Advertisement

ಸಂಸ್ಕೃತಿ, ಪರಂಪರೆಗೆ ಕೇರಳದ  ಕೊಡುಗೆ ಮಹತ್ತರ: ನಳಿನ್‌

02:21 PM Sep 18, 2017 | |

ಮಹಾನಗರ: ಕೇರಳಕ್ಕೆ  ದೇವರ ನಾಡು ಎಂಬ ಖ್ಯಾತಿ ಇದ್ದು, ಅದು  ದೇವರು ಕುಣಿದಾಡಿದ , ಸಂತರು ನಡೆದಾಡಿದ ನೆಲ. ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ  ಕೇರಳದ ಕೊಡುಗೆ  ಮಹತ್ತರ ಎಂದು ಸಂಸದ ಹಾಗೂ ಬಿಜೆಪಿ ಕೇರಳ ಸಹ ಉಸ್ತುವಾರಿ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ಬಿಜೆಪಿ  ಮಲಯಾಳಿ ಸೆಲ್‌ ಕರ್ನಾಟಕ ವತಿಯಿಂದ ಮಂಗಳೂರಿನ  ಸಿ.ವಿ.ನಾಯಕ್‌ ಹಾಲ್‌ನಲ್ಲಿ ರವಿವಾರ ಆಯೋಜಿಸಿದ್ದ  ಮಲಯಾಳಿ ಸಂಗಮ ಹಾಗೂ ಓಣಂ ಆಚರಣೆ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದ ಅವರು, ತಿರುವನಂತಪುರ ಆನಂತ ಪದ್ಮನಾಭ ಕ್ಷೇತ್ರ, ಗುರುವಾಯೂರು,  ಅನಂತಪುರ, ಮಧೂರು , ಶಬರಿಮಲೆ   ಸಹಿತ ಕೇರಳದ ಉದ್ದಗಲಕ್ಕೂ   ಪುಣ್ಯಕ್ಷೇತ್ರಗಳಿವೆ.  ಕೇರಳವು ಶ್ರೀ ಶಂಕರಾಚಾರ್ಯ, ಬ್ರಹ್ಮಶ್ರೀ ನಾರಾಯಣ ಗುರು, ಶ್ರೀ ನಿತ್ಯಾನಂದ ಸ್ವಾಮಿ ಸಹಿತ ಅನೇಕ ಸಂತರಿಗೆ ಜನ್ಮನೀಡಿದ ಪುಣ್ಯಭೂಮಿಯೂ ಆಗಿದೆ ಎಂದರು. 

ಪರಿವರ್ತನೆಯ ಬಿಜೆಪಿ ಮಲಯಾಳಿ ಸೆಲ್‌ ಕರ್ನಾಟಕ  ಘಟಕವು ಓಣಂ ಹಬ್ಬ ವನ್ನು  ಸುಂದರ ಮತ್ತು ಅರ್ಥಪೂರ್ಣವಾಗಿ ಆಯೋಜಿಸಿದೆ. ಉದಾತ್ತ ಸಂದೇಶಗಳನ್ನು ಸಾರುವ ಓಣಂ  ಭಾವೈಕ್ಯದ ಹಬ್ಬವೂ ಆಗಿದೆ . ಕೇರಳದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ಅಧಿಕಾರದ ದರ್ಪ ಮತ್ತು ಅಹಂ ಭಾವದ ನೀತಿಗಳು ಅಂತ್ಯ ಕಾಣುವ ಕಾಲ ಸನ್ನಿಹಿತವಾಗುತ್ತಿದೆ ಎಂದವರು ಹೇಳಿದರು.

ಓಣಂ ಜಾತ್ಯತೀತ ಹಬ್ಬ
ಮುಖ್ಯ ಅತಿಥಿಯಾಗಿದ್ದ  ಸಂಸದ ಪ್ರೊ| ರಿಚರ್ಡ್‌ ಹೇ ಅವರು ಮಾತನಾಡಿ, ಕೇರಳಿಗರು ಎಲ್ಲೆ ಹೋದರೂ ಅಲ್ಲಿನವರ ಜತೆಗೆ ಬೆರೆತು ಆ ಪ್ರದೇಶದ ಅಭಿವೃದ್ಧಿಗೆ  ವಿಶೇಷ ಕೊಡುಗೆ ನೀಡುತ್ತಾ ಬಂದಿದ್ದಾರೆ.  ಓಣಂ  ಜಾತಿ , ಮತ ಭೇದ ಮರೆತು ಎಲ್ಲರೂ ಆಚರಿಸುವ ಹಬ್ಬವಾಗಿದೆ ಎಂದರು. 

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಸಿ.ಕೆ. ಪದ್ಮನಾಭನ್‌  ಮಾತನಾಡಿ, ಬಿಜೆಪಿ ಮಲಯಾಳಿ ಸೆಲ್‌ ಓಣಂ ಆಚರಣೆಯನ್ನು ಆಯೋಜಿಸಿರುವುದು ಅಭಿನಂದನೀಯ ಎಂದರು.

Advertisement

ಆರೆಸ್ಸೆಸ್‌ ಪ್ರಮುಖ ಡಾ | ಕಲ್ಲಡ್ಕ  ಪ್ರಭಾಕರ ಭಟ್‌, ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್‌, ಮಾಜಿ ಶಾಸಕ ಎನ್‌. ಯೋಗೀಶ್‌ ಭಟ್‌, ಬಿಜೆಪಿ ಮುಖಂಡರಾದ ವೇದವ್ಯಾಸ ಕಾಮತ್‌, ಸಂಜಯ ಪ್ರಭು, ರೂಪಾ ಡಿ.ಬಂಗೇರ, ಜಿಲ್ಲಾ  ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಪೂಜಾ ಪೈ, ಕೇರಳ ರಾಜ್ಯ ಬಿಜೆಪಿ ಉಪಾಧ್ಯಕ್ಷೆ  ಪ್ರಮೀಳಾ ನಾಯಕ್‌ ಅತಿಥಿಯಾಗಿದ್ದರು. 

ಬಿಜೆಪಿ  ಮಲಯಾಳಿ ಸೆಲ್‌ ಕರ್ನಾಟಕದ  ಸಂಚಾಲಕ ರಾಜ್ಯ ಸಮಿತಿ ಸಂಚಾಲಕ ಗೋಪಿನಾಥ್‌ ವೆನ್ನೇರಿ ಅಧ್ಯಕ್ಷತೆ ವಹಿಸಿದ್ದರು. ಸಹಸಂಚಾಲಕ ವಿ.ರವೀಂದ್ರನ್‌  ಸ್ವಾಗತಿಸಿ ಪ್ರಸ್ತಾವಿಸಿದರು. ಸದಸ್ಯ ಟಿ.ಎ.ಆಶೋಕನ್‌, ವಿ.ಪಿ. ಕೃಷ್ಣರಾಜ್‌ ಉಪಸ್ಥಿತರಿದ್ದರು. ಮಂಗಳೂರು ನಗರ ಸಂಚಾಲಕ  ಸಿ.ಎಸ್‌. ಪ್ರದೀಪ್‌ ಕುಮಾರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next