Advertisement

ಜಲಪ್ರಳಯ: ಸಹಜ ಸ್ಥಿತಿಗೆ ಮರಳುತ್ತಿರುವ ಕೇರಳ

01:15 AM Aug 22, 2018 | Karthik A |

ಕಾಸರಗೋಡು: ನೆರೆ ಪೀಡಿತ ಕೇರಳದ ದಕ್ಷಿಣ ಜಿಲ್ಲೆಗಳಲ್ಲಿ ಮಳೆ ನಿಲುಗಡೆಗೊಂಡಿದ್ದು, ನೆರೆ ನೀರು ಇಳಿಯುತ್ತಿದ್ದಂತೆ ಮನೆಗೆ ಮತ್ತೆ ವಾಪಸಾಗುವ ಪ್ರಕ್ರಿಯೆ ನಡೆಯುತ್ತಿದೆ. ನೆರೆ ಹಾವಳಿಯಿಂದಾಗಿ ಬಹುತೇಕ ಮನೆಗಳು ಅಸ್ತವ್ಯಸ್ತಗೊಂಡಿದ್ದು, ಮನೆಯೊಳಗೆ ಮಣ್ಣು ತುಂಬಿಕೊಂಡಿದೆ. ಕೆಲವು ಮನೆಗಳಲ್ಲಿ ಹಾವುಗಳು ಕಂಡು ಬಂದಿವೆ. ನೆರೆ ಹಾವಳಿಯಿಂದಾಗಿ 11 ಸಾವಿರ ಮನೆಗಳು ಹಾನಿಗೀಡಾಗಿದ್ದು, 24 ಲಕ್ಷ ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಡಿದು ಹೋಗಿದೆ. 46 ಸಾವಿರ ಹೆಕ್ಟೇರ್‌ ಕೃಷಿ ನಾಶ ಸಂಭವಿಸಿದ್ದು ಇದರಿಂದಾಗಿ 2.80 ಲಕ್ಷ ಕೃಷಿಕರು ನಷ್ಟ ಅನುಭವಿಸುತ್ತಿದ್ದು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಮನೆ ಮತ್ತು ಕೃಷಿಗೆ ಉಂಟಾದ ನಾಶನಷ್ಟ 1,100 ಕೋಟಿ ರೂ. ಎಂದು ಪ್ರಾಥಮಿಕ ಲೆಕ್ಕಾಚಾರವಾಗಿದೆ. ಇದೇ ಸಂದರ್ಭದಲ್ಲಿ ಆ.20 ರಂದು ವಿವಿಧೆಡೆಗಳಿಂದ 31 ಶವಗಳು ಪತ್ತೆಯಾಗಿವೆೆ. ನೆರೆಪೀಡಿತ ಪ್ರದೇಶದ ಶುಚಿತ್ವ ಪ್ರಕ್ರಿಯೆಗೆ 40 ಸಾವಿರ ಪೊಲೀಸರು ಮತ್ತು ಸಮಾಜ ಸೇವಾ ಕಾರ್ಯಕರ್ತರು ಮುಂದಾಗಿದ್ದಾರೆ. ಮುಚ್ಚಲಾಗಿದ್ದ ನೆಡುಂಬಾಶ್ಯೇರಿ ವಿಮಾನ ನಿಲ್ದಾಣದಿಂದ ಆ.26 ರಿಂದ ವಿಮಾನ ಸೇವೆ ಪುನರಾರಂಭಿಸಲು ಶ್ರಮಿಸಲಾಗುತ್ತಿದೆ.

Advertisement


ನಿಧಾನವಾಗಿ ಸಹಜ ಸ್ಥಿತಿಗೆ

ಜಲಪ್ರಳಯದಿಂದ ತತ್ತರಿಸಿರುವ ಕೇರಳ ಈಗ ಪೂರ್ಣವಾಗಿ ಸಹಜ ಸ್ಥಿತಿಗೆ ನಿಧಾನವಾಗಿ ಮರಳುತ್ತಿದ್ದು, ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದ ಮಂದಿ ತಮ್ಮ ಮನೆಗಳಿಗೆ ವಾಪಸಾಗುತ್ತಿದ್ದಾರೆ. ಇದೇ ವೇಳೆ  ಜಲಪ್ರಳಯದಿಂದ ಮನೆ, ಆಸ್ತಿಪಾಸ್ತಿ ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸಲು ಅಗತ್ಯದ ಕ್ರಮ ತೆಗೆದುಕೊಳ್ಳಲು ಚಾಲನೆ ನೀಡಲಾಗಿದೆ. ಆದರೆ ಆಲಪ್ಪುಳ ತಾಲೂಕಿನ ಕುಟ್ಟನಾಡು ಮತ್ತಿತರ ಪ್ರದೇಶಗಳಲ್ಲಿ ನೆರೆ ನೀರು ಇನ್ನೂ ಇಳಿದಿಲ್ಲ. 

ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತದಲ್ಲಿ
ನೆರೆ ಪೀಡಿತ ಪ್ರದೇಶಗಳಲ್ಲಿ ಸಿಲುಕಿಕೊಂಡವರ ರಕ್ಷಣೆಗಿರುವ ಕಾರ್ಯಾಚರಣೆ ಅಂತಿಮ ಹಂತದಲ್ಲಿದೆ. ಚೆಂಗನ್ನೂರು ನಿರಾಶ್ರಿತ ಕೇಂದ್ರಗಳಲ್ಲಿ ಇನ್ನೂ ನೂರಾರು ಮಂದಿ ಉಳಿದುಕೊಂಡಿದ್ದು ಅಂತಹ ಕೇಂದ್ರಗಳ ಪೂರ್ಣ ನಿಯಂತ್ರಣವನ್ನು ಪೊಲೀಸರು ವಹಿಸಿಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಸೇನೆ ಇನ್ನಷ್ಟು ವೇಗ ನೀಡಿದೆ.

ಅಣೆಕಟ್ಟುಗಳಿಗೆ ನೀರಿನ ಹರಿವು ಇಳಿಕೆ
ರಾಜ್ಯದ ಎಲ್ಲ ಅಣೆಕಟ್ಟುಗಳಿಗೆ ನೀರಿನ ಹರಿವು ಇಳಿಯತೊಡಗಿದ್ದು, ಅದರಿಂದಾಗಿ ಅಣೆಕಟ್ಟುಗಳಲ್ಲಿ ನೀರಿನ ಮಟ್ಟವು ಕಡಿಮೆಯಾಗಿದೆ. ನೆರೆಯಿಂದ ನಾಪತ್ತೆಯಾದವರ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ. ನಿರಾಶ್ರಿತ ಶಿಬಿರಗಳಿಗೆ ಆಹಾರ, ನೀರು ಮತ್ತಿತರ ಸಾಮಗ್ರಿಗಳು ಮತ್ತು ಔಷಧಿ ಸಾಮಗ್ರಿಗಳ ಪೂರೈಕೆಯೂ ಭರದಿಂದ ಸಾಗುತ್ತಿದೆ. ರಾಜ್ಯದಲ್ಲಿ ಸದ್ಯ ಭಾರೀ ಮಳೆಯಾಗುವ ಸಾಧ್ಯತೆಯಿಲ್ಲವೆಂದು ಹವಾಮಾನ ಇಲಾಖೆ ತಿಳಿಸಿದೆ.

ಸಾರಿಗೆ ಪುನರಾರಂಭ
ದೀರ್ಘ‌ ದೂರ ರೈಲು, ವಿಮಾನ ಮತ್ತು ಬಸ್‌ ಸೇವೆ ಪುನರಾರಂಭಗೊಂಡಿದೆ. ರಾಜ್ಯದಲ್ಲಿ ಇನ್ನೂ ಹೆಚ್ಚಿನ ವಿಮಾನ ಸೇವೆ ಆರಂಭಿಲಾಗುವುದು.

Advertisement

ವೆಂಕಯ್ಯ ನಾಯ್ಡು ತಿಂಗಳ ವೇತನ ದೇಣಿಗೆಗೆೆ
ಪ್ರವಾಹ ಪೀಡಿತರಿಗೆ ನಿರಂತರವಾಗಿ ನೆರವು ಹರಿದು ಬರುತ್ತಿದೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಒಂದು ತಿಂಗಳ ವೇತನವನ್ನು ದೇಣಿಗೆಯಾಗಿ ನೀಡಿದ್ದಾರೆ. ನಿರಾಶ್ರಿತರಿಗೆ ಅಗತ್ಯದ ವೈದ್ಯಕೀಯ ಸಹಾಯ ನೀಡಲು ಮಹಾರಾಷ್ಟ್ರದ 81 ತಜ್ಞ ವೈದ್ಯರು ಮತ್ತು ದಾದಿಯರು ಒಳಗೊಂಡ ವಿಶೇಷ ವೈದ್ಯಕೀಯ ತಂಡವನ್ನು ಕಳುಹಿಸಿಕೊಟ್ಟಿದೆ. ಬಹುತೇಕ ಮನೆಗಳಲ್ಲಿ ಮಣ್ಣು ತುಂಬಿಕೊಂಡಿದ್ದು, ಅದನ್ನು ಕೊಠಡಿಯಿಂದ ತೆಗೆದು ಹೊರ ಹಾಕಲು ಕನಿಷ್ಠ ಒಂದು ದಿನವಾದರೂ ಬೇಕು ಎಂಬಂಥ ಸ್ಥಿತಿಯಿದೆ ಎಂದು ಸಂತ್ರಸ್ತರು ಹೇಳುತ್ತಿದ್ದಾರೆ. ಮನೆಯ ಕೊಠಡಿಗಳಲ್ಲಿ ಮಣ್ಣು ತುಂಬಿಕೊಂಡಿದೆ.

ಮನೆಯಲ್ಲಿ 35 ಹಾವು


ಅಲುವಾದ ಮನೆಯೊಂದರಲ್ಲಿ ಮಳೆಗೆ ತೇಲಿ ಬಂದ 35 ಹಾವುಗಳನ್ನು ಪತ್ತೆ ಹಚ್ಚಲಾಗಿದೆ. ಆಲುವಾದ ದೀಪಾ ಅವರು ನಿರಾಶ್ರಿತರ ಶಿಬಿರದಿಂದ ಮನೆಗೆ ವಾಪಸಾದಾಗ ಮನೆಯಲ್ಲಿ 35 ಹಾವುಗಳು ಇರುವುದನ್ನು ಕಂಡರು. ಮನೆಯ ಬಾಗಿಲಿನಲ್ಲಿ, ಗ್ಯಾಸ್‌ ಸಿಲಿಂಡರ್‌ ಮೇಲೆ, ಪಾತ್ರೆಗಳಲ್ಲಿ ಹಾವುಗಳು ಪತ್ತೆಯಾದವು. ಈ ಎಲ್ಲ ಹಾವುಗಳನ್ನು ಕೊಲ್ಲಲಾಗಿದೆ ಎಂದು ದೀಪಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next