Advertisement

ಕಾಸರಗೋಡಿನಲ್ಲೂ ಕೊರೊನಾ ವೈರಸ್ ಸೋಂಕು ತಗುಲಿದ ಮೂರನೇ ಪ್ರಕರಣ ಪತ್ತೆ

09:58 AM Feb 04, 2020 | Nagendra Trasi |

ಮಂಗಳೂರು: ಕೇರಳದಲ್ಲಿ ಕೊರೊನಾ ವೈರಸ್ ನ ಎರಡನೇ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಕಾಸರಗೋಡಿನ ಕಾಂಞಗಾಡ್ ನಲ್ಲಿ ಮೂರನೇ ವ್ಯಕ್ತಿಗೆ ಕೊರೊನಾ ವೈರಸ್ ಸೋಂಕು ಇರುವುದು ಪತ್ತೆಯಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾ ಸೋಮವಾರ ಖಚಿತಪಡಿಸಿದ್ದಾರೆ.

Advertisement

ಮೂರನೇ ವ್ಯಕ್ತಿ ಕೂಡಾ ಇತ್ತೀಚೆಗೆ ಕೊರೊನಾ ವೈರಸ್ ತವರಾದ ಚೀನಾದಿಂದ ತಾಯ್ನಾಡಿಗೆ ಮರಳಿದ್ದು, ಈಗಾಗಲೇ ಚೀನಾದಿಂದ ಕೇರಳಕ್ಕೆ ಬಂದಿದ್ದ ಇಬ್ಬರು ವಿದ್ಯಾರ್ಥಿಗಳಲ್ಲಿ ಕೊರೊನಾ ವೈರಸ್ ಪತ್ತೆಯಾಗಿತ್ತು.

ಪ್ರಸ್ತುತ ರೋಗಿಗೆ ಕಾಸರಗೋಡಿನ ಕಾಂಞಗಾಡ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ರೋಗಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಈತ ಇತ್ತೀಚೆಗಷ್ಟೇ ಚೀನಾದ ವುಹಾನ್ ನಿಂದ ಕಾಸರಗೋಡಿಗೆ ಬಂದಿರುವುದಾಗಿ ವರದಿ ವಿವರಿಸಿದೆ.

ಕೇರಳದಲ್ಲಿ ಈವರೆಗೆ ಮೂರು ಕೊರೊನಾ ವೈರಸ್ ಸೋಂಕು ಪತ್ತೆ ಹಚ್ಚಲಾಗಿದೆ. ಅಲ್ಲದೇ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಸುಮಾರು ಎರಡು ಸಾವಿರ ಜನರ ಮೇಲೆ ನಿಗಾ ಇರಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಕಳೆದ ಗುರುವಾರವಷ್ಟೇ ಕೇರಳದ ತ್ರಿಶ್ಯೂರ್ ನಲ್ಲಿ ಮೊದಲ ಕೊರೊನಾ ವೈರಸ್ ರೋಗವನ್ನು ಪತ್ತೆ ಹಚ್ಚಲಾಗಿತ್ತು. ಈಕೆ ಚೀನಾದ ವುಹಾನ್ ನಿಂದ ಊರಿಗೆ ಮರಳಿದ್ದು, ಪರೀಕ್ಷೆ ನಡೆಸಿದ ವೇಳೆ ಪಾಸಿಟಿವ್ ಲಕ್ಷಣ ಪತ್ತೆಯಾಗಿತ್ತು ಎಂದು ವರದಿ ವಿವರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next