ಉಳ್ಳಾಲ: ಮಂಗಳೂರಿನಲ್ಲಿ ಕಳೆದ ಗುರುವಾರದಂದು ನಡೆದಿದ್ದ ಪೌರತ್ವ ತಿದ್ದುಪಡಿ ವಿರೋಧಿ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಬಳಿಕ ಘರ್ಷಣೆ ನಡೆದ ಕಾರಣ ಪೊಲೀಸ್ ಗೋಲಿಬಾರಿನಲ್ಲಿ ಇಬ್ಬರು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಕೇರಳದ ಯು.ಡಿ.ಎಫ್. ನಿಯೋಗವು ಇಂದು ಮೃತಪಟ್ಟವರ ಮನೆಗಳಿಗೆ ಹಾಗೂ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಘಟನೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿತು.
ಕಣ್ಣೂರು ಸಂಸದ ಕೆ.ಸುಧಾಕರನ್, ಕಾಸರಗೋಡು ಸಂಸದ ರಾಜಮೋಹನ್ ಉನ್ನಿತ್ತಾನ್, ಮಂಜೇಶ್ವರ ಶಾಸಕ ಎಂ.ಸಿ.ಕಮರುದ್ದೀನ್, ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ಮನ್ನಾರ್ ಕಾಡ್ ಶಾಸಕ ಸಂಶುದ್ದೀನ್, ಕುಟ್ಯಾಡಿ ಶಾಸಕ ಪಾರಕ್ಜಲ್ ಅಬ್ದುಲ್ಲಾ ಅವರು ಈ ನಿಯೋಗದಲ್ಲಿದ್ದರು. ಬಳಿಕ ಮಂಗಳೂರು ಹೊರವಲಯದ ತೊಕ್ಕೊಟ್ಟು ಬಳಿ ಈ ನಿಯೋಗದ ಸದಸ್ಯರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
‘ಮೊನ್ನೆಯ ಘಟನೆಯಲ್ಲಿ ಮೃತಪಟ್ಟ ಜಲೀಲ್ ಹಾಗೂ ನೌಶೀನ್ ಮನೆಗೆ ಭೇಟಿ ನೀಡಿದ್ದೇವೆ. ಪೊಲೀಸರು ಹಾರಿಸಿದ ಗುಂಡಿಗೆ ಇಬ್ಬರು ಅಮಾಯಕರು ಬಲಿಯಾಗಿದ್ದಾರೆ. ಮಾತ್ರವಲ್ಲದೇ ಗೋಲಿಬಾರ್ ನಡೆಸುವ ಸಂದರ್ಭದಲ್ಲಿ ಪೊಲೀಸರು ಯಾವುದೇ ಕಾನೂನು ನಿಯಮಗಳನ್ನು ಪಾಲಿಸಿಲ್ಲ’ ಎಂದು ಮನ್ನಾರ್ ಕಾಡ್ ಶಾಸಕ ಸಂಶುದ್ದೀನ್ ಹೇಳಿದರು.
‘ಮಾತ್ರವಲ್ಲದೇ ಸ್ಥಳೀಯರೊಂದಿಗೆ ನಾವು ಮಾತನಾಡಿದ ಸಂದರ್ಭದಲ್ಲಿ ಪೊಲೀಸರ ವಿರುದ್ಧ ಹಲವಾರು ದೂರುಗಳು ಕೇಳಿಬಂದಿವೆ. ಈ ಕುರಿತಾಗಿ ನಾವು ಮಂಗಳೂರು ಕಮಿಷನರ್ ಮತ್ತು ಎಡಿಜಿಪಿ ಜೊತೆ ಮಾತನಾಡಿದ್ದೇವೆ. ಘಟನೆಯಿಂದ ಈ ಭಾಗದ ಜನರು ಬಹಳ ಆತಂಕಕ್ಕೆ ಒಳಗಾಗಿದ್ದಾರೆ. ಮಾತ್ರವಲ್ಲದೇ ಪೊಲೀಸ್ ಫೈರಿಂಗ್ ಘಟನೆಗೆ ಸಂಬಂಧಿಸಿದಂತೆ ಸೂಕ್ತ ನ್ಯಾಯಾಂಗ ತನಿಖೆಗೆ ಆಗ್ರಹಿಸುತ್ತೇವೆ’ ಎಂದೂ ಅವರು ಹೇಳಿದರು.
ಮಲಯಾಳಿ ಪತ್ರಕರ್ತರನ್ನು ಇಲ್ಲಿನ ಪೊಲೀಸರು ವಶಕ್ಕೆ ಪಡೆದುಕೊಂಡ ವಿಚಾರಕ್ಕೆ ಸಂಬಂಧಿಸಿದಂತೆಯೂ ಈ ನಿಯೋಗ ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿತು. ಇದು ಪತ್ರಿಕಾ ಸ್ವಾತಂತ್ರ್ಯದ ಹರಣ ಮತ್ತು ಅವರ ಹಕ್ಕುಗಳನ್ನ ಕಸಿಯಲಾಗಿದೆ ಎಂದು ನಿಯೋಗದ ಸದಸ್ಯರು ಅಭಿಪ್ರಾಯಪಟ್ಟರು.
ಮೃತಪಟ್ಟ ಇಬ್ಬರ ಕುಟುಂಬದವರೂ ತೀರಾ ಬಡವರಾಗಿರುವುದರಿಂದ ಅವರಿಗೆ ಹೆಚ್ಚಿನ ಪರಿಹಾರ ಒದಗಿಸಿ ಕೊಡಬೇಕು ಎಂದು ಈ ನಿಯೋಗ ಆಗ್ರಹಿಸಿತು. ಇನ್ನು ಈ ಘಟನೆಯಲ್ಲಿ ಯಾವುದೇ ಕೇರಳಿಗರು ಇರಲಿಲ್ಲ, ಆಸ್ಪತ್ರೆಯಲ್ಲಿ ಗಾಯಗೊಂಡು ದಾಖಲಾಗಿರುವವರೆಲ್ಲರೂ ಸ್ಥಳೀಯರೇ ಆಗಿದ್ದಾರೆ. ಹಾಗಾಗಿ ಮಂಗಳೂರು ಗಲಭೆಯಲ್ಲಿ ಕೇರಳಿಗರ ಪಾತ್ರ ಇದೆ ಎಂಬ ಕರ್ನಾಟಕ ಗೃಹಸಚಿವರ ಹೇಳಿಕೆ ಸರಿಯಲ್ಲ ಎಂದು ನಿಯೋಗ ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿತು.
ಹಾಗೆಯೇ ಕರ್ನಾಟಕ – ಕೇರಳ ಗಡಿಭಾಗದಲ್ಲಿ ಸಂಚರಿಸುವವರಿಗೆ ಪೊಲೀಸರು ಕಿರುಕುಳ ನೀಡುತ್ತಿರುವ ವಿಚಾರದ ಕುರಿತಾಗಿ ಸರಕಾರ ಗಮನಹರಿಸಬೇಕು ಎಂದು ನಿಯೋಗ ರಾಜ್ಯ ಸರಕಾವನ್ನು ಆಗ್ರಹಿಸಿದೆ.