ಕಾಸರಗೋಡು: ಇತರ ರಾಜ್ಯಗಳಿಂದ ಕೇರಳ ರಾಜ್ಯ ಪ್ರವೇಶ ನಡೆಸುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆಯಿಂದ ಈ ವರೆಗೆ ಶೇ. 79.45 ಮಂದಿಗೆ ಪಾಸ್ ಮಂಜೂರು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ತಿಳಿಸಿದರು.
ಶನಿವಾರ ಸಂಜೆ ವರೆಗೆ 7,617 ಅರ್ಜಿಗಳು ಲಭಿಸಿದ್ದು, 6,052 ಮಂದಿಗೆ ಪಾಸ್ ಮಂಜೂರು ಮಾಡಲಾಗಿದೆ. ಈ ಮೂಲಕ ಒಟ್ಟು ಅರ್ಜಿದಾರರಲ್ಲಿ ಶೇ. 79.45 ಮಂದಿಗೆ ಪಾಸ್ ಮಂಜೂರಾಗಿದೆ ಎಂದವರು ಹೇಳಿದರು.
ಅರ್ಜಿದಾರರಿಗೆ ಕ್ವಾರಂಟೈನ್ ಕೇಂದ್ರಗಳ ಲಭ್ಯತೆಗನುಗುಣವಾಗಿ ಪಾಸ್ ವಿತರಣೆ ನಡೆಸಲಾಗುತ್ತಿದೆ. ಒಬ್ಬರು ಅರ್ಜಿ ಸಲ್ಲಿಸಿದ ತತ್‌ಕ್ಷಣವೇ ಆಯಾ ಸ್ಥಳೀಯಾಡಳಿತ ಸಂಸ್ಥೆಗಳ ಪದಾಧಿಕಾರಿಗಳು ಅರ್ಜಿದಾರರ ಮನೆಯಲ್ಲಿ ಯಾ ಸರಕಾರಿ ಕ್ವಾರೆಂಟೈನ್ ಕೇಂದ್ರದಲ್ಲಿ ಸೌಲಭ್ಯವಿದೆಯೇ ಎಂಬ ಬಗ್ಗೆ ಖಚಿತಪಡಿಸಿ, ದಾಖಲುಪಡಿಸಿ ಉಪ ಜಿಲ್ಲಾಧಿಕಾರಿ ಅಥವಾ ಹೆಚ್ಚುವರಿ ದಂಡನಾಧಿಕಾರಿಗೆ ವರದಿ ಸಲ್ಲಿಸುವರು. ಈ ವರದಿಯ ಹಿನ್ನೆಲೆಯಲ್ಲಿ ಪಾಸ್ ಮಂಜೂರು ಮಾಡಲಾಗುವುದು. ಮಿತಿಗಳಿದ್ದೂ ಗರಿಷ್ಠ ಮಟ್ಟದಲ್ಲಿ ಪಾಸ್ ಮಂಜೂರು ಮಾಡುವಲ್ಲಿ ಕಾಸರಗೋಡು ಜಿಲ್ಲೆ 6ನೇ ಸ್ಥಾನ ಹೊಂದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮಂಜೇಶ್ವರ ಚೆಕ್‌ಪೋಸ್ಟ್
ಮೂಲಕ 521 ಮಂದಿ ಕೇರಳ ಪ್ರವೇಶ
ಕಾಸರಗೋಡು: ಮಂಜೇಶ್ವರ ಚೆಕ್‌ಪೋಸ್ಟ್ ಮೂಲಕ ಶನಿವಾರ 521 ಮಂದಿ ಕೇರಳ ಪ್ರವೇಶ ಮಾಡಿದ್ದಾರೆ.ಈ ಚೆಕ್ ಪೋಸ್ಟ್ ಮೂಲಕ ಈ ವರೆಗೆ ಒಟ್ಟು 10,433 ಮಂದಿ ಕೇರಳಕ್ಕೆ ಆಗಮಿಸಿದ್ದಾರೆ. 26,560 ಮಂದಿಗೆ ಪಾಸ್ ಮಂಜೂರು ಆಗಿದೆ. ಒಟ್ಟು 33,207 ಮಂದಿ ಪಾಸ್‌ಗೆ ಅರ್ಜಿ ಸಲ್ಲಿಸಿದ್ದರು. ಕಾಸರಗೋಡು ಜಿಲ್ಲೆಯವರಾದ 2,436 ಮಂದಿ ಈ ಚೆಕ್‌ಪೋಸ್ಟ್ ಮೂಲಕ ಊರಿಗೆ ಆಗಮಿಸಿದ್ದಾರೆ. 6,048 ಮಂದಿ ಕಾಸರಗೋಡು ಜಿಲ್ಲೆಯವರಿಗೆ ಪಾಸ್ ಮಂಜೂರು ಮಾಡಲಾಗಿದೆ. ಒಟ್ಟು 7,607 ಮಂದಿ ಕಾಸರಗೋಡು ಜಿಲ್ಲೆಯವರು ಪಾಸ್‌ಗೆ ಅರ್ಜಿ ಸಲ್ಲಿಸಿದ್ದಾರೆ.