ಕಾಸರಗೋಡು ಮಾ.18: ಬಿಜೆಪಿಯ ಬೆಂಕಿ ಚೆಂಡು ಎಂದೇ ಖ್ಯಾತಿ ಪಡೆದಿರುವ ಶೋಭಾ ಸುರೇಂದ್ರನ್ ಕೊನೆಗೂ ವಿಧಾನಸಭಾ ಚುನಾವಣೆಯ ಅಭ್ಯರ್ಥಿಯಾಗಿ ಸೀಟು ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಕಾರ್ಯಕರ್ತರ ಆಕಾಂಕ್ಷೆಗೂ, ನೇತಾರರ ಆತಂಕಕ್ಕೂ ಅಂತ್ಯ ಹಾಡಲಾಗಿದೆ. ಈ ಬಾರಿ ಶೋಭಾ ಸುರೇಂದ್ರನ್‌ಗೆ ಸೀಟು ಲಭಿಸುವ ಬಗ್ಗೆ ಅನುಮಾನವಿತ್ತು. ಆದರೆ ಬಿಜೆಪಿ ಮೈತ್ರಿಕೂಟ ಕಳಕೂಟ್ಟಂನಲ್ಲಿ ಶೋಭಾ ಸುರೇಂದ್ರನ್ ಅವರು ಅಭ್ಯರ್ಥಿ ಎಂದು ಘೋಷಿಸಿದೆ.
ಇದನ್ನೂ ಓದಿ:ಜಾತಕ ದೋಷ ಪರಿಹಾರಕ್ಕಾಗಿ 13 ವರ್ಷದ ವಿದ್ಯಾರ್ಥಿಯನ್ನೇ ಮದುವೆಯಾದ ಟ್ಯೂಶನ್ ಶಿಕ್ಷಕಿ!
ತಿಂಗಳ ಬಳಿಕ ಬಿಜೆಪಿ ರಾಜಕೀಯದ ಮುಖ್ಯವಾಹಿನಿಗೆ ಬರಲು ಶೋಭಾ ಸುರೇಂದ್ರನ್‌ಗೆ ಕಳಕೂಟ್ಟಂ ವೇದಿಕೆಯಾಗಿದೆ. ಕಳಕೂಟ್ಟಂ ವಿಧಾನಸಭಾ ಕ್ಷೇತ್ರದಲ್ಲಿ ಶೋಭಾ ಸುರೇಂದ್ರನ್ ಅಭ್ಯರ್ಥಿಯಾದ ಬಗ್ಗೆ ರಾಜ್ಯ ನೇತೃತ್ವಕ್ಕೆ ಪೂರ್ಣ ತೃಪ್ತಿಯಿಲ್ಲದಿದ್ದರೂ ಬಿಜೆಪಿ ನೇತಾರರ ಮಧ್ಯೆ ಇರುವ ಭಿನ್ನಾಭಿಪ್ರಾಯ ತಾತ್ಕಾಲಿಕ ಅಂತ್ಯ ಕಂಡಿದೆ. ಚುನಾವಣೆಯಲ್ಲಿ ಒಗ್ಗೂಡಿ ಪ್ರಚಾರ ನಡೆಸುವುದಾಗಿ ನೇತಾರರು ತಿಳಿಸಿದ್ದಾರೆ.
ರಾಜ್ಯ ಸಮಿತಿಯ ಪುನರ್ ರಚನೆಯ ಬಳಿಕ ಪಕ್ಷದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ ಶೋಭಾ ಸುರೇಂದ್ರನ್ ಇತ್ತೀಚೆಗೆ ಪಕ್ಷದಲ್ಲಿ ಸಕ್ರಿಯವಾಗಿದ್ದರೂ ಸೀಟು ನೀಡಲು ಬಿಜೆಪಿ ಹೈಕಮಾಂಡ್ ಮಧ್ಯೆ ಪ್ರವೇಶಿಸಿತ್ತು. ಈ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಶೋಭಾ ಸುರೇಂದ್ರನ್ ಈ ಮೊದಲು ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಶೋಭಾ ಸುರೇಂದ್ರನ್ ಅವರ ಹೆಸರು ಸಂಭವನೀಯ ಪಟ್ಟಿಯ ಯಾದಿಯಲ್ಲೂ ಸೇರ್ಪಡೆಗೊಳಿಸಿರಲಿಲ್ಲ ಎಂದು ರಾಜ್ಯ ನೇತಾರರು ಸ್ಪಷ್ಟೀಕರಣ ನೀಡಿದ್ದರು.
ಅವಗಣನೆ ಬಗ್ಗೆ ರಾಜ್ಯ ಬಿಜೆಪಿ ವಿರುದ್ಧ ಪ್ರಧಾನಿಯವರೆಗೂ ದೂರು ನೀಡಿದ್ದರೂ ಕೆಲವು ದಿನಗಳ ಹಿಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಬಹಿರಂಗಗೊಳಿಸಿದ್ದರು. ಮೊದಲಿಗೆ ಬಿಡುಗಡೆಗೊಳಿಸಿದ ಯಾದಿಯಲ್ಲಿ ಹೆಸರು ಸೇರ್ಪಡೆಯಾಗದಿದ್ದರೂ ಸ್ಪರ್ಧೆಗೆ ಸಿದ್ಧರಾಗಿರಬೇಕೆಂದು ಹೈಕಮಾಂಡ್ ನ ಪ್ರಮುಖ ನೇತಾರರೋರ್ವರು ಕೆಲ ದಿನಗಳ ಹಿಂದೆ ಶೋಭಾ ಅವರಿಗೆ ತಿಳಿಸಿದ್ದರು.
ಕಳಕೂಟ್ಟಂನಲ್ಲಿ ವಿ.ಮುರಳೀಧರನ್ ಸ್ಪರ್ಧಿಸುವುದಿಲ್ಲ ಎಂದು ಖಚಿತವಾದ ಹಿನ್ನೆಲೆಯಲ್ಲಿ ಬದಲಿಯಾಗಿ ಶೋಭಾ ಸುರೇಂದ್ರನ್ ಈ ಕ್ಷೇತ್ರದಲ್ಲಿ ಸ್ಪರ್ಧಾ ಕಣಕ್ಕಿಳಿಯುವರೇ ಎಂಬ ಪ್ರಶ್ನೆ ಎದುರಾಗಿತ್ತು. ಆದರೆ ರಾಜ್ಯ ನಾಯಕತ್ವ ಶೋಭಾ ಸುರೇಂದ್ರನ್‌ಗೆ ಸೀಟು ನೀಡುವ ಬಗ್ಗೆ ಅಸಮಾಧಾನ ಹೊಂದಿತ್ತು. ತುಷಾರ್ ವೆಳ್ಳಾಪಳ್ಳಿ ಅವರನ್ನು ಸ್ಪರ್ಧಾ ಕಣಕ್ಕಿಳಿಸುವ ಬಗ್ಗೆ ಪ್ರಚಾರ ಮಾಡಲಾಗಿತ್ತು. ಇದೀಗ ಬಿಜೆಪಿ ಶೋಭಾ ಸುರೆಂದ್ರನ್ ಅವರನ್ನು ಕಳಕೂಟ್ಟಂನಲ್ಲಿ ಸ್ಪರ್ಧೆಗಿಳಿಸಲು ತೀರ್ಮಾನಿಸಿದೆ.
ಈ ಹಿಂದೆ ಸ್ಪರ್ಧಿಸಿದ ಕ್ಷೇತ್ರಗಳಲೆಲ್ಲಾ ಬಿಜೆಪಿ ಮತವನ್ನು ಹೆಚ್ಚಿಸಿರುವ ಇತಿಹಾಸವುಳ್ಳ ಶೋಭಾ ಸುರೇಂದ್ರನ್ ಕಳಕೂಟ್ಟಂನಲ್ಲಿ ಈ ಬಾರಿ ಗೆಲುವು ಸಾಧಿಸುವರೇ ಎಂಬ ಪ್ರಶ್ನೆಗೆ ಉತ್ತರ ಎ.6 ರಂದು ಮತದಾರರು ನೀಡಲಿದ್ದಾರೆ.