಾಣಕ್ಕೆ ಮುಂದಾಗಿದ್ದೇವೆ.
– ಮೋಹನ್‌ದಾಸ್‌, ಅಧ್ಯಕ್ಷರು, ಪಡುಪಣಂಬೂರು ಗ್ರಾ.ಪಂ.

ದೇವಸ್ಥಾನಕ್ಕೆ ಸಂಬಂಧಿಸಿದ ಕೆರೆ ಯಾಗಿ ದ್ದು, ಸುಮಾರು 1.5 ಎಕ್ರೆ ಯಷ್ಟು ವಿಸ್ತೀ ರ್ಣ ದ ಕೆರೆಯ ಸುತ್ತ ಮುತ್ತಲಿನ ಜಮೀ ನನ್ನು ಪಂಚಾ ಯತ್‌  ಅಭಿವೃದ್ಧಿ ಪಡಿಸಬೇಕು. ಗ್ರಾಮ ಸ್ಥರು ಸಂಪೂರ್ಣವಾಗಿ ಇದರ ಅಭಿ ವೃದ್ಧಿಗೆ ಕೈ ಜೋಡಿಸಿದ್ದು, ನೀಲ ನಕ್ಷೆ ತಯಾರಾಗಿದೆ.
– ಉಮೇಶ್‌ ದೇವಾಡಿಗ, ಪೂಪಾಡಿಕಟ್ಟೆ-ಬೆಳ್ಳಾಯರು

ಹೀಗೂ ಉಳಿಸಿ
ಬಿಸಿಲು ಜಾಸ್ತಿಯಾಗಿದೆ, ನೀರಿನ ಹಾಹಾಕಾರವೆದ್ದಿದೆ. ಇನ್ನಾದರೂ ನೀರಿನ ಉಳಿಕೆಗೆ ಕೆಲವೊಂದು ಕ್ರಮ ಅನುಸರಿಸಬಹುದು. ಅದಕ್ಕಾಗಿ ಇಲ್ಲಿದೆ ಕೆಲವು ಟಿಪ್ಸ್‌. 
– ಓವರ್‌ಹೆಡ್‌ ಟ್ಯಾಂಕ್‌ನಿಂದ ಒಮ್ಮೆಯೂ ನೀರು ತುಂಬಿ ಬೀಳದಂತೆ ಎಚ್ಚರ ವಹಿಸಿ. ಟ್ಯಾಂಕ್‌ ನೀರು ಆವಿಯಾಗದಂತೆ ಮುಚ್ಚಳವಿಡಿ. 
– ಅಕ್ಕಿ, ಬೇಳೆ ತೊಳೆದ ನೀರನ್ನು ಗಿಡಗಳಿಗೆ ಹಾಕಿ. ಇದರಲ್ಲಿ ಒಳ್ಳೆಯ ಪೌಷ್ಟಿಕಾಂಶಗಳಿದ್ದು, ಗಿಡ ಬೆಳೆಯಲು ಸಹಾಯಕ.
– ಊಟಕ್ಕೆ ತಟ್ಟೆ ಬಳಸುವ ಬದಲು ಹಾಳೆ ತಟ್ಟೆ, ಬಾಳೆ ಎಲೆ ಬಳಸಿ.
– ಮಜ್ಜಿಗೆ ಮೇಲಿನ ತಿಳಿನೀರನ್ನು ಕರಿಬೇವಿನ ಗಿಡಕ್ಕೆ ಹಾಕಿ.
– ಟ್ಯಾಪ್‌, ಗೇಟ್ವಾಲ್‌ ಸೋರದಂತೆ ಎಚ್ಚರ ವಹಿಸಿ. 
– ಡ್ರೈನೇಜ್‌ಗೆ ಹೋಗುವ ನೀರನ್ನು ಆದಷ್ಟು ಕಡಿಮೆಗೊಳಿಸಿ. 
-   ಬಟ್ಟೆ ಒಗೆದ ನೀರನ್ನು ವಾಹನ ತೊಳೆಯಲು, ಅಂಗಳ ಗುಡಿಸಲು, ಶೌಚಾಲಯ, ಬಾತ್‌ರೂಮ್‌ ತೊಳೆಯಲು , ಗಿಡಮರಗಳಿಗೆ ಬಳಸಿ. 
-ನೆಲ ಒರೆಸಿದ ಬಟ್ಟೆಯನ್ನು ಪಾತ್ರೆ ತೊಳೆದ ನೀರು ಅಥವಾ ಬಟ್ಟೆ ಒಗೆದ ನೀರಲ್ಲಿ ಜಾಲಿಸಿ ತೆಗೆಯಬಹುದು. 
– ಅಡುಗೆ ಮನೆಯಲ್ಲಿ ನೀರನ್ನು ಹಿತಮಿತವಾಗಿ ಬಳಸಿ. 
– ಪಾತ್ರೆ ತೊಳೆಯಲು ನಲ್ಲಿ ನೀರಿನ ಬದಲು ಟಬ್‌ ಅಥವಾ ಬಕೆಟ್‌ನಲ್ಲಿ ನೀರಿಟ್ಟು ತೊಳೆಯಿರಿ. ಇದರಿಂದ ಸಾಕಷ್ಟು ನೀರು ಉಳಿಸಬಹುದು. 
-ರಶ್ಮಿ ಶರ್ಮಾ (ಓದುಗರು),  ಉಪ್ಪಂಗಳ

ಈ ಅಭಿಯಾನದಲ್ಲಿನೀವೂ ಪಾಲ್ಗೊಳ್ಳಿ
ಉದಯವಾಣಿ ಸುದಿನ  ಆರಂಭಿಸಿರುವ  ಈ ಅಭಿಯಾನದಲ್ಲಿ ನೀವು ಪಾಲ್ಗೊಳ್ಳಿ. ನೀರು ಸಂರಕ್ಷಣೆಗೆ ಸಲಹೆ, ಮಾಹಿತಿಗಳನ್ನು  ಹಂಚಿಕೊಳ್ಳಿ. ವಾಟ್ಸಪ್‌ ನಂ-  76187 74529
 

Advertisement

Udayavani is now on Telegram. Click here to join our channel and stay updated with the latest news.

Next