ತಿರುವನಂತಪುರ: ಕೇರಳದ ಪಾಲಕ್ಕಾಡಿನ ಎಲಿಚಿರದಲ್ಲಿರುವ ಕುರುಂಬಚಿ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗೆಂದು ತೆರಳಿದ್ದ ವೇಳೆ ಬೆಟ್ಟದ ಕಣಿವೆ ಯಲ್ಲಿ ಸಿಲುಕಿದ್ದ ಆರ್.ಬಾಬು (23) ಅವರನ್ನು ಬುಧವಾರ ಬೆಳಗ್ಗೆ ಕಾರ್ಯಾಚರಣೆ ಮಾಡಿ ರಕ್ಷಿಸುವಲ್ಲಿ ಸೇನಾಪಡೆ ಯಶಸ್ವಿಯಾಗಿದೆ.
ಸೋಮ ವಾರದಿಂದ ಕಣಿವೆಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದ ಬಾಬು ವನ್ನು ರಕ್ಷಿಸಲು ಸಕಲ ಪ್ರಯತ್ನಗಳನ್ನೂ ನಡೆಸಿದ ಸೇನಾ ಪಡೆಗಳು ಯಶಸ್ವಿ ಕಾರ್ಯಾಚರಣೆ ನಡೆಸಿ ಮೇಲಕ್ಕೆ ಕರೆತರುವಲ್ಲಿ ಯಶಸ್ವಿಯಾಗಿವೆ.
ಮೂವರು ಸ್ನೇಹಿತರೊಂದಿಗೆ ಸೋಮವಾರ ಮಧ್ಯಾಹ್ನ ಬೆಟ್ಟಕ್ಕೆ ತೆರಳಿದ್ದ ಬಾಬು ಸಂಜೆ ಬೆಟ್ಟದಿಂದ ಕೆಳಗಿಳಿಯುವಾಗ ಕಾಲು ಜಾರಿ, ಬೆಟ್ಟದ ಸೀಳಿನಲ್ಲಿ ಸಿಲುಕಿಕೊಂಡಿದ್ದ. ಆತನ ಸ್ನೇಹಿತರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದರು. ರಕ್ಷಣೆಗೆಂದು ವಾಯುಪಡೆಯಿಂದ ಹೆಲಿಕಾಪ್ಟರ್ ಕರೆಸಲಾಗಿತ್ತಾದರೂ ಆತ ಇದ್ದ ಸ್ಥಳಕ್ಕೆ ಅದು ಹೋಗಲು ಸಾಧ್ಯವಿಲ್ಲವೆಂದು ವಾಪಸು ಕಳುಹಿಸ ಲಾಗಿತ್ತು.
ಸೀಳಿನಲ್ಲಿ ಸಿಲುಕಿದ್ದ ಬಾಬು ಮೊಬೈಲ್ ಮೂಲಕ ಫೋಟೋ ಕಳುಹಿಸಿದ್ದ. ರಕ್ಷಣಾ ಕಾರ್ಯದಲ್ಲಿ ಪರ್ವತಾರೋಹಿಗಳು, ರಾಷ್ಟ್ರೀಯ ವಿಪತ್ತು ನಿರ್ವಹಣ ತಂಡವೂ ಭಾಗಿಯಾಗಿತ್ತು.
Related Articles
ಬಾಬು ಅವರು ಸಣ್ಣ ಬಿರುಕಿನಲ್ಲಿ ಮುದುಡಿಕೊಂಡು ಕುಳಿತು ತನ್ನನ್ನು ತಾನು ಸಮತೋಲನಗೊಳಿಸಿಕೊಳ್ಳುತ್ತಿರುವ ಫೋಟೋ ಡ್ರೋನ್ ಕ್ಯಾಮೆರಾಗೆ ಲಭ್ಯವಾಗಿತ್ತು.
ಪಾರಾದ ನಂತರ, ಬಾಬು,ಸೇನಾ ಸಿಬ್ಬಂದಿಗೆ “ತುಂಬಾ ಥ್ಯಾಂಕ್ಸ್, ಇಂಡಿಯನ್ ಆರ್ಮಿ,” ಎಂದು ಧನ್ಯವಾದ ಸೂಚಕವಾಗಿ ಸೇನಾ ಸಿಬ್ಬಂದಿಯನ್ನು ಚುಂಬಿಸಿದರು. “ಇಂಡಿಯನ್ ಆರ್ಮಿ ಕಿ ಜೈ, ಭಾರತ್ ಮಾತಾ ಕಿ ಜೈ” ಎಂದು ಮಿತ್ರರೊಂದಿಗೆ ಸೇರಿಕೊಂಡರು. ಕೆಲವರು ಸೆಲ್ಫಿ ಕ್ಲಿಕ್ಕಿಸಿ ವಿಜಯದ ಚಿಹ್ನೆಯನ್ನು ತೋರಿದರು.
ಪಾಲಕ್ಕಾಡ್ ಜಿಲ್ಲಾ ವೈದ್ಯಕೀಯ ಅಧಿಕಾರಿ ನೇತೃತ್ವದ ಗುಂಪು ಎಲ್ಲಾ ವೈದ್ಯಕೀಯ ಅಗತ್ಯತೆಗಳನ್ನು ಸಿದ್ಧಪಡಿಸಿಕೊಂಡಿತ್ತು. ಆಂಬ್ಯುಲೆನ್ಸ್ ಮತ್ತು ಪಾಲಕ್ಕಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ಅಗತ್ಯವಿರುವ ಯಾವುದೇ ವಿಶೇಷ ಚಿಕಿತ್ಸೆಗಾಗಿ ವ್ಯವಸ್ಥೆ ಮಾಡಲಾಗಿತ್ತು.
ಆರ್ ಬಾಬು ಅವರನ್ನು ರಕ್ಷಿಸುವ ಪ್ರಯತ್ನಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ , ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸಾಮಾಜಿಕ ತಾಣದಲ್ಲಿ ಬರೆದಿದ್ದಾರೆ.