ಕೊಚ್ಚಿ: 75 ವರ್ಷದ ವೃದ್ಧನನ್ನು ಹನಿಟ್ರ್ಯಾಪ್ ಮಾಡಿ ಅವರಿಂದ ಲಕ್ಷಾಂತರ ರೂಪಾಯಿಯನ್ನು ಲೂಟಿದ ಪ್ರಕರಣಕ್ಕೆ ಸಂಬಂಧಿಸಿ ಕಿರುತೆರೆ ನಟಿ ಹಾಗೂ ಆತನ ಸ್ನೇಹಿತನನ್ನು ಪೊಲೀಸರು ಬಂಧಿಸಿರುವ ಘಟನೆ ಕೇರಳದ ಕೊಲ್ಲಂನ ಪರವೂರ್ ನಲ್ಲಿ ನಡೆದಿದೆ.
ಪತ್ತನಂತಿಟ್ಟ ಮೂಲದ ಮಲಯಾಳಂ ನಟಿ ನಿತ್ಯಾ ಸಸಿ ಮತ್ತು ಆಕೆಯ ಸ್ನೇಹಿತ ಪರವೂರು ಮೂಲದ ಬಿನು ಅವರನ್ನು ಕೊಲ್ಲಂನ ಪರವೂರ್‌ನಲ್ಲಿ ಬಂಧಿಸಲಾಗಿದೆ.
ತಿರುವನಂತಪುರಂನ ಪಟ್ಟಂನಲ್ಲಿ ವಾಸಿಸುತ್ತಿರುವ 75 ವರ್ಷದ ವ್ಯಕ್ತಿ ಮಾಜಿ ಸೈನಿಕರಾಗಿದ್ದು, ಕೇರಳ ವಿಶ್ವವಿದ್ಯಾನಿಲಯದ ಉದ್ಯೋಗಿಯಾಗಿದ್ದಾರೆ.
ಮೇ.24 ರಂದು ನಟಿ ಹಾಗೂ ವಕೀಲರೂ ಆಗಿರುವ ಸಸಿ ಅವರು ಬಾಡಿಗೆ ಮನೆ ನೀಡುವ ನೆಪದಲ್ಲಿ ವೃದ್ಧನನ್ನು ದೂರವಾಣಿ ಕರೆ ಮೂಲಕ ಸಂಪರ್ಕಿಸಿದ್ದರು. ಸಸಿ ಅವರು ವೃದ್ಧನಿಗೆ ನಿರಂತರ ಕರೆ ಮಾಡುವ ಮೂಲಕ ಅವರೊಂದಿಗೆ ಆತ್ಮೀಯರಾಗಿ, ಭೇಟಿಯಾಗಲು ಆರಂಭಿಸಿದ್ದರು. ಹೀಗೆ ಭೇಟಿಯಾಗುವ ಸಂದರ್ಭದಲ್ಲಿ ಒಂದು ದಿನ ನಟಿ ವೃದ್ಧನನ್ನು ಬಟ್ಟೆ ತೆಗೆಯುವಂತೆ ಬೆದರಿಸಿದ್ದಾರೆ. ಇದೇ ವೇಳೆ ವೃದ್ಧ ಬಟ್ಟೆ ತೆಗೆಯುವ ವೇಳೆ ನಟಿಯ ಸ್ನೇಹಿತ ಬಿನು ಮೊಬೈಲ್ ನಲ್ಲಿ ಇದನ್ನು ಚಿತ್ರೀಕರಿಸಿದ್ದಾರೆ. ನೀವು 25 ಲಕ್ಷ ರೂ. ನೀಡದಿದ್ದರೆ, ನಿಮ್ಮ ಈ ಫೋಟೋಗಳನ್ನು ವೈರಲ್ ಮಾಡುವುದಾಗಿ ನಟಿ ಹಾಗೂ ಆತನ ಸ್ನೇಹಿತ ವೃದ್ಧನನ್ನು ಬೆದರಿಸಿದ್ದಾರೆ. ನಿರಂತರವಾಗಿ ಬ್ಲ್ಯಾಕ್ ಮೇಲ್ ಮಾಡಿದ ಕಾರಣದಿಂದ ವೃದ್ಧ ಭೀತಿಯಿಂದ ಇಬ್ಬರಿಗೆ 11 ಲಕ್ಷ ರೂ.ಯನ್ನು ನೀಡಿದ್ದಾರೆ ಎಂದು ಘಟನೆ ಬಗ್ಗೆ ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: BOLLYWOOD: ರಾಕಿ – ರಾಣಿ ಪ್ರೇಮ್ ಕಹಾನಿಗೆ ಪ್ರೇಕ್ಷಕರು ಫಿದಾ; 1st ಡೇ ಗಳಿಸಿದ್ದೆಷ್ಟು?
ಇದಾದ ಬಳಿಕವೂ ಬೆದರಿಕೆಗಳು ಮುಂದುವೆರಿದ್ದು, ಇದರಿಂದ ಬೇಸತ್ತ ವೃದ್ಧ ಜು.18 ರಂದು ಪರವೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ವಂಚಕರನ್ನು ಬಂಧಿಸಲು ಪೊಲೀಸರು ದೂರುದಾರರನ್ನೇ ಬಳಸಿಕೊಂಡಿದ್ದಾರೆ. ಪೊಲೀಸರ ನಿರ್ದೇಶನದಂತೆ ಉಳಿದ ಹಣವನ್ನು ಪಾವತಿಸುವ ನೆಪದಲ್ಲಿ ದೂರುದಾರರು ಆರೋಪಿಗಳನ್ನು ಮನೆಗೆ ಕರೆಸಿಕೊಂಡಿದ್ದಾರೆ. ನಂತರ ಪರವೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.