ಅಲಪ್ಪುಳ: ಕೇರಳದ ಕರಾವಳಿ ಜಿಲ್ಲೆ ಅಲಪ್ಪುಳದಲ್ಲಿಎಸ್‌ಡಿಪಿಐ ಮತ್ತು ಬಿಜೆಪಿ ನಾಯಕರ ಹತ್ಯೆಗಳು ನಡೆದಿದ್ದು ಭಾನುವಾರ ಪೊಲೀಸರಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿಯೊಬ್ಬರ ಹತ್ಯೆಯ ನಂತರ, 12 ಗಂಟೆಗಳಲ್ಲಿ ಬಿಜೆಪಿ ಮುಖಂಡನನ್ನು ಹತ್ಯೆ ಮಾಡಲಾಗಿದೆ. ಭಾನುವಾರ ಇಡೀ ಅಲಪ್ಪುಳ ಜಿಲ್ಲೆಯಲ್ಲಿ ಸಿಆರ್‌ಪಿಸಿ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ರಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಕೆ ಎಸ್ ಶಾನ್ ಅವರು ಶನಿವಾರ ರಾತ್ರಿ ಮನೆಗೆ ಹಿಂದಿರುಗುತ್ತಿದ್ದಾಗ ಅವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಸಿ ಹತ್ಯೆಗೈಯಲಾಗಿದ್ದು, ಇದರ ಹಿಂದೆ ಆರ್‌ಎಸ್‌ಎಸ್ ಕೈವಾಡವಿದೆ ಎಂದು ಆರೋಪಿಸಲಾಗಿದೆ. ಶಾನ್ ಕೊಚ್ಚಿ ಆಸ್ಪತ್ರೆಯಲ್ಲಿ ಮಧ್ಯರಾತ್ರಿ ವೇಳೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲವು ಗಂಟೆಗಳ ನಂತರ, ಬಿಜೆಪಿಯ ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ರಂಜೀತ್ ಶ್ರೀನಿವಾಸ್ ಅವರನ್ನು ಭಾನುವಾರ ಬೆಳಿಗ್ಗೆ ಅವರ ಮನೆಗೆ ನುಗ್ಗಿದ ಕೆಲವು ದುಷ್ಕರ್ಮಿಗಳು ಅವರ ಮನೆಯಲ್ಲಿಯೇ ಕೊಲೆ ಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಾನ್ ಹತ್ಯೆಗೆ ಪ್ರತೀಕಾರವಾಗಿ ಬಿಜೆಪಿ ರಾಜ್ಯ ಸಮಿತಿ ಸದಸ್ಯ ಶ್ರೀನಿವಾಸ್ ಅವರ ಕೊಲೆ ನಡೆಸಲಾಗಿದೆ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಸ್‌ಡಿಪಿಐ ಮುಖಂಡ ಮನೆಗೆ ತೆರಳುತ್ತಿದ್ದಾಗ ಕಾರೊಂದು ಅವರ ಬೈಕ್‌ಗೆ ಡಿಕ್ಕಿ ಹೊಡೆದು ಕೆಳಗೆ ಬೀಳುತ್ತಿದ್ದಂತೆ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಜೆಪಿ ನಾಯಕನ ಹತ್ಯೆಯ ಬಳಿಕ ನಿಷೇಧಾಜ್ಞೆ ಜಾರಿಯಾಗಿದೆ.