ತಿರುವನಂತಪುರಂ: ಕೇರಳದಲ್ಲಿ “ಸಮಾನ ಸಾಮಾಜಿಕ ನ್ಯಾಯ” ಇನ್ನೂ ಸಾಧಿಸಬೇಕಾಗಿದೆ. ಇಲ್ಲಿನ ಪ್ರಮುಖ ದೇವಾಲಯಗಳಲ್ಲಿ ಅರ್ಚಕರಿಗೆ ಸಂಬಂಧಿಸಿದಂತೆ ಬ್ರಾಹ್ಮಣ ಪ್ರಾಬಲ್ಯ ಇನ್ನೂ ಪ್ರಚಲಿತದಲ್ಲಿದೆ ಎಂದು ಪ್ರಭಾವಿ ಶಿವಗಿರಿ ಮಠದ ಸಚ್ಚಿದಾನಂದ ಸ್ವಾಮಿ ಸ್ವಾಮೀಜಿ ಗುರುವಾರ ಹೇಳಿಕೆ ನೀಡಿದ್ದಾರೆ.
ಶಿವಗಿರಿ ಮಠದ ಸ್ಥಾಪಕ, ಸಮಾಜ ಸುಧಾರಕ, ಸಂತ ಶ್ರೀ ನಾರಾಯಣ ಗುರುಗಳ 169ನೇ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ‘ಶಬರಿಮಲೆ ಅಯ್ಯಪ್ಪ ದೇಗುಲ, ಗುರುವಾಯೂರು ಶ್ರೀಕೃಷ್ಣ ದೇಗುಲ, ಚೊಟ್ಟನಿಕ್ಕಾರ ಭಗವತಿ ದೇವಸ್ಥಾನ, ವೈಕಂ ಮಹಾದೇವ ದೇಗುಲ ಮುಂತಾದ ಪ್ರಸಿದ್ಧ ಕ್ಷೇತ್ರಗಳಲ್ಲಿ ಅರ್ಚಕ ಹುದ್ದೆಗೆ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ’ ಎಂಬ ವಿಚಾರ ಉಲ್ಲೇಖಿಸಿದರು.
‘ಸಿಪಿಐ (ಎಂ) ನೇತೃತ್ವದ ಎಲ್‌ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರಗಳು ತಮ್ಮ ಅಧಿಕಾರಾವಧಿಯಲ್ಲಿ ಈ ದೇವಾಲಯಗಳಲ್ಲಿ ಬ್ರಾಹ್ಮಣರನ್ನು ಅರ್ಚಕರನ್ನಾಗಿ ಮಾಡಬೇಕೆಂದು ಸುತ್ತೋಲೆಗಳನ್ನು ಹೊರಡಿಸಿವೆ’ ಎಂದು ಮಠದ ಆಡಳಿತ ನಡೆಸುವ ಶ್ರೀ ನಾರಾಯಣ ಧರ್ಮ ಸಂಘದ ಟ್ರಸ್ಟ್‌ನ ಅಧ್ಯಕ್ಷ ಸಚ್ಚಿದಾನಂದ ಸ್ವಾಮಿ ಹೇಳಿದರು.
ನಾರಾಯಣ ಗುರುಗಳ ಚಿಂತನೆಗಳನ್ನು ಅಳವಡಿಸಿಕೊಂಡು ಅವರು ಜಾರಿಗೆ ತರಲು ಪ್ರಯತ್ನಿಸಿದ ಕ್ರಾಂತಿ ಮತ್ತು ಸುಧಾರಣೆಯ ದೀಪವನ್ನು ಮುಂದಕ್ಕೆ ಸಾಗಿಸುವ ಮೂಲಕ ರಾಜ್ಯವು “ಸಮಾನ ಸಾಮಾಜಿಕ ನ್ಯಾಯ” ವನ್ನು ಸಾಧಿಸಲು ಸಾಧ್ಯವಾಗುತ್ತದೆ. ಕೇರಳ ಸಮಾನ ಸಾಮಾಜಿಕ ನ್ಯಾಯವನ್ನು ಸಾಧಿಸಿದೆಯೇ? ಎಂದು ಪ್ರಶ್ನಿಸಿದರು.
ಶಿವಗಿರಿ ಮಠವು ಕೇರಳದ ಸಂಖ್ಯಾತ್ಮಕವಾಗಿ ಪ್ರಬಲವಾದ ಈಝವ ಸಮುದಾಯದ ಪ್ರಮುಖ ಆಧ್ಯಾತ್ಮಿಕ ಕೇಂದ್ರವಾಗಿದೆ.