ಕೋಜಿಕೋಡ್ : ಕೇರಳದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಗುರುವಾರ 4 ವರ್ಷದ ಬಾಲಕಿಯೊಬ್ಬಳಿಗೆ ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು ನಾಲಗೆಗೆ ನಡೆಸಿ ಪ್ರಾಣ ದೊಂದಿಗೆ ಚೆಲ್ಲಾಟವಾಡಿದ ಘಟನೆ ಸುದ್ದಿಯಾಗಿದೆ.
ಪೋಷಕರು ಬಾಲಕಿಯ ಕೈಯಲ್ಲಿದ್ದ ಹೆಚ್ಚುವರಿ ಬೆರಳನ್ನು ತೆಗೆಯಲು ತಾಯಿ ಮತ್ತು ಮಕ್ಕಳ ಆರೈಕೆ ಕೇಂದ್ರಕ್ಕೆ ದಾಖಲಿಸಿದ್ದರು. ಆದರೆ, ವೈದ್ಯರು ತಪ್ಪಾಗಿ ಆಕೆಯ ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಬಾಲಕಿಯ ಮನೆಯವರು ಮಗುವಿನ ಬಾಯಿಯಲ್ಲಿ ಹತ್ತಿಯನ್ನು ಗಮನಿಸಿ ಬೆಚ್ಚಿ ಬಿದ್ದಿದ್ದಾರೆ.
ಈ ರೀತಿ ತಪ್ಪಾದ ಕಾರ್ಯವಿಧಾನ ಅಳವಡಿಸಿಕೊಂಡಿರುವ ಆಸ್ಪತ್ರೆಯ ವೈದ್ಯರು ಮತ್ತು ಸಿಬಂದಿಗಳ ವಿರುದ್ಧ ಕ್ರಮಕ್ಕೆ ಮಗುವಿನ ಪೋಷಕರು ಮತ್ತು ಸಾರ್ವಜನಿಕರು ಒತ್ತಾಯಿಸಿದ್ದಾರೆ. ನಿಜವಾಗಿಯೂ ಬಾಲಕಿಯ ನಾಲಗೆಯಲ್ಲಾಗಲಿ, ಬಾಯಿಯಲ್ಲಾಗಲಿ ಯಾವುದೇ ಸಮಸ್ಯೆ ಇರಲಿಲ್ಲ ನಾವು ಹೆಚ್ಚುವರಿಯಾಗಿದ್ದ ಕೈ ಬೆರಳು ತೆಗೆಯುವ ಸಲುವಾಗಿ ಆಸ್ಪತ್ರೆಗೆ ದಾಖಲಿಸಿದ್ದೆವು ಎಂದು ಪೋಷಕರು ತಿಳಿಸಿದ್ದಾರೆ.
ಘಟನೆ ಬಗ್ಗೆ ಕೇರಳದ ಆರೋಗ್ಯ ಸಚಿವೆ ವೀಣಾ ಅವರು ತನಿಖೆ ನಡೆಸಲು ಆದೇಶ ನೀಡಿದ್ದು, ಆರೋಗ್ಯ ಅಧಿಕಾರಿಗಳು ಮತ್ತು ವೈದ್ಯರಿಂದ ವರದಿ ಕೇಳಿದ್ದಾರೆ.
‘ಒಂದೇ ದಿನ ಇಬ್ಬರು ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ನಡೆಸಬೇಕಾದುದರಿಂದ ಹೀಗಾಗಿದೆ’ ಎಂದು ಬೇಜವಾಬ್ದಾರಿತನತೋರಿದ ಆಸ್ಪತ್ರೆಯ ಸಿಬಂದಿ ಮತ್ತು ವೈದ್ಯರು ಸಮಜಾಯಿಷಿ ನೀಡಿದ್ದಾರೆ!. ನೋವು ಅನುಭವಿಸುತ್ತಿರುವ ಬಾಲಕಿಯ ಪೋಷಕರು ಪೊಲೀಸ್ ದೂರು ದಾಖಲಿಸಲು ಮುಂದಾಗಿದ್ದಾರೆ.