Advertisement

ಕೇರಳಿಯಂ ನಾಟ್ಯ ಪುಳಕ

03:15 PM Oct 20, 2018 | |

ಅಲ್ಲಿ ಕೇರಳದ ನೃತ್ಯ ಕಲೆಗಳೆಲ್ಲ ಪಾಕವಾಗಿ ಘಮಗುಟ್ಟುತ್ತಿತ್ತು. ನರ್ತಕಿಯರ ಭಾವಾಭಿನಯಗಳು ಕಣ್ಮನಗಳಿಗೆ ತಂಪೆರೆಯುತ್ತಿತ್ತು. ಒಮ್ಮೆ ಪ್ರದಕ್ಷಿಣೆ. ಇನ್ನೊಮ್ಮೆ ಅಪ್ರದಕ್ಷಿಣೆ. ಹಾಗೆ ಚಲಿಸುತ್ತಲೇ ಪಕ್ಕಕ್ಕೆ ಬಾಗಿ ಸುಂದರ ಸಂಜ್ಞೆಗಳ ಮೂಲಕ ಭಾವಾಭಿನಯ… ಇದೆಲ್ಲವೂ ಮೂಡುಬಿದಿರೆಯ ವಿದ್ಯಾಗಿರಿಯ ಆಳ್ವಾಸ್‌ ನುಡಿಸಿರಿ ವೇದಿಕೆಯಲ್ಲಿ ಕಂಡುಬಂದಂಥ ದೃಶ್ಯ…

Advertisement

ಕೇರಳ ಶಾಸ್ತ್ರೀಯ ನೃತ್ಯವೆಂದರೆ ಅಲ್ಲೊಂದು  ಲಯ, ತಾಳ, ರಾಗ ಪದ್ದತಿ, ಬೆಡಗು, ಬೆರಗು ಸೇರಿದ ನವಭಾವಗಳ ಅಭಿವ್ಯಕ್ತಿ. ಕಲೆಯೊಂದಿಗೆ ಕಸರತ್ತು ಮೇಳೈಸುವ ಝಲಕ್‌ ಅದು. ನೃತ್ಯ ವೈಭವದೊಂದಿಗೆ ಸಂಗೀತದ ಸಡಗರ ಅಲ್ಲಿರುತ್ತೆ. ಕೇರಳದ ಸಾಂಪ್ರದಾಯಿಕ ತೊಡುಗೆಯಾದ ಗೋಲ್ಡ್‌ ಬಾರ್ಡರ್‌ ಇರುವ ಮುಂಡು ಮತ್ತು ನೆರಿಯಟ್ಟು ತೊಟ್ಟವರ ನೃತ್ಯ ಮೋಡಿಯೇ ವೇದಿಕೆಗೆ ಒಂದು ಕಳೆ. ಇದೆಲ್ಲವೂ ಇತ್ತೀಚೆಗೆ ಆಳ್ವಾಸ್‌ ಕೇರಳಿಯಂ ಸಾಂಸ್ಕೃತಿಕ ವೈಭವದಲ್ಲಿ ಅಲೆ ಅಲೆಯಾಗಿ ತೆರೆದುಕೊಂಡ ದೃಶ್ಯಗಳು.

 ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಕೇರಳ ವಿದ್ಯಾರ್ಥಿಗಳು ನಡೆಸಿದ ನೃತ್ಯ ವೈಭವವಿದು. ಅದು ಅ.13. ವಿದ್ಯಾಗಿರಿಯ ಆಳ್ವಾಸ್‌ ನುಡಿಸಿರಿ ವೇದಿಕೆಯಲ್ಲಿ ಪಂಚವಾದ್ಯಂ, ತೆಯ್ಯಂ, ತಿರುವಾಧಿರ್‌, ಸಿಂಗಾರಿ ಮೇಳಗಳು ಸೋಜಿಗ ಸೃಷ್ಟಿಸಿಬಿಟ್ಟವು. ಪೂಕಳಂ ಸುತ್ತ ತಿರುವಾಧಿರ್‌ ನೃತ್ಯ ಪುಳಕ ಸೃಷ್ಟಿಸಿತು. ಪಕ್ಕ ವಾದ್ಯಗಳ ನೆರವಿಲ್ಲದೆ ಮಾಡುವ ಸರಳ ಅರೆ ಶಾಸ್ತ್ರೀಯ ಕಲೆ ಕಣ್ಮನ ಸೆಳೆಯಿತು. ವಿದ್ಯಾರ್ಥಿಯನಿಯರು ಕೇರಳದ ವಿಶಿಷ್ಟ ಮುಂಡು ಹಾಗೂ ಜರಿಯುಳ್ಳ ಮೇಲ್ಮುಂಡನ್ನು ಉಟ್ಟುಕೊಡು ಕೂದಲನ್ನು ಮೇಲಕ್ಕೆ ಎತ್ತಿ ಕಟ್ಟಿ, ಮಲ್ಲಿಗೆ ಹೂವಿನ ಮಾಲೆಯನ್ನು ಮುಡಿದು ಒಂದೇ ಬಣ್ಣದ ಕುಪ್ಪಸವನ್ನು, ತಿರುವಾಧಿರದ ಸಮವಸ್ತ್ರ ಧರಿಸಿ ಕೈ ಕಾಲುಗಳಿಗೆ ಮೆಹಂದಿಯಿಂದ ಶೃಂಗಾರಗೊಂಡ ಸುಂದರಿಯರು ವೃತ್ತಾಕಾರದಲ್ಲಿ ನಿಂತು ಹಾಡುತ್ತಾ, ಪರಸ್ಪರ ಕೈಚಪ್ಪಾಳೆ ತಟ್ಟುತ್ತಾ ನರ್ತಿಸಿದರು. ಒಮ್ಮೆ ಪ್ರದಕ್ಷಿಣೆ. ಇನ್ನೊಮ್ಮೆ ಅಪ್ರದಕ್ಷಿಣೆ. ಹಾಗೆ ಚಲಿಸುತ್ತಲೇ ಪಕ್ಕಕ್ಕೆ ಬಾಗಿ ಸುಂದರ ಸಂಜ್ಞೆಗಳ ಮೂಲಕ ಭಾವಾಭಿನಯ. 

ಜರತಾರಿ ನರ್ತಕಿಯರು…
ನರ್ತಕಿಯರು ಥಳ ಥಳ ಹೊಳೆವ ಚಿನ್ನದ ಜರತಾರಿಯಿಂದ ಅಲಂಕೃತಗೊಂಡಿದ್ದ ಸೀರೆ ಅಂಚು ಬಿಳಿಸೀರೆಗೊಂದು ಅದ್ಭುತ ಮೆರುಗು ತಂದು ಕೊಟ್ಟಿತ್ತು. “ಮೋಹಿನಿ ಅಟ್ಟಂ’ ಅಂತೂ ನಿಜಕ್ಕೂ ಮನೋಹರ. ನೃತ್ಯ ಮಾಡುವಾಗ ಈ ಕಲಾವಿದರ ದೇಹ ಟ್ಯೂನ್‌ ಮಾಡಿದಂತೆ ಬಳುಕಿ ಬಾಗುತ್ತಿತ್ತು. ಅವರ ದೇಹದ ಪ್ರತಿ ಅಂಗದಲ್ಲೂ ನೃತ್ಯದ ಲಾಲಿತ್ಯ ಒಸರುತ್ತಿತ್ತು. ಮೋಹಿನಿಅಟ್ಟಂನಲ್ಲಿ ಗಮನ ಸೆಳೆಯುವುದು ಆಂಗಿಕ ಅಭಿನಯ. ಆ ಹುಡುಗಿಯರು ತಮ್ಮ ಅಂಗೈ ಹಾಗೂ ಗುಲಾಬಿ ಬಣ್ಣದ ಬೆರಳುಗಳನ್ನು ಭಾವಕ್ಕೆ ಅನುಗುಣವಾಗಿ ಬೆಸೆಯುತ್ತಿದ್ದ ದೃಶ್ಯ ಆಕರ್ಷಕ. ಮುಖವನ್ನು ಲಜ್ಜೆಯ ಮು¨ªೆಯಾಗಿಸಿಕೊಂಡು ಬಿಂಕದಿಂದ ನೃತ್ಯ ಮಾಡಿದ ಮೋಹಿನಿ ಅಟ್ಟಂ ಸೊಗಸಾಗಿತ್ತು.

ಕಚಗುಳಿ ಕೊಟ್ಟ ಕಥಕ್ಕಳಿ
ಕಥಕ್ಕಳಿ ಕೂಡ ಕೇರಳದ ಜನಪ್ರಿಯ ನೃತ್ಯ. ಇಲ್ಲೂ ಆಂಗಿಕ ಅಭಿನಯಕ್ಕೆ ಹೆಚ್ಚು ಪ್ರಾಶಸ್ತ್ಯ. ಕಲಾವಿದರು ನವರಸಗಳನ್ನು ಮುಖದ ಮುಖೇನವೇ ಹೊರಹಾಕಬೇಕು, ಯಕ್ಷಗಾನದಂತೆ. ಎದುರಾಳಿಯನ್ನು ಹೊಂಚಿ ನೋಡುವ ಕಣ್ಣುಗಳು, ಹಣೆಯ ಮೇಲಿರುವ ಕೆಂಪು ನಾಮ, ಕಚ್ಚೆ ಪಂಚೆ, ಬರೀ ಮೈನಲ್ಲಿ ಕತ್ತಿ ಹಾಗೂ ಗುರಾಣಿಯನ್ನು ಹಿಡಿದು ಹೋರಾಡುವ ಪರಿ ನೋಡುಗರ ಹೃದಯಬಡಿತ ಹೆಚ್ಚಿಸುತ್ತದೆ. ಪುಟಾಣಿ ಪಟುಗಳ ಖಡ್ಗ ಜಳಪಿಸುತ್ತಿದ್ದ ರೀತಿ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿತು. ವೇದಿಕೆ ಮೇಲೆ ಬಂದ ಇಬ್ಬರು ಕಳರಿಪಯಟ್ಟು ಪಟುಗಳು ಖಡ್ಗ ಜಳಪಿಸುತ್ತಿದ್ದ ರೀತಿ ಹಾಗೂ ಅವುಗಳಿಂದ ಹೊರಡಿಸುತ್ತಿದ್ದ ಶಬ್ದಕ್ಕೆ ಕೆಲವರು ಭಯಭೀತರಾದರು, ಹಲವರು ರೋಮಾಂಚನಗೊಂಡರು.
  ಒಟ್ಟಿನಲ್ಲಿ ಅಂದು ಕೇರಳವೇ, ಕರ್ನಾಟಕ ಅಂಗಳಕ್ಕೆ ಬಂದು ಥಕ ತೈ ಅಂದಂತೆ ಭಾಸವಾಗಿತ್ತು.

Advertisement

ಅಲಂಕಾರದ ಸೊಬಗು
ಮದುವೆ ಹೆಣ್ಣಿನಂತೆ ಕಲಾವಿದರೂ ಆಡಂಬರದ ವಸ್ತ್ರಗಳನ್ನು ಧರಿಸಿ, ಮೈತುಂಬಾ ಆಭರಣ ತೊಟ್ಟು ಅಲಂಕರಿಸಿಕೊಂಡಿರುತ್ತಾರೆ. ಕೈಕಾಲುಗಳಲ್ಲಿ ಢಾಳಾಗಿ ಕಾಣುವ ಗೋರಂಟಿ ಅವರ ಅಂದಕ್ಕೆ ಮತ್ತಷ್ಟು ಮೆರುಗು ತುಂಬುತ್ತದೆ. ವೇಗವಾಗಿ ನರ್ತಿಸುವುದು ಒಪ್ಪನ ನೃತ್ಯದ ವಿಶೇಷತೆ. ಕಸೂತಿ ಮಾಡಿದ ಹಸಿರು ಲಂಗ ದಾವಣಿ ತೊಟ್ಟ ಯುವತಿಯರು ಮಾಡಿದ ಒಪ್ಪನ ನೃತ್ಯ ಮನಸೆಳೆಯಿತು. 

ಯಜಾಸ್‌ ದುದ್ದಿಯಂಡ, ಮೂಡುಬಿದಿರೆ 

Advertisement

Udayavani is now on Telegram. Click here to join our channel and stay updated with the latest news.

Next