ಕೊಚ್ಚಿ: ಎನ್‌ಡಿಎ ಸೇರುವ ಪಕ್ಷದ ನಾಯಕತ್ವದ ನಿರ್ಧಾರವನ್ನು ಜೆಡಿಎಸ್ ಕೇರಳ ಘಟಕ ಶನಿವಾರ ತಿರಸ್ಕರಿಸಿದ್ದು, ರಾಜ್ಯದಲ್ಲಿ ಎಡರಂಗದೊಂದಿಗೆ ದೃಢವಾಗಿ ನಿಲ್ಲುವುದಾಗಿ ಹೇಳಿದೆ.
ರಾಜ್ಯ ಸಮಿತಿ ಸಭೆಯ ಬಳಿಕ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಮ್ಯಾಥ್ಯೂ ಟಿ ಥಾಮಸ್, ಪಕ್ಷದ ಯಾವುದೇ ವೇದಿಕೆಯಲ್ಲಿ ಚರ್ಚೆ ನಡೆಸದೆ ಹೈಕಮಾಂಡ್ ಘೋಷಣೆ ಮಾಡಿದೆ.ಪಕ್ಷವು ಸಿಪಿಐ(ಎಂ) ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗದೊಂದಿಗೆ ನಾಲ್ಕು ದಶಕಗಳ ಕಾಲದ ಒಡನಾಟವನ್ನು ಹೊಂದಿದೆ ಮತ್ತು ಅದು ಮುಂದುವರಿಯುತ್ತದೆ ಎಂದು ಹೇಳಿದರು.
”ಯಾವುದೇ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸದೆ ರಾಷ್ಟ್ರೀಯ ನಾಯಕತ್ವ ಘೋಷಣೆ ಮಾಡಿದೆ. ಬಿಜೆಪಿ ಜತೆ ಕೈಜೋಡಿಸುವುದಾಗಿ ಘೋಷಿಸಿರುವುದು ಸಂಘಟನಾ ನೀತಿಗೆ ವಿರುದ್ಧವಾಗಿದೆ. ಜೆಡಿಎಸ್ ನ ಕೇರಳ ಘಟಕವು ಅದರ ಪರವಾಗಿಲ್ಲ ಎಂದು ಥಾಮಸ್ ಮಾಧ್ಯಮಗಳಿಗೆ ತಿಳಿಸಿ ರಾಷ್ಟ್ರೀಯ ಅಧ್ಯಕ್ಷರ ಪ್ರಕಟಣೆಯನ್ನು ತಿರಸ್ಕರಿಸಿದರು.
ಎಚ್. ಡಿ. ದೇವೇಗೌಡ ನೇತೃತ್ವದ ಜೆಡಿಎಸ್ 2024 ರ ಲೋಕಸಭೆ ಚುನಾವಣೆಗೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸೆಪ್ಟೆಂಬರ್‌ನಲ್ಲಿ ಎನ್‌ಡಿಎಗೆ ಸೇರ್ಪಡೆಗೊಂಡಿತ್ತು.
ಜೆಡಿಎಸ್ ಗೆ ಸಿಪಿಐ(ಎಂ) ‘ರಾಜಕೀಯ ರಕ್ಷಣೆ’ ನೀಡುತ್ತಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿತ್ತು.